ಕಲುಷಿತ ನೀರು ಪೂರೈಕೆ ಬಗ್ಗೆ ಎಚ್ಚರಿಕೆ ವಹಿಸಿ: ಸಕಾಲದಲ್ಲಿ ಕುಡಿಯುವ ನೀರು ಪೂರೈಸಲು ಜಲಮೂಲ, ಟ್ಯಾಂಕರ್ ವ್ಯವಸ್ಥೆ ಮಾಡಿ- ಡಿಸಿ ಭೂಬಾಲನ್ ಟಿ

ವಿಜಯಪುರ: ಜಿಲ್ಲೆಯ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಹಳ್ಳಿ ಹಾಗೂ ವಾರ್ಡಗಳಲ್ಲಿ ಸಕಾಲದಲ್ಲಿ ಕುಡಿಯುವ ನೀರು ಪೂರೈಸಲು ಜಲಮೂಲಗಳನ್ನು ಗುರುತಿಸಿಟ್ಟುಕೊಳ್ಳಬೇಕು.  ಜಲಮೂಲವಿಲ್ಲದೆಡೆ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಅವಶ್ಯಕ ಸಿದ್ಧತೆ ಮಾಡಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಭೂಬಾಲನ್ ಟಿ. ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಕುಡಿಯುವ ನೀರಿನ ಪರಿಸ್ಥಿತಿ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮುಂಗಾರು ಮಳೆ ವಿಳಂಬದಿಂದ ಅವಶ್ಯವಿದ್ದ ಕಡೆ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರನ್ನು ಈಗಾಗಲೇ ಕೆಲವು ಕಡೆ ಪೂರೈಸಲಾಗುತ್ತಿದೆ.

ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ ವಾರ್ಡ್ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು ಪೂರೈಸಲು ಒಂದು ವಾರದೊಳಗಾಗಿ ಖಾಸಗಿ ಟ್ಯಾಂಕರ್ ಗಳನ್ನು ಗುರುತಿಸಿಟ್ಟುಕೊಳ್ಳುವಂತೆ ಸೂಚನೆ ನೀಡಿದ ಅವರು, ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾನಾ ಇಲಾಖೆಯ ಅಧಿಕಾರಿಗಳು ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ವಿಜಯಪುರ ನೂತನ ಡಿಸಿ ಭೂಬಾಲನ್ ಟಿ ಅಧಿಕಾರಿಗಳೊಂದಿಗೆ ಕುಡಿಯುವ ನೀರು ಪೂರೈಕೆ ಕುರಿತು ಸಭೆ ನಡೆಸಿದರು

ನೀರಿನ ಜಲ ಮೂಲಗಳಿರುವ ಸರಕಾರಿ ಶಾಲೆ, ಆಸ್ಪತ್ರೆ, ವಸತಿ ನಿಲಯ, ಕೊಳವೆ ಬಾವಿಗಳನ್ನು ಮತ್ತು ನಗರ ಹಾಗೂ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿಟ್ಟುಕೊಳ್ಳಬೇಕು.

ಜನರಿಗೆ ಸ್ವಚ್ಛ ಕುಡಿಯುವ ನೀರು ಪೂರೈಸಬೇಕು. ನೀರು ಪೂರೈಸುವ ಮೊದಲು ನೀರಿನ ಸಂಗ್ರಾಹಾಗಾರಗಳನ್ನು ಪರಿಶೀಲಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಯತವಾಗಿ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಸಂಗ್ರಹಿತ ನೀರನ್ನು ಪರೀಕ್ಷಿಸಿ ಪರಿಶೀಲಿಸಿ ಕುಡಿಯಲು ಬಳಸಲು ಯೋಗ್ಯವಾಗಿದೆ ಎಂದು ತಿಳಿದುಕೊಂಡು ನೀರು ಪೂರೈಸಬೇಕು. ಯಾವುದೇ ಕಾರಣಕ್ಕೂ ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕಲುಷಿತ ನೀರು ಪೂರೈಕೆಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ,ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.

ಕುಡಿಯುವ ನೀರನ್ನು  ಬಯೋಲಾಜಿಕಲ್  ಅಥವಾ ಕೆಮಿಕಲ್ ಪ್ರಯೋಗಕ್ಕೊಳಪಡಿಸಿಯೇ ನೀರು ಪೂರೈಸಲು ಕ್ರಮ ವಹಿಸಬೇಕು. ಕುಡಿಯಲು ಯೋಗ್ಯ ಎನಿಸಿದ ತರುವಾಯವೂ ಸಹ ಪೂರೈಸಿದ ನೀರಿನಲ್ಲಿ ಏನಾದರೂ ಸಮಸ್ಯೆ ಇದೆ ಎಂದು ಖಚಿತಪಡಿಸಿಕೊಳ್ಳಬೇಕು.  ವಾಂತಿ ಭೇದಿ ಪ್ರಕರಣಗಳು ಕಂಡು ಬಂದರೆ ತಕ್ಷಣ ಮುಂಜಾಗ್ರತಾ ಕ್ರಮ ತೆಗದುಕೊಳ್ಳಬೇಕು ಎಂದು ಹೇಳಿದರು.

ಮುಖ್ಯಮಂತ್ರಿಗಳು ಕುಡಿಯುವ ನೀರಿನ ಕುರಿತು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಈಗಾಗಲೇ ಸೂಚಿಸಿದ್ದಾರೆ. ಕುಡಿಯುವ ನೀರಿನ ವಿಷಯದಲ್ಲಿ  ಯಾವುದೇ ಲೋಪ ಉಂಟಾಗದಂತೆ ಕಾರ್ಯ ನಿರ್ವಹಿಸಬೇಕು. ನಿಷ್ಕಾಳಜಿ ವಹಿಸಬಾರದು. ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಮೂಲಕ  ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.

ಕುಡಿಯುವ ನೀರು ಪೂರೈಸಲು ಸಮರ್ಪಕ ವಿದ್ಯುತ್ ಪೂರೈಸಬೇಕು.  ನೆರಹಾವಳಿ ಸಂದರ್ಭ ಎದುರಾದಲ್ಲಿ ಮುಂಜಾಗ್ರತಾ ಕ್ರಮವಾಗಿ ಅವಘಡಗಳ ಪ್ರದೇಶವನ್ನು ಗುರುತಿಸಿಟ್ಟುಕೊಂಡು, ಸಂಭವನೀಯ ಅವಘಡಗಳನ್ನು ತಪ್ಪಿಸಲು ಪೂರ್ವ ಯೋಜನೆ ಸಿದ್ಧಪಡಿಸಿಕೊಳ್ಳುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಅತಿವೃಷ್ಟಿಯಿಂದ ಜನ ಜಾನುವಾರಗಳ ಹಾನಿಯಾದ ಸಂದರ್ಭದಲ್ಲಿ ನಿಯಮಾನುಸಾರ ಅಗತ್ಯ ತುರ್ತು ಕ್ರಮ ತೆಗೆದುಕೊಂಡು 24 ಗಂಟೆಯೊಳಗೆ ಪರಿಹಾರ ಒದಗಿಸಬೇಕು. ಮನೆ ಹಾನಿ ವಿವರ ಮಾಹಿತಿಯನ್ನು ತಕ್ಷಣ ತ್ರಿಸದಸ್ಯ ಸಮಿತಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಅತಿವೃಷ್ಟಿ ಸಂದರ್ಭ ಉಂಟಾದರೆ ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಿರಬೇಕು ಎಂದು ಹೇಳಿದರು.

ಜಿಲ್ಲಾ ಪಮಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಮುಂಬರುವ ದಿನಗಳಲ್ಲಿ ಇದೇ ಸಮಸ್ಯೆಯಾದರೆ ಖಾಸಗಿ ಕೊಳವೆ ಬಾವಿ ಹಾಗೂ ಟ್ಯಾಂಕರ್ ಮೂಲಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಹಾಗೂ ಅಗತ್ಯವಿದ್ದಲ್ಲಿ ಕೊಳವೆ ಬಾವಿ ಸ್ವಚ್ಛಗೊಳಿಸುವ ಕಾಮಗಾರಿ ಕೈಗೊಳ್ಳಲು, ತುರ್ತು ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.

ಸರಕಾರ ಸಹ ಕುಡಿಯುವ ನೀರಿನ ವಿಷಯದಲ್ಲಿ ಬಹಳ ಗಂಭೀರವಾಗಿದೆ. ಜುಲೈ ಅಂತ್ಯದವರೆಗೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಬಂದೊದಗಿದರೆ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಗ್ರಾಮ-ತಾಲೂಕ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿಯು ವ್ಯವಸ್ಥಿತವಾಗಿ  ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಜನವರಿ 2023 ರಿಂದ ಜುಲೈ 10ರವರೆಗೆ ವಾಡಿಕೆ ಮಳೆ 173 ಮಿಮೀ ಇದ್ದು,147.40 ಮೀ.ಮೀ ಮಳೆ ಆಗಿದ್ದು, ಶೇ. 15ರಷ್ಟು ಕಡಿಮೆ ಆಗಿದೆ. ಜೂನ್ ಮಾಹೆಯಲ್ಲಿ ವಾಡಿಕೆ ಮಳೆ 90 ಮಿಮೀ ಇದ್ದು ಜಿಲ್ಲಾದ್ಯಂತ 38 ಮಿಮೀ ಮಾತ್ರ ಮಳೆಯಾಗಿದ್ದು, ಶೇ.59ರಷ್ಟು ಕಡಿಮೆಯಾಗಿರುತ್ತದೆ. ಮುಂಗಾರು ಹಂಗಾಮಿಗೆ ಮೊದಲ ಜೂನ್ ದಿಂದ 10 ಜುಲೈವರೆಗ 110 ಮಿಮೀ ವಾಡಿಕೆ ಮಳೆಗೆ 58 ಮಿಮೀ ಮಳೆಯಾಗಿದ್ದು ಶೇ.47ರಷ್ಟು ಕೊರತೆಯಾಗಿರುತ್ತದೆ. ಮುಂಗಾರು ಬಿತ್ತನೆ ಕ್ಷೇತ್ರ 736794 ಹೇಕ್ಟೆರ್ ಗುರಿ ಹೊಂದಿದ್ದು, ಮುಂಗಾರು ಹಂಗಾಮಿನಲ್ಲಿ ತೊಗರಿ,ಹೆಸರು,ಉದ್ದು,ಮುಸುಕಿನ ಜೋಳ, ಸೂರ್ಯಕಾಂತಿ, ಸಜ್ಜೆ ಕಬ್ಬು ಮುಖ್ಯ ಬೆಳೆಗಳಾಗಿರುತ್ತವೆ. ಇಲ್ಲಿಯವರೆಗೆ 103433 ಹೇಕ್ಟೆರ್‍ಗಳಲ್ಲಿ ಶೇ.14.04 ರಷ್ಟು ಬಿತ್ತನೆಯಾಗಿದೆ. ಬಿತ್ತನೆ ಬೀಜ 9759.99 ಕ್ವಿಂಟಾಲ ಮತ್ತು ರಸಗೊಬ್ಬರ 74203.61 ಮೆಟ್ರಿಕ್ ಟನ್‍ನಷ್ಟು ದಾಸ್ತಾನು ಇರುತ್ತದೆ. ಸಧ್ಯಕ್ಕೆ ಕೊರತೆ ಇರುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಮತಿ ರೂಪಾ ಎಲ್ ಅವರು ಮಾಹಿತಿ ನೀಡಿದರು. ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆಯಾಗದಂತೆ ದಾಸ್ತಾನಿಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

 

 

ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಹಾಗೂ ಖಾಸಗಿ ಕೊಳವೆ ಬಾವಿಗಳ ಮೂಲಕ ಇಂಡಿ ತಾಲೂಕಿನ ಬಬಲಾದದ ಅಡವಿ ವಸತಿ, ಹಳಗುಣಕಿ ಅಗಸನಾಳ ಮುಲ್ಲಾ ವಸತಿ, ಅಂಜುಟಗಿ, ಅಂಜುಟಗಿ ಪ. ಜಾ/ ಪ. ಪಂ. ಓಣಿ, ಚಾವಡಿಹಾಳ, ತೆಗ್ಗಿನಹಳ್ಳಿ, ಖೇಡಗಿ ಹಳೆ ಊರು ಮತ್ತು ಖೇಡಗಿ ಹೊಸ ಊರು, ಚಡಚಣ ತಾಲೂಕಿನ ಹಲಸಂಗಿಯ ಸರ್ಕಾರಿ ಆಸ್ಪತ್ರೆ, ಜಿಗಜೀವಣಗಿಯ ಹೈಸ್ಕೂಲ್, ಕಲ್ಯಾಳ ತಾಂಡಾ, ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಎಲ್. ಟಿ. 2, ಕೊವಳ್ಳಿ ವಸ್ತಿ, ಕೊನದಿ ವಸ್ತಿ, ಜಾಲಗೇರಿ, ಇಂದಿರಾ ನಗರ ಮತ್ತು ದಾಸೂ ವಸ್ತಿ, ಮುದ್ದೇಬಿಹಾಳ ತಾಲೂಕಿನ ಗ್ರಾಮ ಗೋನಾಳ ಎಸ್. ಎಚ್., ಸಿಂದಗಿ ತಾಲೂಕಿನ ಬೆನಕೂಟಗಿ ತಾಂಡಾ ಹಾಗೂ ಹಂದಿಗನೂರ, ಆಲಮೇಲ ತಾಲೂಕಿನ ಸೋಮಜಾಳ, ಮಲಘಾಣ, ಮದರಿ, ದೇವರನಾವದಗಿ, ತಾಳಿಕೋಟಿಯ ಲಕ್ಕುಂಡಿ,   ಹಾಳಗುಂಡಕನಾಳ ಸೇರಿದಂತೆ ನೀರಿನ ಅಭಾವ ಅತೀ ಕಡಿಮೆ ಇರುವ ಗ್ರಾಮಗಳಲ್ಲಿ ಟ್ಯಾಂಕರ್ ನಿಂದ ಮತ್ತು ಖಾಸಗಿ ಕೊಳವೆ ಬಾವಿಯಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

ಪ್ರಾಣಿಗಳಲ್ಲಿ ಕಂಡುಬರುವ ಚರ್ಮಗಂಟು ರೋಗಕ್ಕೆ ಜಿಲ್ಲೆಯಲ್ಲಿ ಎಮ್ಮೆ ಹೊರತುಪಡಿಸಿ ಉಳಿದ ಎರಡು ಲಕ್ಷ ಎರಡು ಸಾವಿರ ಒಂದು ನೂರ ಹನ್ನೊಂದು ಜಾನುವಾರಗಳಿಗೆ ಶೇ. 76ರಷ್ಟು ಈವರೆಗೆ ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಕುರಿ ಮತ್ತು ಮೇಕೆಗಳಿಗೆ ಕರುಳು ಬೇನೆ ಲಸಿಕೆಯನ್ನು ಜಿಲ್ಲೆಯಾದ್ಯಂತ ಜೂನ್ ಮಾಹೆಯಿಂದ ನೀಡಲಾಗುತ್ತಿದೆ ಎಂದು ಜಿಲ್ಲಾ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರಾದ ಡಾ.ಅಶೋಕ ಎಸ್.ಗೋಣಸಗಿ ಸಭೆಗೆ ಮಾಹಿತಿ ನೀಡಿದರು.

ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ನೀರಿನ ಜಲ ಮೂಲಗಳ ಗುರುತಿಸಿ, ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಲು  ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಕುಡಿಯುವ ನೀರಿಗೆ ಸಂಬಂಧಿಸಿದ ಅನುದಾನದ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಇಂಡಿ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡದೆ, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌