ವಿಜಯಪುರ: ಸರಕಾರಿ ಶಾಲೆಯ ಅಡುಗೆ ಸಾಮಗ್ರಿಗಳು ಮತ್ತು ಆಡುಗಳನ್ನು ಕಳ್ಳತನ ಮಾಡಿದ್ದ ಐದು ಜನ ಆರೋಪಿಗಳನ್ನು ವಿಜಯಪುರ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
27.02.2023 ರಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹುಣಶ್ಯಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿತ್ತು. ಅಲ್ಲದೇ, 01.07.2023ರಂದು ಇದೇ ಪೊಲೀಸ್ ಠಾಣೆಯ ವ್ಯಾಪ್ತಿಯ ಖಂಡಸಾರಿ ತಾಂಡಾದ ಕ್ರಾಸ್ ಹತ್ತಿರ ಇರುವ ಕಾಳೆ ಇವರ ಹೊಲದಲ್ಲಿದ್ದ 14 ಆಡುಗಳನ್ನು ಕಳ್ಳತನ ಮಾಡಲಾಗಿತ್ತು.
ಈ ಪ್ರಕರಣಗಳಗಳನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಎಚ್. ಡಿ. ಆನಂದಕುಮಾರ ಅವರು ಎಎಸ್ಪಿ ಶಂಕರ ಮಾರಿಹಾಳ ಮಾರ್ಗದರ್ಶನದಲ್ಲಿ ವಿಜಯಪುರ ಗ್ರಾಮೀಣ ಡಿವೈಎಸ್ಪಿ ಜಿ. ಎಚ್. ತಳಕಟ್ಟಿ, ವಿಜಯಪುರ ಗ್ರಾಮೀಣ ಸಿಪಿಐ ಸಂಗಮೇಶ ಪಾಲಭಾವಿ ಅವರ ನೇತ್ರತ್ವದಲ್ಲಿ ತನಿಖೆಗೆ ಒಂದು ತಂಡ ರಚಿಸಿದ್ದರು.
ಈ ತಂಡ ಯಾವುದೇ ಖಚಿತ ಸುಳಿವು ಇಲ್ಲದಿದ್ದರೂ, ಚಾಣಾಕ್ಷತದಿಂದ ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿದ್ದು, ಈ ಪ್ರಕರಣದಲ್ಲಿ ಭಾಗಿಯಾದ ವಿಜಯಪುರ ನಗರದ ಹರಣಶಿಕಾರ ಕಾಲನಿಯ ಪರಶುರಾಮ ಉರ್ಫ್ ಪರಸು ತಂದೆ ಲಕ್ಷ್ಮಣ ಕಾಳೆ, ಬಸವರಾಜ ಶಿವಾಜಿ ಚವ್ಹಾಣ, ದೇವರಾಜ ಜಂಪು ಚವ್ಹಾಣ, ಜಂಪು ರಾಜು ಚವ್ಹಾಣ ಮತ್ತು ಹಕೀಂ ಚೌಕ್ ಬಳಿಯ ಸಾಗರ ರಾವುತಪ್ಪ ಜುಮ್ಮಾಗೋಳ ಅವರನ್ನು ಬಂಧಿಸಿದ್ದಾರೆ.
ಈ ಆರೋಪಿಗಳನ್ನು ಮೊದಲಿಗೆ ಬಂಧಿಸಿ ವಿಚಾರಣೆ ನಡೆಸಿದಾಗ, ಹುಣಶ್ಯಾಳ ಗ್ರಾಮದ ಸರಕಾರಿ ಶಾಲೆಯಲ್ಲಿ ಕಳವು ಮಾಡಿದ ಅಡುಗೆ ಸಾಮಾಗ್ರಿಗಳನ್ನು ಮಾರಾಟ ಮಾಡಿರುವದಾಗಿ ಮಾಹಿತಿ ನೀಡಿ್ದದಾರೆ. ಆ ವಸ್ತುಗಳ ಹಣದ ಪೈಕಿ ರೂ. 19 ಸಾವಿರ ಮತ್ತು ಖಂಡಸಾರಿ ತಾಂಡಾದ ಕ್ರಾಸ್ ಹತ್ತಿರ ಕಳ್ಳತನ ಮಾಡಿದ 14 ಆಡುಗಳ ಪೈಕಿ 10 ಆಡುಗಳನ್ನು, ರೂ. 20 ಸಾವಿರ ನಗದ ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು ಒಟ್ಟು ರೂ. 8 ಲಕ್ಷ ಮೌಲ್ಯದ ಎರಡು ಬುಲೆರೋ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ರೂ. 9.19 ಲಕ್ಷ ಎಂದು ಅಂದಾಜು ಮಾಡಲಾಗಿದೆ.
ಈ ಎರಡೂ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಹಿರಿಯ ಅಧಿಕಾರಿಗಳ ಜೊತೆ ವಿಜಯಪುರ ಗ್ರಾಮೀಣ ಪಿಎಸ್‌ಐ ಆರ್. ಎ. ದಿನ್ನಿ, ಅರವಿಂದ ಅಂಗಡಿ, ಸಿಬ್ಬಂಧಿಯವರಾದ ಎಂ. ಎನ್. ಮುಜಾವರ, ಪಿ. ಸಿ. ಬಾವೂರ, ಆರ್. ಎಂ. ನಾಟೀಕಾರ, ಎಂ. ಎಚ್. ಬಂಕಲಗಿ, ವಿ. ಎನ್. ಪಾಟೀಲ, ಐ. ವೈ. ದಳವಾಯಿ, ಪ್ರವೀಣ ಭತಗುಣಕಿ, ಎಸ್. ಬಿ. ತೆಲಗಾಂವ, ಎ. ಎಸ್. ಬಿರಾದಾರ, ಪ್ರಭು ಠಾಣೆದ, ಸುನೀಲ ರಾಠೋಡ ಪಾಲ್ಗೋಂಡಿದ್ದರು. ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರ ತಂಡಕ್ಕೆ ವಿಜಯಪುರ ಎಸ್ಪಿ ಎಚ್. ಡಿ. ಆನಂದಕುಮಾರ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.