ಬಿಜೆಪಿಯವರು ಪ್ರತಿಪಕ್ಷದ ನಾಯಕನ ಸ್ಥಾನಕ್ಕೂ ದರ ನಿಗದಿ ಪಡಿಸಿರಬಹುದು- ಸಚಿವ ಎಂ. ಬಿ. ಪಾಟೀಲ ವ್ಯಂಗ್ಯ

ವಿಜಯಪುರ: ಬಿಜೆಪಿಯವರು ಪ್ರತಿಪಕ್ಷದ ನಾಯಕನ ಸ್ಥಾನಕ್ಕೂ ದರ ಫಿಕ್ಸ್ ಮಾಡಿದ್ದಾರಾ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ವ್ಯಂಗ್ಯವಾಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಆಯ್ಕೆಗೆ ಬಿಜೆಪಿ ವಿಳಂಬ ಮಾಡುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ವ್ಯಂಗ್ಯಭರಿತವಾಗಿ ಪ್ರತಿಕ್ರಿಯೆ ನೀಡಿದರು.

ಈ ಹಿಂದೆ ಮುಖ್ಯಮಂತ್ರಿ ಹುದ್ದೆಗೆ ರೂ. 2500 ಕೋ. ಕೊಡಬೇಕು ಎಂದು ಬಿಜೆಪಿಯಲ್ಲಿದ್ದವರೇ ಹೇಳಿದ್ದರು.  ಸಿಎಂ ಪಟ್ಟಕ್ಕೆ ರೂ. 2500 ಕೋ. ಕೊಡಬೇಕು ಎಂದಿದ್ದರು.  ಈಗ ಪ್ರತಿಪಕ್ಷದ ನಾಯಕನ ಸ್ಥಾನಕ್ಕೂ ನೂರಾರು ಕೋಟಿ ರೂಪಾಯಿ ಫಿಕ್ಸ್ ಮಾಡಿದ್ದಾರಾ ಯಾರಿಗೆ ಗೊತ್ತು? ಅದಕ್ಕೂ ರೂ. 150 ಕೋ. ಫಿಕ್ಸ್ ಮಾಡಿರಬಹುದು ಎಂದು ಸಚಿವರ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದರು.

ಬಜೆಟ್ ಮಂಡನೆಯ ಕುರಿತು ಕೇಂದ್ರ ಕಾನೂನು ಮತ್ತು ಸಂದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ಕಾಂಗ್ರೆಸ್ ಬಡವರ ಪರ ಇಲ್ಲ ಎಂದು ಹೇಳಿದ್ದಾರೆ ಎಂದು ಪತ್ರಕರ್ತರು ಗಮನ ಸೆಳೆದರು.  ಆಗ, ಮಾತನಾಡಿದ ಎಂ. ಬಿ. ಪಾಟೀಲ ಅವರು, ಪ್ರಹ್ಲಾದ್ ಜೋಷಿ ಅವರಿಗೆ ಬಡವರ ಬಗ್ಗೆ ಏನು ಗೊತ್ತಿದೆ? ಅನ್ನ ಭಾಗ್ಯ ಶ್ರೀಮಂತರಿಗಾ? 200 ಯುನಿಟ್ ವಿದ್ಯುತ್ ಶ್ರೀಮಂತರಿಗಾ? ಬಸ್ ಪಾಸ್ ಶ್ರೀಮಂತರಿಗಾ? ಯುವನಿಧಿ, ಗೃಹಲಕ್ಷ್ಮಿ ಯೋಜನೆಗಳು ಶ್ರೀಮಂತಿರಿಗಾ? ಎಂದು ಪ್ರಶ್ನಿಸಿದರು.  ಅಲ್ಲದೇ, ಪ್ರಹ್ಲಾದ ಜೋಷಿ ಅವರೇ ನೀವು ಕೇಂದ್ರ ಸಚಿವರಾಗಿದ್ದೀರಿ.  ತಿಳಿದವರು ಇದ್ದೀರಿ.  ನಿಮ್ಮ ಘನತೆಗೆ ತಕ್ಕಂತೆ ಮಾತನಾಡಿ.  ಸುಮ್ಮನೆ ಹೊಟ್ಟೆ ಉರಿ ಇಟ್ಟುಕೊಂಡು ಮಾತನಾಡಿದರೆ ಉಪಯೋಗ ಆಗುವುದಿಲ್ಲ ಎಂದು ಹೇಳಿದರು.

ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ

ರಾಜ್ಯ ಬಜೆಟ್ ಬಗ್ಗೆ ಮೆಚ್ಚುಗೆ

ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರು ಮಂಡಿಸಿರುವ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳು ರಾಜ್ಯಕ್ಕೆ 14ನೇ ಬಜೆಟ್ ಕೊಟ್ಟಿದ್ದಾರೆ.  ನಾವು ಅದರಲ್ಲಿ ಪ್ರಮುಖವಾಗಿ ಎರಡು ಹಂತ ಮಾಡಲಾಗಿದೆ.  ಮೊದಲನೇಯದ್ದು ಐದು ಗ್ಯಾರಂಟಿಗಳಿಗೆ ಹಣ ಕೊಡುವ ಮೂಲಕ ನುಡಿದಂತೆ ನಡೆದಿದ್ದೇವೆ.  ಅದಕ್ಕೆ ರೂ. 52 ಸಾವಿರ ಕೋಟಿ ಅಂದಾಜು ಖರ್ಚು ಆಗುತ್ತದೆ.  ಈ ವರ್ಷ ರೂ. 36 ಸಾವಿರ ಕೋಟಿ ಹಣವನ್ನು ಒದಗಿಸುವ ಕೆಲಸ‌ ಮಾಡಿದ್ದೇವೆ ಎಂದು ತಿಳಿಸಿದರು.

ಗ್ಯಾರಂಟಿ ಸ್ಕೀಂ ಗಳ ಜಾರಿಯಿಂದ ಅಭಿವೃದ್ಧಿಗೆ ಪೆಟ್ಟು ಬೀಳುತ್ತದೆ ಎಂದು ಬಹಳ‌ ಜನ ಮಾತನಾಡಿದ್ದರು.  ರೈತರಿಗೆ ರೂ. 5 ಲಕ್ಷ ವರೆಗೆ ಬಡ್ಡಿ ರಹಿತ ಸಾಲ, ರೂ. 10 ಲಕ್ಷದ ವರೆಗೆ ನೀಡಲಾಗುತ್ತಿದ್ದ ಶೇ. ರೂ. 3ರ ಬಡ್ಡಿದರದ ಸಾಲದ ಮಿತಿಯನ್ನು ರೂ. 15 ಲಕ್ಷದ ವರೆಗೆ ವಿಸ್ತರಿಸಲಾಗಿದೆ.  ಬಿಜೆಪಿ ಸರಕಾರದಲ್ಲಿ ನಿಲ್ಲಿಸಲಾಗಿದ್ದ ಕೃಷಿಹೊಂಡ ಯೋಜನೆ ಮತ್ತೆ ಪ್ರಾರಂಭ ಮಾಡಲಾಗಿದೆ.  ಕೃಷಿ, ಮಹಿಳೆಯರು, ಯುವಕರು, ಉದ್ಯಮ, ಸಮಾಜ ಕಲ್ಯಾಣ‌ ಇಲಾಖೆ, ಅಲ್ಪಸಂಖ್ಯಾತ ಇಲಾಖೆ, ಹಿಂದುಳಿದ ಇಲಾಖೆ ಎಲ್ಲದಕ್ಕೂ ನ್ಯಾಯ ಒದಗಿಸಲಾಗಿದೆ.  ಬರುವಂತಹ ಬಜೆಟ್ ನಲ್ಲಿ ಇದಕ್ಕಿಂತ ಹೆಚ್ಚಿಗೆ ಅಭಿವೃದ್ಧಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಆರ್ಥಿಕ ಶಿಸ್ತು ಕಾಪಾಡಲಾಗಿದೆ

ಈ ಬಜೆಟ್ ನಲ್ಲಿ ಆರ್ಥಿಕ ಶಿಸ್ತಿನ ಒಳಗಡೆಯೇ ಕೆಲಸ ಮಾಡಲಾಗಿದೆ.  ಬಿಜೆಪಿಯವರು ತಪ್ಪು ಕೆಲಸಗಳನ್ನು ಮಾಡಿದ್ದರು.  ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ಇತರೆಡೆ ಬಜೆಟ್ ಗಿಂತ ಹೆಚ್ಚಿನ ಹಣಕ್ಕೆ ಟೆಂಡರ್ ಕರೆದಿದ್ದರು.  ಬೆಂಗಳೂರು ಡೆವಲಪಮೆಂಟ್ ನಲ್ಲಿ ಬ್ರಷ್ಟಾಚಾರ ಆಗಿದೆ.  ಇದೆಲ್ಲವನ್ನೂ ಸಿಎಂ ಬಜೆಟ್ ಪುಸ್ತಕದಲ್ಲಿಯೇ ಎಕ್ಸಪೋಸ್ ಮಾಡುವ ಕೆಲಸ ಮಾಡಿದ್ದಾರೆ.  ಜನರಿಗೆ ಅರ್ಥ ಆಗಲಿ ಎಂದು ಬಜೆಟ್ ಪುಸ್ತಕದಲ್ಲೇ ತಿಳಿಸಲಾಗಿದೆ.  ಎಲ್ಲೆಲ್ಲಿ ಎಷ್ಟು ಟೆಂಡರ್ ಗೆ ಕರೆಯಬೇಕಿತ್ತು ಅದಕ್ಕಿಂತ ಜಾಸ್ತಿ ಟೆಂಡರ್ ಯಾಕೆ ಕರೆದಿದಾರೆ ಎಂಬುದು ಎಲ್ಲರಿಗೂ ಗೊತ್ತಾಗುತ್ತೆ.  ಸಾವಿರಾರು ಕೋಟಿ ರೂಪಾಯಿ ಹೆಚ್ಚುವರಿ ಟೆಂಡರ್ ಕರೆಯಲಾಗಿದೆ.  ನೀರಾವರಿ ಇಲಾಖೆಯಲ್ಲಿ, ಲೋಕೋಪಯೋಗಿ ಇಲಾಖೆಯಲ್ಲಿ ಹೀಗೆ ಮಾಡಲಾಗಿದೆ.  ಇದು ಏನು ತೋರಿಸುತ್ತೆ? ಯಾಕೆ ಮಾಡಿದಾರೆ? ಎಲ್ಲವೂ ಕೂಡ ಬ್ರಷ್ಟಾಚಾರ, ಹಣಕ್ಕಾಗಿ ಮಾಡಿದ್ದಾರೆ.  ಇದೆಲ್ಲವನ್ನು ಸಿಎಂ ಬಯಲಿಗೆ ಎಳೆದಿದ್ದಾರೆ ಎಂದು ಸಚಿವರು ತಿಳಿಸಿದರು.

ಜಿಲ್ಲೆಗೊಂದರಂತೆ ಇರುವ ಗೋಶಾಲೆಗಳ ರದ್ದತಿ ವಿಚಾರ

ಜಿಲ್ಲೆಗೊಂದರಂತೆ ಗೋಶಾಲೆ ಪ್ರಾರಂಭಿಸುವ ಯೋಜನೆ ರದ್ದು ಪಡಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವನಾಗಿ ಗೋಶಾಲೆಗೆ ಬೇಕಾದ ಸಂಪೂರ್ಣ ಬೆಂಬಲ‌ ನಾನೇ ಕೊಡ್ತಿದ್ದೇನೆ.  ನೀರು ನಾನೇ ಕೊಡಿಸಿದ್ದೇನೆ.  ಎಲ್ಲವನ್ನೂ ಕೊಡಿಸಿದ್ದೇನೆ.  ಬೇಕಿದ್ದರೆ ಹೋಗಿ ಅವರನ್ನೇ ಕೇಳಿ.  ಅವರೇ ಹೇಳುತ್ತಾರೆ.  ನಮ್ಮ ಜಿಲ್ಲೆಯಲ್ಲಿ ಗೋಶಾಲೆ ವಿಚಾರದಲ್ಲಿ ಇನ್ನೂ ಅದಕ್ಕೆ ಶಕ್ತಿಯನ್ನು ತುಂಬುತ್ತೇನೆ.  ಅವರು ಏನೇನು ಕೆಲಸ ಕೇಳಿದಾರೆ, ಎಲ್ಲವನ್ನೂ ಮಾಡಿ‌ಕೊಟ್ಟಿದ್ದೇನೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

Leave a Reply

ಹೊಸ ಪೋಸ್ಟ್‌