ಸಿಹಿ ನೀರು ಅಲಂಕಾರಿಕ ಮೀನು ಸಾಕಾಣಿಕೆ ಕುರಿತು ಮಹಿಳೆಯರಿಗೆ ತರಬೇತಿ ಕಾರ್ಯಕ್ರಮ

ವಿಜಯಪುರ: ಮೀನು ಅಧಿಕ ಜನಪ್ರೀಯಗೊಳ್ಳುತ್ತಿರುವ ಆಹಾರವಾಗಿದ್ದು, ದೇಶದ ಹೆಚ್ಚುತ್ತಿರುವ ಜನಸಂಖ್ಯೆಗೆ ಪೌಷ್ಠಿಕಾಂಶಭರಿತ ಹಾಗೂ ಕಡಿಮೆ ವೆಚ್ಚದ ಸಮತೋಲ ಆಹಾರವನ್ನು ಇದರಿಂದ ಒದಗಿಸಬಹುದಾಗಿದೆ ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ, ವಿಜ್ಞಾನ ವಿಭಾಗದ ಸಂಯೋಜಕಿ ಡಾ. ರೇಣುಕಾ ಮೇಟಿ  ಹೇಳಿದರು.

ನಗರದ ಹೊರ ವಲಯದ ಭೂತನಾಳ ಕೆರೆಯ ಬಳಿ ಇರುವ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದಲ್ಲಿ ಸಿಹಿನೀರು ಅಲಂಕಾರಿಕ ಮೀನು ಸಾಕಾಣಿಕೆ ವಿಷಯದ ಕುರಿತು ಆಯೋಜಿಸಲಾಗಿದ್ದ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಜನಸಂಖ್ಯೆಗೆ ತಕ್ಕಂತೆ ಸಮತೋಲಿತ ಆಹಾರ ನೀಡುವುದು ಇಂದಿನ ಪರಿಸ್ಥಿತಿಯಲ್ಲಿ ದೊಡ್ಡ ಸವಾಲಾಗಿದೆ ಎಂದು ಅವರು ಹೇಳಿದರು.

ಬೀದರಿನ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯದ ವಿಸ್ತರಣೆ ನಿರ್ದೇಶಕ ಡಾ. ಎನ್. ಎ. ಪಾಟೀಲ ಮಾತನಾಡಿ, ಮಹಿಳೆಯರು ಕಡಿಮೆ ಸ್ಥಳದಲ್ಲಿ, ಕಡಿಮೆ ಖರ್ಚಿನಲ್ಲಿ ಅಲಂಕಾರಿಕ ಮೀನು ಸಾಕಾಣಿಕೆ ಮಾಡುವುದರಿಂದ ಸ್ಥಳಿಯವಾಗಿ ಲಾಭ ಗಳಿಸಬಹುದು.  ಈ ಕ್ಷೇತ್ರದಲ್ಲಿ ಉದ್ಯೊಮ ಪ್ರಾರಂಭಿಸಲು ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ರ್ಯ ಸಂಪದ ಯೋಜನೆಯಡಿಯಲ್ಲಿ ಸಹಾಯಧನ ಲಭ್ಯವಿದೆ.  ಇದನ್ನು ಮಹಿಳೆಯರು ಸ್ವಂತ ಉದ್ಯೋಗ ಪ್ರಾರಂಭಿಸಲು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಭೂತನಾಳ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಸಹ ಪ್ರಾಧ್ಯಾಪಕ ಹಾಗೂ ಕೇಂದ್ರದ ಮುಖ್ಯಸ್ಥ ಡಾ. ವಿಜಯಕುಮಾರ ಎಸ್. ಮಾತನಾಡಿ, ಪ್ರಪಂಚದಲ್ಲಿ ಸುಮಾರು 179 ಜಾತಿಯ ಸಿಹಿನೀರು ಬಣ್ಣದ ಮೀನುಗಳಿವೆ.  ಅವುಗಳಲ್ಲಿ ಕೆಲವು ಅತ್ಯಂತ ಜನಪ್ರೀಯವಾಗಿವೆ.  ಅವುಗಳಲ್ಲಿ ಗೋಲ್ಡ್ ಫೀಶ್, ಮೋಲಿ, ಬಾರ್ಬ, ಗೌರಾಮಿ, ಗಪ್ಪಿ, ಟೆಟ್ರ್ ಗಮನ ಸೆಳೆಯುತ್ತಿವೆ.  ವಿಶ್ವದಲ್ಲಿ ಜರ್ಮನಿ 100 ದಶಲಕ್ಷ ಡಾಲರ್ ಬೆಲೆಬಾಳುವ ಅಲಂಕಾರಿಕ ಮೀನುಗಳನ್ನು ರಫ್ತುಮಾಡುತ್ತಿದೆ.  ಸಿಂಗಾಪುರ ಕೂಡ ಪ್ರಪಂಚದಲ್ಲಿಯೇ ಅತೀ ದೊಡ್ಡ ಅಲಂಕಾರಿಕ ಮೀನುಗಳ ವಹಿವಾಟಿನ ಕೇಂದ್ರವಾಗಿದೆ.  ಪ್ರತಿವರ್ಷ 40 ರಿಂದ 50 ದಶಲಕ್ಷ ಡಾಲರ್ ವಹಿವಾಟು ನಡೆಸುತ್ತಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ. ವಿಜಯ ಎಸ್. ಅತನೂರ, ವಿನೂತ, ವೀಣಾ, ಮಹಮ್ಮದ, ರವಿಕುಮಾರ ಮೋದಿ, ನರಸು, ಸುರೇಶ, ರಾಜೇಶ್ವರಿ ಸೇರಿದಂತೆ ಸುಮಾರು 75ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.

Leave a Reply

ಹೊಸ ಪೋಸ್ಟ್‌