ಬೆತ್ತಲೆಯಾಗಿ ಮೊಬೈಲ್ ಟವರ್ ಹತ್ತಿ ತುತ್ತತುದಿಯಲ್ಲಿ ಯುವಕನ ಹುಚ್ಚಾಟ- ಮದ್ಯ, ಗುಟ್ಕಾ ಆಮಿಷ ತೋರಿಸಿ ಕೆಳಗಿಳಿಸಿದ ಗ್ರಾಮಸ್ಖರು, ಪೊಲೀಸರು

ವಿಜಯಪುರ: ಮೊಬೈಲ್ ಟವರ್ ಹತ್ತಿದ ಯುವಕನೊಬ್ಬ ಬೆತ್ತಲೆಯಾಗಿ ಹುಚ್ಚಾಟ ತೋರಿಸುತ್ತ ಆವಾಂತರ ಸೃಷ್ಠಿಸಿದ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ.

ಬೆಳಿಗ್ಗೆಯಿಂದಲೇ ಮೊಬೈಲ್ ಟವರ್ ಮೇಲಿದ್ದ ಯುವಕ ಬೆತ್ತಲೆಯಾಗಿಯೇ ಟಾವರ್ ನ ತುತ್ತ ತುದಿಯ ಮೇಲೆ ನಿಂತು ಬೇಕಾದಂತೆ ಕೈ ಬೀಸುತ್ತಿದ್ದ.  ಈ ಸುದ್ದಿ ಇಡೀ ಗ್ರಾಮವಷ್ಟೇ ಅಲ್ಲ, ಅಕ್ಕಪಕ್ಕದ ಹಳ್ಳಿಗಳಲ್ಲಿಯೂ ಕಾಳ್ಗಿಚ್ಚಿನಂತೆ ಹರಡಿತು.  ಸುದ್ದಿ ತಿಳಿದ ಗ್ರಾಮಸ್ಥರೂ ಸೇರಿದಂತೆ ಅಕ್ಕಪಕ್ಕದ ಜನರೂ ಆ ಸ್ಥಳಕ್ಕೆ ದೌಡಾಯಿಸಿದರು.  ಮಾಹಿತಿ ಪಡೆದ ಆಲಮೇಲ ಪೊಲೀಸರು ಮತ್ತು ಇತರ ಅಧಿಕಾರಿಗಳೂ ಸ್ಥಳಕಕ್ಕೆ ಬಂದರು.

ಯುವಕನ ಹುಚ್ಚಾಟ ನೆರೆದ ಜನರ ಎದೆ ಝಲ್ ಎನಿಸುಂತಿತ್ತು.  ಕೈಯ್ಯಲ್ಲಿ ರಾಡ್ ಕೂಡ ಹಿಡಿದಿದ್ದ ಯುವಕ ತೋರಿಸುತ್ತಿದ್ದ ವಿಚಿತ್ರ ನಡವಳಿಕೆ ಜನರನ್ನು ಆತಂಕಕ್ಕೆ ದೂಡಿತ್ತು.  ಎಷ್ಟೇ ಹೇಳಿದರೂ ಆತ ಕೆಳಗಿಳಿಯಲಿಲ್ಲ.  ಟವರ್ ಮಧ್ಯಭಾಗಕ್ಕೆ ಬಂದ ಯುವಕ ಅಲ್ಲಿ ಅಳವಡಿಸಲಾಗಿದ್ದ ಯಂತ್ರೋಪಕರಣಗಳಿಗೆ ಜೋತು ಬಿದ್ದು ಹುಚ್ಚಾಟ ನಡೆಸಿದ.

ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಟವರ್ ಮೇಲೆ ಹತ್ತಿ ನಿಂತಿರುವ ಯುವಕ ಸತೀಶ

ಕೆಳಗಿದ್ದ ಗ್ರಾಮಸ್ಥರು, ಪೊಲೀಸರು ಮತ್ತು ಇತರ ಅಧಿಕಾರಿಗಳು ಬುದ್ದಿವಾದ ಹೇಳಿದರೂ ಆತ ಕಿವಿಗೆ ಹಾಕಿಕೊಳ್ಳದೇ ತನ್ನ ಹುಚ್ಚಾಟ ಮುಂದುವರೆಸಿದ್ದ.  ಇದು ಅಲ್ಲಿದ್ದ ಜನರಲ್ಲಿ ಯಾವ ಕ್ಷಣದಲ್ಲಿ ಏನಾಗಬಹುದೋ ಎಂಬ ಆತಂಕ ಸೃಷ್ಠಿಸಿತ್ತು.

ಯಾವುದೇ ಬೇಡಿಕೆ ಇಡದ ಯುವಕ

ಅಂದಹಾಗೆ ಈ ಯುವಕನ ಹೆಸರು ಸತೀಶ.  ತೆಗ್ಗಿಹಳ್ಳಿ ಇತನ ಸ್ವಗ್ರಾಮ.  ಆದರೆ, ಈತ ಬಳಗಾನೂರ ಗ್ರಾಮಕ್ಕೆ ಬಂದು ಮೊಬೈಲ್ ಟವರ್ ಹತ್ತಿದ್ದ.  ಬೆಳಿಗ್ಗೆಯಿಂದಲೇ ಈತನ ವರ್ತನೆ ಕಂಡ ಸ್ಥಳೀಯರು ಈತನೊಬ್ಬ ಮಾನಸಿಕ ಅಸ್ವಸ್ಥ ಎಂದು ಹೇಳುತ್ತಿದ್ದ ದೃಷ್ಯಗಳು ಕಂಡು ಬಂದವು.  ನೀನು ಕೆಳಗೆ ಇಳಿದು ಬಾ.  ನಿನಗ ಏನು ಬೇಕು ಹೇಳು.  ಯಾಕೆ ಟವರ್ ಹತ್ತಿದ್ದೀಯಾ ಎಂದೆಲ್ಲ ಪ್ರಶ್ನೆ ಕೇಳಿದರೂ ಆತ ಸ್ಪಷ್ಟ ಉತ್ತರ ನೀಡದೆ ಅಲ್ಲಿಯೇ ಮೈದಾನದಲ್ಲಿ ಆಟವಾಡುವಂತೆ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದ.  ಯುವಕನನ್ನು ಕೆಳಗಿಳಿಸಲು ಪೊಲೀಸರ ಮತ್ತು ಗ್ರಾಮಸ್ಥರು ಶತ ಪ್ರಯತ್ನ ಮಾಡಿದರೂ ಹಲವಾರು ಗಂಟೆಗಳ ಕಾಲ ಫಲ ನೀಡಲಿಲ್ಲ.  ಯಾರ ಮಾತನ್ನೂ ಕೇಳದೇ ಟವರ್ ಮೇಲಿಯೇ ಸತೀಶ ಕುಳಿತಿದ್ದ.

ಮದ್ಯ, ತಂಬಾಕು ಆಸೆ ತೋರಿಸಿ ಕೆಳಗಿಳಿಸಿದ ಗ್ರಾಮಸ್ಥರು, ಪೊಲೀಸರು

ಯುವಕನನ್ನು ಕೆಳಗಿಳಿಸಲು ಕೊನೆಗೂ ಐಡಿಯಾ ಮಾಡಿದ ಸ್ಥಳೀಯರು ಮತ್ತು ಪೊಲೀಸರು ನಿನಗೆ ದಾರು ಕೊಡುತ್ತೇವೆ.  ತಿನ್ನಲು ಗುಟ್ಕಾ ನೀಡುತ್ತೇವೆ ಎಂದು ಹೇಳಿದಾಗ ತನ್ನ ಹುಚ್ಚಾಟ ಬಿಟ್ಟ ಯುವಕ ಮೊಬೈಲ್ ಟವರ್ ನಿಂದ ಕೆಳಗಿಳಿದು ಬಂದ.  ಆತನನ್ನು ರಮಿಸಿ ಅಂದರೆ ಮನವೊಲಿಸಿ ಕೆಳಗಿಳಿಸುವಷ್ಟರಲ್ಲಿ ಸಂಜೆಯಾಗಿತ್ತು.  ಸುಮಾರು 200 ಅಡಿಗೂ ಹೆಚ್ಚು ಎತ್ತರದ ಟವರ್ ಮೇಲಿಂದ ಕೆಳಗಿಳಿದು ಬಂದ ಯುವಕನಿಗೆ ಬಟ್ಟೆಯಿಂದ ಮುಚ್ಚಿದ ಜನರು ಆತನನ್ನು ಗ್ರಾಮದಿಂದ ಕರೆದುಕೊಂಡು ಹೋದರು ಎಂದು ಗ್ರಾಮದ ಮೂಲಗಳು ತಿಳಿಸಿವೆ.

ಈ ಯುವಕ ಮಾನಸಿಕ ಅಸ್ವಸ್ಥನೇ ಅಥವಾ ಬೇರಾವ ಕಾರಣಕ್ಕೆ ಹೀಗೆ ಮಾಡಿದ್ದ ಎಂಬುದು ತನಿಖೆಯ ಬಳಿಕವಷ್ಟೇ ಸ್ಪಷ್ಟವಾಗಲಿದೆ.

Leave a Reply

ಹೊಸ ಪೋಸ್ಟ್‌