200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಂದ ಗಾಂಧಿಭವನ ವೀಕ್ಷಣೆ- ರಾಷ್ಟ್ರಪಿತನ ಕುರಿತು ಅರಿತುಕೊಳ್ಳಲು ಉಪಯುಕ್ತವಾದ ಭವನ- ಸುರೇಶ ಮುಂಜೆ

ವಿಜಯಪುರ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧೀಜಿಯವರ ಚಳುವಳಿಗೆ ಸತ್ಯ ಮತ್ತು ಅಹಿಂಸಾ ಅಸ್ತ್ರಗಳಾಗಿದ್ದವು.  ಇಂಥ ಸತ್ಯ, ಶಾಂತ, ತ್ಯಾಗಮೂರ್ತಿ ಮಹಾತ್ಮ ಗಾಂಧೀಜಿವರ ತತ್ವಾದರ್ಶಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ವಿಜಯಪುರ ತಹಶೀಲ್ದಾರ ಸುರೇಶ ಮುಂಜೆ ಕರೆ ನೀಡಿದರು.

ನಗರದ ಇಟ್ಟಂಗಿಹಾಳದ ತುಂಗಳ ಶಾಲೆಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗರದ ಜಿ. ಪಂ. ಬಳಿ ಇರುವ ಗಾಂಧಿಭವನಕ್ಕೆ ಭೇಟಿ ನೀಡಿ, ವೀಕ್ಷಣೆ ನಡೆಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

ಜ್ಞಾನ, ಉದ್ಯೋಗ, ಶಿಕ್ಷಣ ಅನಿವಾರ್ಯವಾಗಬೇಕು.  ಮಹಾನ್ ವ್ಯಕ್ತಿಗಳ ಪರಿಚಯವಾಗಲು ಮತ್ತು ಮುಂದಿನ ಪೀಳಿಗೆಗಳಿಗೆ ಗಾಂಧಿ ಭವನದಲ್ಲಿ ನಿರ್ಮಾಣಗೊಂಡ ಗಾಂಧೀಜಿಯವರ ಆದರ್ಶಗಳು ಪ್ರೇರಣೆಯಾಗಬೇಕು ಎಂಬುದು ಜಿಲ್ಲಾಡಳಿತದ ಆಶಯವಾಗಿದೆ ಎಂದು ಅವರು ಹೇಳಿದರು.

ಇಟ್ಟಂಗಿಹಾಳ ಬಳಿಯ ತುಂಗಳ ಶಾಲೆಯ ಸುಮಾರು 200 ವಿದ್ಯಾರ್ಥಿಗಳು ಗಾಂಧಿ ಭವನಕ್ಕೆ ಭೇಟಿ ನೀಡಿದರು

ಗಾಂಧಿ ಅವರ ಬಾಲ್ಯ ಜೀವನ, ವಿದೇಶದಲ್ಲಿ ವ್ಯಾಸಂಗ, ಭಾರತಕ್ಕೆ ಆಗಮನ ದೇಶದ ಸ್ವಾತಂತ್ರ್ಯಕ್ಕಾಗಿ ಚಳುವಳಿಯ ಆರಂಭ, ಅಹಿಂಸಾ ಹಾಗೂ ಸತ್ಯ ಅಸ್ತ್ರಗಳ ಬಳಕೆ ಉಪವಾಸ ಸತ್ಯ್ಯಾಗ್ರಹ, ನನ್ನ ಜೀವನವೇ ನನ್ನ ಸಂದೇಶ ದ ಸಾರ ಇಂದಿನ ಯುವ ಮನಸ್ಸು ಅರಿತುಕೊಳ್ಳುವುದು ಅಗತ್ಯವಾಗಿದೆ.  ಹಲವು ಪೂರಕ ಮಾಹಿತಿ ಗಾಂಧಿ ಭವನದಲ್ಲಿ ನಾವೂ ಕಾಣಬಹುದಾಗಿದೆ.  ಗಾಂಧಿ ಭವನದೊಳಗೆ ಪ್ರವೇಶಿಸಿದಾಗ ಮನಸ್ಸಿಗೆ ಮುದ ನೀಡುವ ಪ್ರಶಾಂತ ವಾತಾವರಣ, ಜೊತೆಗೆ ಸತ್ಯ, ಶಾಂತಿ ತ್ಯಾಗ ಮೂರ್ತಿಯ ಜೀವನ ಸಾರವೇ ನೋಡಿ ತಿಳಿದುಕೊಳ್ಳುವ ಸದಾವಕಾಶವಿದ್ದು, ಮಹಾತ್ಮ ಗಾಂಧೀಜಿಯವರ ಕುರಿತು ಜ್ಞಾನ ಹೊಂದುವುದಲ್ಲದೇ ಅವರ ಜೀವನಾದರ್ಶಗಳನ್ನು ಯುವಕರು ಮೈಗೂಡಿಸಿಕೊಳ್ಳುವ ಮೂಲಕ ಆದರ್ಶ ಜೀವನಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಮಾತನಾಡಿ, ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಾಣವಾಗಿ ಕಳೆದ ವರ್ಷ ಸೆ. 30ರಂದು ಸಾರ್ವಜನಿಕರ ವೀಕ್ಷಣೆಗೆ ಲೋಕಾರ್ಪಣೆ ಮಾಡಲಾಗಿದೆ.  ಈಗಾಗಲೇ ಜಿಲ್ಲೆಯ ಹಲವಾರು ಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು,ರಾಜ್ಯದ ಹೈಕೋರ್ಟಿನ ನ್ಯಾಯಮೂರ್ತಿಗಳು ಹಾಗೂ ಗಣ್ಯಾತಿ-ಗಣ್ಯರು  ಆಗಮಿಸಿ, ಈ ಭವನ ವೀಕ್ಷಣೆ  ಮಾಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಭಾರ ಉಪ ವಿಭಾಗಾಧಿಕಾರಿ ಸಿ. ಎಸ್. ಗುಡದಿನ್ನಿ, ತುಂಗಳ ಕಾಲೇಜ್ ಪ್ರಾಂಶುಪಾಲ ಜಯತೀರ್ಥ ಕುಲಕರ್ಣಿ, ಗಾಂಧಿ ಭವನದ ಸದಸ್ಯ ಬಿ. ಬಿ. ಪಾಟೀಲ, ಪೀಟರ್ ಅಲೆಕ್ಸಾಂಡರ್, ನಿಲೇಶ ಬೇನಾಳ, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌