ವಿಜಯಪುರ: ಜೆಡಿಎಸ್ ಮುಖಂಡ ಎಚ್. ಡಿ. ಕುಮಾರಸ್ವಾಮಿ ಅವರ ಪೆನ್ ಡ್ರೈವ್ ನಲ್ಲಿದೆ ಎನ್ನಲಾದ ಆಡಿಯೋ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಶೇಗುಣಸಿ ಬಳಿ ಮುಳವಾಡ ಏತ ನೀರಾವರಿ ಹಂತ- 3ರಡಿ ಬರುವ ವಿತರಣೆ ಕಾಲುವೆಗಳ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಪೆನ್ ಡ್ರೈವ್ ಬಿಡುಗಡೆ ಮಾಡಿದ ನಂತರ ಉತ್ತರಿಸುವೆ
ನಿಮ್ಮ ಕಡೆ ಪೆನ್ ಡ್ರೈವ್ ನಲ್ಲಿ ನಲ್ಲಿರುವ ಅಂಶಗಳು ಸತ್ಯವಾಗಿವೆಯಾ? ಬಿಡುಗಡೆಯಾಗುವ ಯಾವುದೇ ಪೆನ್ ಡ್ರೈವ್ ಬಗ್ಗೆ ತನಿಖೆಯಾಗಬೇಕಾಗುತ್ತದೆ. ಅದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಅದರಲ್ಲಿರುವ ಧ್ವನಿ ನಿಜವಾಗಿದೆಯಾ ಎಂಬುದನ್ನು ಕೇಳಬೇಕಾಗುತ್ತದೆ. ಮಿಮಿಕ್ರಿಯೂ ಆಗಿರಬಹುದು. ಯಾರು ಮಾತನಾಡಿದ್ದಾರೆ? ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ? ಎಲ್ಲವನ್ನು ತನಿಖೆಯಾಗಬೇಕಾಗುತ್ತದೆ. ಅವರು ಬಿಡುಗಡೆ ಮಾಡಿದ ಮೇಲೆ ಅದಕ್ಕೆ ಉತ್ತರ ನೀಡುತ್ತೇವೆ ಎಂದು ಸಚಿವರು ತಿಳಿಸಿದರು.
ವೀರಶೈವ ಲಿಂಗಾಯಿತರಿಂದ ಮೀಸಲಾತಿ ಬೇಡಿಕೆ ವಿಚಾರ
ಇದೇ ವೇಳೆ, ವೀರಶೈವ ಲಿಂಗಾಯಿತ ಸಮುದಾಯವನ್ನು ಕೇಂದ್ರ ಮೀಸಲು ಪಟ್ಟಿಗೆ ಸೇರಿಸಲು ಹೋರಾಟ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬೇಡಿಕೆಗಳು ಕಾಲಕಾಲಕ್ಕೆ ಎಲ್ಲ ಸಮುದಾಯಗಳಿಂದ ಬರುತ್ತಿವೆ. ರಾಜ್ಯದಲ್ಲಿ 2ಎ ಗೆ ಸೇರಿಸಬೇಕು. ಇತ್ತೀಚೆಗೆ 3ಡಿ ಗೆ ಸೇರಿಬೇಕು ಎಂಬ ಬೇಡಿಕೆಗಳು ಬರುತ್ತಿವೆ. ಹಾಲುಮತ ಸಮಾದವರು ಎಸ್ಟಿಗೆ ಸೇರಿಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇಂಥ ಬೇಡಿಕೆಗಳಿವೆ ಎಂದು ಅವರು ಹೇಳಿದರು.
ಗ್ಯಾರಂಟಿ ಯೋಜನೆ ಜಾರಿ ವಿಳಂಬ ವಿಚಾರ
ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಪ್ರತಿಪಕ್ಷಗಳ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ನಿಮಗೆ ಅಷ್ಟು ಗಡಿಬಿಡಿ ಏಕೆ? 2014ರಲ್ಲಿ ನರೇಂದ್ರ ಮೋದಿಯವರು 100 ದಿನಗಳಲ್ಲಿ ವಿದಶೇಗಳಿಂದ ಕಪ್ಪು ಹಣ ತಂದು ನೀವೂ ಸೇರಿದಂತೆ 130 ಕೋಟಿ ಜನರ ಅಕೌಂಟಿಗೆ ರೂ. 15 ಲಕ್ಷ ಹಣ ಹಾಕುವುದಾಗಿ ಹೇಳಿದ್ದರು. ಈಗ ಒಂಬತ್ತು ವರ್ಷಗಳಾಗಿವೆ. ಹಣ ಹಾಕಿದ್ದಾರಾ? ರೂ. 15 ಲಕ್ಷ ಹಣವನ್ನು ಬಡ್ಡಿ ಸಮೇತ ನೀಡಿದರೆ ಸುಮಾರು ರೂ. 1 ಕೋ. ಆಗುತ್ತದೆ. ಮೊದಲು ನರೇಂದ್ರ ಮೋದಿ ಅವರು ರೂ. 15 ಲಕ್ಷ ನೀಡಲಿ. ಅವರೇ ನೀಡಿದ ಭರವಸೆಯಂತೆ ಪ್ರತಿವರ್ಷ ಎರಡು ಕೋಟಿಂಯತೆ ಒಂಬತ್ತು ವರ್ಷಗಳಲ್ಲಿ 18 ಕೋಟಿ ಉದ್ಯೋಗ ಸೃಷ್ಛಿಯಾಗಲಿಲ್ಲ. ಮೊದಲು ಉದ್ಯೋಗ ಸೃಷ್ಛಿಸಿ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಹೇಳಿ. ರೈತರ ಆದಾಯ ದ್ವಿಗುಣ ಮಾಡುವದಾಗಿ ಅವರು ಹೇಳಿದ್ದರೂ ಈಡೇರಿಲ್ಲ. ನಾವು ನೀರಾವರಿ ಯೋಜನೆ ಮೂಲಕ ಅನ್ನದಾತರ ಆದಾಯ ದ್ವಿಗುಣ ಮಾಡಿದ್ದೇವೆ. ಅದನ್ನು ಬಿಟ್ಟು ಇನ್ನೂ ಎರಡು ತಿಂಗಳಾಗಿಲ್ಲ. ನಾವು ಆಗಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಮಾಡಿದ್ದೇವೆ. ಆಗಷ್ಟನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದೇವೆ. ಐದೂ ಗ್ಯಾರಂಟಿ ಮಾಡಲು ನಾವು ಬಜೆಟ್ ನಲ್ಲಿ ರೂ. 52000 ಕೋಟಿ ಹಂಚಿಕೆಗೆ ಕ್ರಮ ಕೈಗೊಂಡಿದ್ದೇವೆ. ಒಂಬತ್ತು ವರ್ಷ ತಾಳಿದವರು ಎರಡು ತಿಂಗಳು ತಾಳಲು ಆಗುವುದಿಲ್ಲವೇ ಎಂದು ಎಂ. ಬಿ. ಪಾಟೀಲ ಪ್ರಶ್ನಿಸಿದರು.
ಹಿಂದೂ ಮಠಗಳ ಕಡೆಗಣನೆ, ಅಲ್ಪಸಂಖ್ಯಾತರು, ಕ್ರಿಶ್ಚಿಯನ್ ಸಮುದಾಯಕ್ಕೆ ಹೆಚ್ಚಿನ ಅನುದಾನ ವಿಚಾರ
ಇದೇ ವೇಳೆ, ಮಠಗಳಿಗೆ ಹಿಂದೆ ಬಿಜೆಪಿ ಸರಕಾರ ಮಂಜೂರು ಮಾಡಿದ್ದ ಅನುದಾನವನ್ನು ಈ ಬಜೆಟ್ ನಲ್ಲಿ ರದ್ದು ಪಡಿಸಿರುವ ಕುರಿತು ಮಾಜಿ ಸಚಿವ ಸಿ. ಸಿ. ಪಾಟೀಲ ನೀಡಿರುವ ಹೇಳಿಗೆ ಸಚಿವರು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದರು.
ಮಠಮಾನ್ಯಗಳ ಬಗ್ಗೆ ನಮಗೆ ಅಪಾರವಾದ ಗೌರವವಲಿದೆ. ಈ ವರ್ಷ ನಾವು ಗ್ಯಾರಂಟಿ ಸ್ಕೀಂಗಳಿಗೆ ಆದ್ಯತೆ ನೀಡಿದ್ದೇವೆ. ಮುಂದಿನ ವರ್ಷ ಎಲ್ಲ ಮಠಗಳಿಗೆ ಅನುದಾನ ನೀಡುತ್ತೇವೆ. ಸಿ. ಸಿ. ಪಾಟೀಲ ಅವರು ತಿಳಿಸಿದರೆ ಅವರ ಮಠಗಳಿಗೂ ಅನುದಾನ ನೀಡುತ್ತೇವೆ. ನಾವು ಭೇದಭಾವ ಮಾಡುವುದಿಲ್ಲ. ಹಿಂದೂಗಳ ಮಠಗಳಿಗೆ, ಕ್ರಿಶ್ಚಿಯನ್ ರ ಚರ್ಚುಗಳಿಗೆ, ಮುಸ್ಲಿಮರ ಮಸೀದಿಗಳಿಗೆ, ಜೈನರ ಬಸದಿಗಳಿಗೆ, ಬೌದ್ಧವಿಹಾರಗಳಿಗೆ ಹಣಕಾಸಿನ ನೆರವು ನೀಡುತ್ತೇವೆ. ಎಲ್ಲರನ್ನು ನಾವು ಸಮಾನವಾಗಿ ಕಾಣುತ್ತೇವೆ. ಎಲ್ಲರಿಗೂ ಹಣಕಾಸು ನೀಡುತ್ತೇವೆ. ಸಿ. ಸಿ. ಪಾಟೀಲರು ಎಂಟು ತಿಂಗಳು ತಾಳ್ಮೆಯಿಂದರಲಿ ಎಂದು ಅವರು ಸಲಹೆ ನೀಡಿದರು.
ಬಿಜೆಪಿ ಸರಕಾರದಲ್ಲಿ ಬಜೆಟ್ ನಲ್ಲಿ ನಿಗದಿಗಿಂತ ಹೆಚ್ಚು ಹಣ ಖರ್ಚು ಮಾಡಿದ್ದಾರೆ
ಸಿ. ಸಿ. ಪಾಟೀಲರು ತಮ್ಮ ಬಜೆಟ್ ಗಿಂತ್ ನಾಲೈದು ಸಾವಿರ ಕೋಟಿ ರೂ. ಹೆಚ್ಚಿಗೆ ಖರ್ಚು ಮಾಡಿದ್ದಾರೆ. ಸಿ. ಸಿ. ಪಾಟೀಲರು ಯಾಕೆ ಮಾಡಿದ್ರು? ಅದೇ ರೀತಿ ನೀರಾವರಿ ಇಲಾಖೆಯಲ್ಲಿ ಯಾಕೆ ರೂ. 10 ರಿಂದ 15 ಸಾವಿರ ಕೋ. ಹೆಚ್ಚಿಗೆ ಖರ್ಚು ಮಾಡಿದ್ದಾರೆ? ಜನರನ್ನು ಮರಳು ಮಾಡಿದ್ದೀರಿ. ಅದರ ಉದ್ದೇಶ ಏನಿದೆ? ಅಷ್ಟೇ ಅಲ್ಲ, ಬಿಬಿಎಂಪಿ ಯಲ್ಲೂ ಭ್ರಷ್ಟಾಚಾರ ನಡೆದಿದೆ. ಲೂಟಿ ಹೊಡೆಯಲು ನೀವು ಬಜೆಟ್ ಗಿಂತ ಹೆಚ್ಚಿನ ಅನುದಾನ ಮಾಡಿದ್ದೀರಿ. ನೀವು ಮಾಡಿರುವ ಅಕ್ರಮ, ಅಶಿಸ್ತನ್ನು ನಮ್ಮ ಮುಖಾ್ಯಮಂತ್ರಿಗಳು ಬಜೆಟ್ ನಲ್ಲಿ ಹೇಳಿದ್ದಾರೆ. ಈಗ ಅವರ ಮುಖ ಉಳಿದಿಲ್ಲ. ಅವರ ನಡುವಳಿಕೆಯನ್ನು ಸಂಪೂರ್ಣವಾಗಿ ಎಕ್ಸಫೋಸ್ ಮಾಡಿದ್ದಾರೆ ಎಂದು ಸಚಿವ ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದರು.