ಸಾಲ ತೀರಿಸಲು, ಆರ್ಮಿ, ಪಿ ಎಸ್ ಐ ಪರೀಕ್ಷೆ ಪಾಸು ಮಾಡು, ಬೂಂದಿ ಲಾಡು ಅರ್ಪಿಸುವೆ- ಹನುಮಂತನ ಹುಂಡಿಯಲ್ಲಿ ಭಕ್ತರ ವಿಶಿಷ್ಠ ಬೇಡಿಕೆಗಳ ಚೀಟಿಗಳು

ವಿಜಯಪುರ: ನಾನು ಮಾಡಿದ ಸಾಲ ತೀರಿಸಲು ಪರಿಹಾರಕ್ಕೆ ದಾರಿ ತೋರಿಸು ಯಲಗೂರ ಹನಮಂತಪ್ಪ.  ಆರ್ಮಿ ರನ್ನಿಂಗ ಇವತ್ತು ಸ್ಟಾರ್ಟ್ ಮಾಡೀನಿ ದೇವರೆ.  ಪಾಸ ಮಾಡು.  ಅತೀ ವೇಗ ಓಡುವಂಗ ಮಾಡು.  ಆರೋಗ್ಯವಾಗಿ ಇಡು ದೇವರೆ.  ಗೋರ್ನಮೆಂಟ್ ಜಾಬ್ ಪಿ. ಎಸ್. ಐ ಮಾಡು.  ಹೆಂಡತಿ ಮಕ್ಕಳ ನಡುವೆ ಜಗಳವಾಗದಂತಿರಿಸು.  ಮಗನಿಗೆ ಎಂಬಿಎ ಸೀಟ್ ಸಿಗಲಿ.  ಮತ್ತೆ ಬಂದು ನಿನ್ನ ದರ್ಶನ ಮಾಡುತ್ತೇನೆ.  ನೌಕರಿ ಅವಶ್ಯಕತೆ ತುಂಬಾ ಇದೆ. ಬೇಗನೇ ಒಳ್ಳೆಯ ಕಂಪನಿಯಲ್ಲಿ ಹೆಚ್ಚಿನ ಸಂಬಳದ ನೌಕರಿ ಸಿಕ್ಕು ಉತ್ತಮ ಜೀವನ ನಡೆಸುವಂತೆ ಆಶೀರ್ವಾದ ಮಾಡು.  ನಿನಗೆ ಬೂಂದಿ ಲಾಡು ನೈವೇದ್ಯ ಸಲ್ಲಿಸುತ್ತೇನೆ.  ಇದು ಬಸವನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಕೃಷ್ಣಾ ತೀರದ ಸುಕ್ಷೇತ್ರ ಯಲಗೂರು ಹನುಮಂತ ದೇವಸ್ಥಾನದ ಹುಂಡಿಯಲ್ಲಿ ಸಿಕ್ಕಿರುವ ಭಕ್ತರ ಬೇಡಿಕೆಗಳ ಸ್ಯಾಂಪಲ್.

ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಯಲಗೂರೇಶ್ವರ ದೇವಸ್ಥಾನದ ಹುಂಡಿಯನ್ನು ತೆರೆಯಲಾಯಿತು.  ಈ ಹುಂಡಿಯಲ್ಲಿ ಸಂಗ್ರಹವಾಗಿದ್ದ ದುಡ್ಡಿನ ಜೊತೆಗೆ ಭಕ್ತರ ತರಹೇವಾರಿ ಬೇಡಿಕೆಯುಳ್ಳ ಪತ್ರಗಳೂ ಪತ್ತೆಯಾಗಿವೆ.  ಇಲ್ಲಿರುವ ದೇವಸ್ಥಾನ ಭಕ್ತರ ಅಚ್ಚುಮೆಚ್ಚಿನ ಧಾರ್ಮಿಕ ತಾಣವಾಗಿದ್ದು, ದೇವಸ್ಥಾನದಲ್ಲಿರುವ ಹನುಮನ ವಿಗ್ರಹ ಜಾಗೃತ ದೇವರು ಎಂದೇ ಹೆಸರಾಗಿದೆ.

ಯಲಗೂರ ಹನುಮಂತ ದೇವಸ್ಥಾನದ ಹುಂಡಿಯಲ್ಲಿ ದೊರೆತ ಭಕ್ತರ ಬೇಡಿಕೆಯ ಚೀಟಿಗಳು

ನೇಪಾಳ ದೇಶದ ಕರೆನ್ಸಿ

ಈ ದೇವಸ್ಥಾನದಲ್ಲಿರುವ ಎರಡು ಹುಂಡಿಗಳಲ್ಲಿ ಭಕ್ತರು ನಗನಾಣ್ಯದ ಜೊತೆ ಬೇಡಿಕೆಯನ್ನು ಈಡೇರಿಸುವಂತೆ ಕೋರಿ ಚೀಟಿಗಳನ್ನೂ ಹಾಕುವುದು ಗಮನಾರ್ಹವಾಗಿದೆ.  ಹುಂಡಿಗಳು ಬಹುತೇಕ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನಿಡಗುಂದಿ ತಹಸೀಲ್ದಾರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು.  ಈ ಹುಂಡಿಯಲ್ಲಿ ಹಣದ ಜೊತೆ ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಭಕ್ತರು ಬರೆದು ಹಾಕಿರುವ ಚೀಟಿಗಳು ಪತ್ತೆಯಾಗಿವೆ.  ಶ್ರೀ ಯಲಗೂರ ಹನುಮಂತ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಬ್ಯಾಂಕುಗಳ ಸಿಬ್ಬಂದಿ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಜನರು ಹುಂಡಿ ಹಣ ಎಣಿಕೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಭಕ್ತರು ಹುಂಡಿಗೆ ನಗನಾಣ್ಯದಗಳ ಜೊತೆ ವಿದೇಶಿ ಕರೆನ್ಸಿಗಳನ್ನೂ ಕೂಡ ಹಾಕಿರುವುದು ಬೆಳಕಿಗೆ ಬಂದಿದೆ.  ಬೆಳಿಗ್ಗೆ 10 ಗಂಟೆಗೆ ಆರಂಭವಾದ ಹುಂಡಿಗಳಲ್ಲಿನ ಹಣದ ಎಣಿಕೆ ಕಾರ್ಯ ರಾತ್ರಿ 7 ಗಂಟೆಯ ವರಗೆ ನಡೆಯಿತು.  ಈ ಸಂದರ್ಭದಲ್ಲಿ ರೂ. 50 ಲಕ್ಷ 65 ಸಾವಿರದ 970 ನಗದು, 160 ಗ್ರಾಂ ಚಿನ್ನಾಭರಣ, 300 ಗ್ರಾಂ ಬೆಳ್ಳಿಯ ಆಭರಣ ಪತ್ತೆಯಾಯಿತು.  ಈ ಎಲ್ಲ ಸಂಪೂರ್ಣ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣ ಕೂಡ ಮಾಡಿರುವುದು ಗಮನ ಸೆಳಯಿತು.  ಅಲ್ಲದೇ, ಬಿಗೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿರುವುದು ಕೂಡ ವಿಶೇಷವಾಗಿತ್ತು.

ಕೆನರಾ ಬ್ಯಾಂಕ್ ಸಿಬ್ಬಂದಿ, ದೇವಸ್ಥಾನದ ಆಡಳಿತ ಮಂಡಳಿಯವರು, ಅರ್ಚಕರು ಹಾಗೂ ಭಕ್ತರು ಸೇರಿದಂತೆ ಅಂದಾಜು 69ಕ್ಕೂ ಹೆಚ್ಚು ಜನ ಹುಂಡಿಗಳ ಹಣ ಎಣಿಸುವ ಕಾರ್ಯದಲ್ಲಿ ಭಾಗಿಯಾಗಿದ್ದರು.  ಅನಂತ ಓಂಕಾರ, ಶ್ಯಾಮ್ ಪಾತ್ರದ, ಗುಂಡೂರಾವ್ ಕುಲಕರ್ಣಿ, ಗೋಪಾಲ ಗದ್ದನಕೇರಿ, ಗುರುರಾಜ ಪರ್ವತಿಕರ, ಗುಂಡಪ್ಪ ಪೂಜಾರಿ, ಸಂತೋಷ ಪೂಜಾರಿ, ಭೀಮಣ್ಣ ಪೂಜಾರಿ, ಯಲಗೂರದಪ್ಪ ಪೂಜಾರಿ ಮುಂತಾದವರು ಈ ಪ್ರಕ್ರಿಯೆಯಲ್ಲಿ ಪಾಲ್ಗೋಂಡರು.

Leave a Reply

ಹೊಸ ಪೋಸ್ಟ್‌