ವಿಜಯಪುರ: ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರ ಜೀವನವನ್ನೇ ಬದಲಿಸುತ್ತದೆ ಎಂದು ವಿಜಯಪುರ ಎಎಸ್ಪಿ ಶಂಕರ ಮಾರಿಹಾಳ ಹೇಳಿದ್ದಾರೆ.
ವಿಜಯಪುರ ತಾಲೂಕಿನ ಬರಟಗಿ ಗ್ರಾಮದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ 1 ಮತ್ತು 2ರ ಆಶ್ರಯದಲ್ಲಿ ಆಯೋಜಿಸಲಾಗಿದ್ದ 2023ರ ವಿಶೇಷ ಸೇವಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಯಂ ಸೇವಕರಾಗಿದ್ದಾಗ ಇಷ್ಟಪಟ್ಟು ಇನ್ನೂ ಕೆಲವರು ಕಷ್ಟಪಟ್ಟು ಮಾಡಿದ ಶ್ರಮದಾನ, ಕಾರ್ಯಕ್ರಮಗಳ ಆಯೋಜನೆ, ಯೋಜನಾಧಿಕಾರಿಗಳ ಮಾರ್ಗದರ್ಶನ ಎಲ್ಲವೂ ಮುಂದೊಂದು ದಿನ ಶಿಬಿರಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ಮಾಡುತ್ತದೆ. ವಿದ್ಯಾರ್ಥಿ ಜೀವನವೆಂದರೆ ಕೇವಲ ಓದು, ಪಾಠ, ಪ್ರವಚನ, ಪರೀಕ್ಷೆ ಮಾತ್ರವಲ್ಲ. ಬದಲಿಗೆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಾಗಬೇಕು. ಈ ಕೆಲಸ ಕಾಲೇಜುಗಳಲ್ಲಿ ಎನ್ಎಸ್ಎಸ್ ಘಟಕದಿಂದ ಮಾತ್ರ ಸಾಧ್ಯ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ನಿಯಮಾನಸಾರ ಪಟ್ಟೇತರ ಚಟುವಟಿಕೆಗಳಲ್ಲಿ ಭಾಗಿಯಾದಲ್ಲಿ ಮಾತ್ರ ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಆಗಲು ಸಾಧ್ಯ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ. ಎಸ್. ಬೆಳಗಲಿ, ನೋಡಲ್ ಅಧಿಕಾರಿ ಪ್ರಕಾಶ ರಾಥೋಡ ಮತ್ತು ಎನ್ಎಸ್ಎಸ್ ಯೋಜನಾಧಿಕಾರಿ ವಿಜಯಕುಮಾರ ತಳವಾರ ಮತ್ತು ಪ್ರದೀಪ್ ಕುಂಬಾರ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಚೈತ್ರ ಮನಗೊಂಡ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಅಖಿಲೇಶ ವಂದಿಸಿದರು.