ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನೌಕರಿ ಕೊಡಿಸುವುದಾಗಿ ವಿಶ್ವವಿದ್ಯಾನಿಲಯದ ಲಾಂಛನ ಮತ್ತು ಕವರಗಳನ್ನು ಬಳಸಿಕೊಂಡು ಅನಾಮಿಕ ವ್ಯಕ್ತಿಗಳು ಹಿಂದಿನ ಮತ್ತು ಪ್ರಸ್ತುತ ಕುಲಸಚಿವರು ಮತ್ತು ಸಹಾಯಕ ಕುಲಸಚಿವರ ಸಹಿಯೊಂದಿಗೆ ಸುಳ್ಳು ಪತ್ರಗಳನ್ನು ನೀಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದ್ದು ಇಂಥ ವ್ಯಕ್ತಿಗಳ ಮೋಸದ ಜಾಲದ ಬಗೆಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಕುಲಸಚಿವ ಪ್ರೊ. ಬಿ. ಎಸ್. ನಾವಿ ಮನವಿ ಮಾಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಇದುವರೆಗೆ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬೋಧಕರ ಹೊರತಾದ ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದ ಯಾವುದೇ ಅಧಿಸೂಚನೆ ಹೊರಡಿಸಿರುವುದಿಲ್ಲ ಮತ್ತು ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಮಹಿಳಾ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ಮಾಡಿಸುವುದಾಗಿ ಯಾರಾದರೂ ಹೇಳುತ್ತಿದ್ದರೆ ಅಂಥವರ ಹೆಸರನ್ನು ವಿಶ್ವವಿದ್ಯಾಲಯದ ಗಮನಕ್ಕೆ ತರಬೇಕು. ಅಲ್ಲದೇ, ಸಮೀಪದ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಬಹುದಾಗಿದೆ. ಯಾರಾದರೂ ಇಂಥ ಮೋಸದ ಜಾಲದಲ್ಲಿ ಸಿಲುಕಿದ್ದರೆ ಅದಕ್ಕೆ ವಿಶ್ವವಿದ್ಯಾಲಯವು ಹೊಣೆಯಾಗುವುದಿಲ್ಲ ಎಂದು ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದು ಕುಲಸಚಿವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.