ಅಭಿಮಾನಿಯ ಆಸೆ ಈಡೇರಿಸಿ ಸರಳತೆ ತೋರಿದ ಸಚಿವ ಎಂ. ಬಿ. ಪಾಟೀಲ- ಹೇಗೆ ಗೊತ್ತಾ?

ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರಿಗೆ ಕಾರ್ಯಕರ್ತರು ಮತ್ತು ಅಭಿಮಾನಿಗಳೆಂದರೆ ಎಲ್ಲಿಲ್ಲದ ಪ್ರೀತಿ ಮತ್ತು ಅಭಿಮಾನ.  ಬಬಲೇಶ್ವರ ತಾಲೂಕಿನ ಶೇಗುಣಸಿ ಬಳಿ ನಡೆದ ಮಧ್ಯಾಹ್ನ ನಡೆದ ಘಟನೆಯೊಂದು ಸಚಿವರ ಸರಳತೆಗೆ ಸಾಕ್ಷಿಯಾಯಿತು.

ಶೇಗುಣಸಿ ಬಳಿ ಮುಳವಾಡ ಏತ ನೀರಾವರಿ ಹಂತ- 3ರಡಿ ಬರುವ ವಿತರಣೆ ಕಾಲುವೆಗಳ ನಿರ್ಮಾಣ ಕಾಮಗಾರಿಗಳಿಗೆ ಸಚಿವರು ಭೂಮಿಪೂಜೆ ನೆರವೇರಿಸುವ ಕಾರ್ಯಕ್ರಮ ನಡೆಯಿತು.  ಈ ಕಾರ್ಯಕ್ರಮ ಆರಂಭಕ್ಕೂ ಮುನ್ನ ವಾಹನವೊಂದರಲ್ಲಿ ಬಂದಿದ್ದ ಯುವಕನೊಬ್ಬ ಕಾರ್ಯಕ್ರಮ ಮುಗಿಯುವ ವರೆಗೂ ಅಲ್ಲಿಯೇ ನಿಂತಿದ್ದ.

ಸಚಿವ ಎಂ. ಬಿ. ಪಾಟೀಲ ಅವರು ಕಾರ್ಯಕ್ರಮದ ವೇದಿಕೆಯಿಂದ ಕೆಳಗಿಳಿದು ಬರುತ್ತಿದ್ದಂತೆ ಅವರೆದುರು ಬಂದು ಕೈಯ್ಯಲ್ಲಿದ್ದ ಟೆಂಗಿನಕಾಯಿ ತೋರಿಸಿ ಬನ್ನಿ ಎಂದು ಹೇಳಿದ.  ಏನು ವಿಷಯ ಎಂದು ಕೇಳಿದಾಗ ನನ್ನ ಹೆಸರು ಲಾಲಸಾಬ ಬಕ್ಷರಸಾಬ ಕೆಂಗಲಗುತ್ತಿ.  ನಾನು ನಂದ್ಯಾಳ ಗ್ರಾಮದವನಾಗಿದ್ದೇನೆ.  ನೀವು ಮಾಡಿರುವ ನೀರಾವರಿ ಯೋಜನೆಗಳು ನಮಗೆ ವರದಾನವಾಗಿವೆ.  ಸಜ್ಜೆಯೂ ಬೆಳೆಯದ ಭೂಮಿಯಲ್ಲಿ ಬಂಗಾರದಂಥ ಬೆಳೆಯುವಂತಾಗಿದೆ.  ರೈತರು ಆಕಳು, ಎಮ್ಮೆಗಳನ್ನು ಸಾಕುತ್ತಿದ್ದಾರೆ.  ನಾನು ರೂ. 1 ಲಕ್ಷ ಖರ್ಚು ಮಾಡಿ ಒಂದು ಹೋರಿ ತೆಗೆದುಕೊಂಡಿದ್ದೇನೆ.  ಅದರಿಂದ ನನಗೆ ಪ್ತತಿನಿತ್ಯ ಆದಾಯ ಬರುತ್ತಿದೆ. ಅದು ನನಗೆ ಆದಾಯದ ಮೂಲವೂ ಹೌದು.  ಹೀಗಾಗಿ ಈ ಹೋರಿಯನ್ನು ನೋಡಿ ಆಶೀರ್ವದಿಸಿ ಟೆಂಗಿನಕಾಯಿ ಒಡೆಯಿರಿ ಎಂದು ವಿನಂತಿ ಮಾಡಿದ.

ಮುಗ್ದ ಅಭಿಮಾನಿಯ ಪ್ರೀತಿಯ ಮನವಿಗೆ ಮನಸೋತ ಎಂ. ಬಿ. ಪಾಟೀಲರು ಆತನ ಕೈಯ್ಯಲ್ಲಿದ್ದ ಟೆಂಗಿನಕಾಯಿ ತೆಗೆದುಕೊಂಡು ಆತ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ವಾಹನದಲ್ಲಿದ್ದ ಹೋರಿಯನ್ನು ನೋಡಿ ಖುಷಿಪಟ್ಟರು.  ಅಲ್ಲದೇ, ಅಲ್ಲಿ ಒಂದೇ ಏಟಿಗೆ ಟೆಂಗಿನಕಾಯಿ ಒಡೆದು ಅಭಿಮಾನಿಯ ಅಭಿಲಾಷೆ ಈಡೇರಿಸಿದರು.  ಈ ಸಂದರ್ಭದಲ್ಲಿ ಸಚಿವರಿಗೆ ಕೃತಜ್ಞತ ಸಲ್ಲಿಸಿದ ಯುವಕ ಲಾಲಸಾಬ ಬಕ್ಷರಸಾಬ ಕೆಂಗಲಗುತ್ತಿ ಸಂತಸದಿಂದ ಹೋರಿಯಿದ್ದ ವಾಹನ ಹತ್ತಿ ಚಲಾಯಿಸಿಕೊಂಡು ತನ್ನೂರಿಗೆ ಮರಳಿದ.

ಅನಿರೀಕ್ಷಿತವಾಗಿ ನಡೆದ ಈ ಘಟನೆ ಅಲ್ಲಿ ನೆರೆದಿದ್ದ ಜನರಲ್ಲಿ ಕುತೂಹಲ ಕೆರಳಿಸಿತು.  ಅಷ್ಟೇ ಅಲ್ಲ, ಕಾರ್ಯಕ್ರಮಕ್ಕೆ ಬಂದಿದ್ದ ಜನರು ಸಚಿವ ಎಂ. ಬಿ. ಪಾಟೀಲ ಅವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

ಹೊಸ ಪೋಸ್ಟ್‌