ವಿಜಯಪುರ: ಬುರಣಾಪುರ ಬಳಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಬದಲು ಲೋಕೋಪಯೋಗಿ ಇಲಾಖೆಯ ಮೂಲಕ ಟೆಂಡರ್ ಮಾಡಿಸಲು ಕಾರಣಗಳ ಕುರಿತು ತನಿಖೆ ನಡೆಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ.ಪಾಟೀಲ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯಲ್ಲಿ ಬಹಳಷ್ಟು ನ್ಯೂನ್ಯತೆಗಳಾಗಿವೆ. ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ(ಐಡಿಡಿ) ಮಾಡಬೇಕಿದ್ದ ಕೆಲಸವನ್ನು ಲೋಕೋಪಯೋಗಿ ಇಲಾಖೆಗೆ ನೀಡಿದ್ದಾರೆ. ಐಡಿಡಿ ಮಾಡಬೇಕಿದ್ದ ಟೆಂಡರ್ ಪ್ರಕ್ರಿಯೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲು ಏನು ಕಾರಣ ಎಂದು ನಾನು ಪ್ರಶ್ನಿಸಿದ್ದೇನೆ. ಶೀಘ್ರದಲ್ಲಿ ಈ ಕುರಿತು ಉತ್ತರ ಬರಲಿದೆ. ವಿಜಯಪುರ ಜೊತೆ ಶಿವಮೊಗ್ಗ ಮತ್ತು ರಾಯಚೂರು ವಿಮಾನ ನಿಲ್ದಾಣಗಳಲ್ಲಿ ನ್ಯೂನ್ಯತೆ ಕುರಿತು ವಾಸನೆ ಬರ್ತಿದೆ. ಅದೆಲ್ಲ ಇರಲಿ. ಏರಪೋರ್ಟ್ ಕೆಲಸ ನಿಲ್ಲಲ್ಲ. ಅವ್ಯವಹಾರವಾಗಿದ ಎಂದು ಹೇಳಲ್ಲ. ಆದರೆ, ಕೆಲಸಗಳ ಅನುಷ್ಠಾನದ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ಯಾಕೆ ವಹಿಸಲಾಗಿದೆ? ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಈ ವಿಮಾನ ನಿಲ್ದಾಣದಲ್ಲಿ ಆಗಿರುವ ನ್ಯೂನ್ಯತೆಗಳನ್ನು ಪತ್ತೆ ಮಾಡುತ್ತೇವೆ. ವಿಮಾನ ನಿಲ್ದಾಣ ಕಾಮಗಾರಿಗಳ ಟೆಂಡರ್ ನ್ನು ಐಡಿಡಿ(ಇನಫಾಸ್ಟ್ರಕ್ಚರ್ ಡೆವಲೆಪಮೆಂಟ್ ಡಿಪಾರ್ಟಮೆಂಟ್) ನೀಡುವ ಬದಲು ಲೋಕೋಪಯೋಗಿ ಇಲಾಖೆಗೆ ಯಾಕೆ ವಹಿಸಿದ್ದರು ಎಂಬ ಪ್ರಶ್ನೆ ಎದುರಾಗಿದೆ. ಬಹುಷಃ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಿಗೆ ನೀಡುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಈ ಕುರಿತು ಸಮಗ್ರ ತನಿಖೆ ಮಾಡುತ್ತೇವೆ. ವಿಜಯಪುರ ವಿಮಾನ ನಿಲ್ದಾಣ ಮಾದರಿ ವಿಮಾನ ನಿಲ್ದಾಣವಾಗಬೇಕು. ಏನೇನು ತಪ್ಪುಗಳಾಗಿದ್ದರೆ ಸರಿಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ವಿಜಯಪುರ ವಿಮಾನ ನಿಲ್ದಾಣದಲ್ಲಿ ಮೂಲಸೌಲಭ್ಯ ಒದಗಿಸಲು ರೂ. 80 ಕೋ. ಕೇಳಿದ್ದರು. ಅದನ್ನು ನೀಡಿದ್ದೇವೆ. ಈ ವರ್ಷ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸುತ್ತೇವೆ. ರಾತ್ರಿ ವಿಮಾನ ಸಂಚಾರಕ್ಕೆ, ಬೋಯಿಂಗ್ ವಿಮಾನ ಹಾರಾಟಕ್ಕೆ ಏನೇನು ಸೌಲಭ್ಯಗಳು ಬೇಕು ಎಲ್ಲವನ್ನೂ ಒದಗಿಸಲಾಗುವುದು. ಮುಂದಿನ ಬಾರಿ ಬಂದಾಗ ಎಲ್ಲ ಅಧಿಕಾರಿಗಳೊಂದಿಗೆ ಅಲ್ಲಿಗೆ ಭೇಟಿ ನೀಡಿತ್ತೇನೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.