ಯಶಸ್ಸಿಗೆ ಕಠಿಣ ಪರಿಶ್ರಮ ಅವಶ್ಯ- ಮಹಾನಗರ ಪಾಲಿಕೆ ಉಪಆಯುಕ್ತ ಮಹಾವೀರ ಬೋರಣ್ಣನವರ

ವಿಜಯಪುರ: ಉದ್ದಿಮೆದಾರರು ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಬೇಕು.  ಕೈಗೊಳ್ಳಬೇಕಾಗಿರುವ ಕಾರ್ಯ ಮೊಟಕುಗೊಳಿಸದೇ, ಹಿಡಿದ ಕಾರ್ಯ ಯಶಸ್ವಿಯಾಗುವತ್ತ ಕಠಿಣ ಪರಿಶ್ರಮ ರೂಢಿಸಿಕೊಳ್ಳಬೇಕು ಎಂದು ವಿಜಯಪುರ ಮಹಾನಗರ ಪಾಲಿಕೆಯ ಉಪಆಯುಕ್ತ ಮಹಾವೀರ ಬೋರಣ್ಣನವರ ಹೇಳಿದ್ದಾರೆ.

ನಗರದ ಹೊರವಲಯದ ಭೂತನಾಳ ಕೆರೆಯ ಬಳಿ ಇರುವ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಿಹಿ ನೀರು ಅಲಂಕಾರಿಕ ಮೀನು ಸಾಕಾಣಿಕೆ ಕುರಿತ ಮೂರು ದಿವಸಗಳ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗುರಿ ಸಾಧನೆ ಪಥದ ನಡುವೆ ಸಮಸ್ಯೆ ಉದ್ಭವಿಸಿದರೆ ಪರಿಹಾರ ಕಂಡುಕೊಂಡು ಎದುರಿಸುವ ಚಾಕಚಕ್ಯತೆ ಪ್ರವೃತ್ತಿ ಹಾಗೂ ಕಷ್ಟಗಳನ್ನು ಜಯಿಸಿ, ಅವುಗಳನ್ನು ಎದುರಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳುವವರು ಮಾತ್ರ ಯಶಸ್ವಿ ಹಾಗೂ ಸುಸ್ಥಿರ ಉದ್ಯಮಿ ಎನಿಸಿಕೊಳ್ಳಬಹುದು ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತೆ ರೇಣುಕಾ ಸದಸಪ್ಪಗೋಳ ಮಾತನಾಡಿ, ಮಹಿಳೆಯರು ಉದ್ಯಮಿಯಾದರೆ ಅವರ ಕುಟುಂಬದ ಆರ್ಥಿಕ ವ್ಯವಸ್ಥೆ ಸುಸ್ಥಿರಗೊಳ್ಳುತ್ತದೆ ಎಂದು ಹೇಳಿದರು.

ಭೂತನಾಳ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ. ಎಸ್. ವಿಜಯಕುಮಾರ ಮಾತನಾಡಿ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನು ಸಾಕಣೆ ಮಾಡಲು ಹಲವಾರು ಅವಕಾಶಗಳಿದ್ದು, ಸ್ವಯಂ ಉದ್ಯೋಗ ಆರಂಭಿಸುವವರು ಇದನ್ನು ಸದುಪಯೋಗ ಪಡಿಸಿಕೊಂಡು ಯಶಸ್ವಿ ಉದ್ಯಮಿಯಾಗಬಹುದು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಡಾ. ಎಸ್. ವಿಜಯ ಆತನೂರ ಸೇರಿದಂತೆ ಸುಮಾರು 70ಕ್ಕೂ ಹೆಚ್ಚು ಮಹಿಳೆಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌