ಕತ್ತೆಗಳ ಅದ್ದೂರಿ ಮದುವೆ- ನೂಲು ಸುತ್ತಿ, ಹಳದಿ ಹಚ್ಚಿ, ಹುಗ್ಗಿ ತಿಂದು ಕೃಪೆ ತೋರುವಂತೆ ಮೇಘರಾಜನ ಪ್ರಾರ್ಥಿಸಿದ ಗ್ರಾಮಸ್ಖರು

ವಿಜಯಪುರ: ಮಳೆಯಾಗದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಪೂಜೆ, ಜಲಾಭಿಷೇಕ, ಕತ್ತೆಗಳ ಮದುವೆ ಮಾಮೂಲು.  ಆದರೆ, ಇದೇ ವರುಣನ ಕೃಪೆಗಾಗಿ ಬಸವನಾಡಿನಲ್ಲಿ ಗ್ರಾಮಸ್ಥರು ಅದ್ದೂರಿಯಾಗಿ ಗಾದರ್ಭಗಳ ಮದುವೆ ಗಮನ ಸೆಳೆದಿದೆ.

ಮುಂಗಾರು ಹಂಗಾಮು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ವರುಣ ಇನ್ನೂ ಕೃಪೆ ತೋರಿಲ್ಲ.  ಮೋಡ ಮುಸುಕಿದ ವಾತಾವರಣವಿದೆ ಆದರೂ, ನಾಲ್ಕಾರು ಹನಿ ಮಳೆ ಸುರಿದಿದ್ದು ಬಿಟ್ಟರೆ ಈ ಬಾರಿ ಮಳೆಯ ಕೊರತೆ ಪ್ರಮಾಣ ಹೆಚ್ಚಾಗಿದೆ.  ಇದು ಭೂತಾಯಿಯನ್ನು ನಂಬಿ ಜೀವನ ಸಾಗಿಸುವ ರೈತರ ರಿಂದ ಹಿಡಿದು ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುತ್ತಿದೆ.

ಮೇಘರಾಜನ ಆಶೀರ್ವಾದ ಬಯಸಿ ಹಲವಾರು ಕಡೆಗಳಲ್ಲಿ ಕತ್ತೆ ಮದುವೆಗಳು ನಡೆಯುತ್ತಲೇ ಇವೆ.  ಆದರೆ, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಗ್ರಾಮದಲ್ಲಿ ನಡೆದ ಗಾದರ್ಭಗಳ ವಿವಾಹ ಮನುಷ್ಯರ ಮದುವೆಗಿಂತಲೂ ಕಡಿಮೆಯೇನಿರಲಿಲ್ಲ.  ಇಲ್ಲಿ ಎಲ್ಲವೂ ಜನಸಾಮಾನ್ಯರ ಮದುವೆಯಂತೆಯೇ ಎಲ್ಲವೂ ಶಾಸ್ತ್ರಬದ್ಧವಾಗಿ ನಡೆಯಿತು.

ಝಳಕಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ವಿಶೇಷ ಮದುವೆ ಮಾಡಿದರು

ಗಮನ ಸೆಳೆದ ಮದುವೆ ಮೆರವಣಿಗೆ

ಮಣ್ಣಿನ ಮಕ್ಕಳು ಮತ್ತು ಊರಿನ ಜನರು ಸೇರಿಕೊಂಡು ಕತ್ತೆಗಳ ಅದ್ದೂರಿ ಮದುವೆ ಮಾಡಿದರು.  ಗ್ರಾಮದ ಪುರುಷರು ಮಹಿಳೆಯರು, ಮಕ್ಕಳು, ಹಿರಿಯರು ಹೀಗೆ ಎಲ್ಲರೂ ಸೇರಿಕೊಂಡು ಜನರೆಲ್ಲರೂ ಭಾಗವಹಿಸಿದ್ದು ಗಮನ ಸೆಳೆಯಿತು.  ಹೆಣ್ಣು ಕತ್ತೆಯನ್ನು ವಧು, ಗಂಡು ಕತ್ತೆಯನ್ನು ವರನ ರೂಪದಲ್ಲಿ ಸಿಂಗರಿಸಿ ಮದುವೆ ಸ್ಥಳಕ್ಕೆ ಕರೆತಂದರು.  ವಧುವಿನ ಪಕ್ಷ ಮತ್ತು ವರನ ಪಕ್ಷದವರು ಪರಸ್ಪರ ಸಂಕ್ಕರೆ ಹಂಚಿಕೊಂಡು ಬಾಯಿ ಸಿಹಿ ಮಾಡಿಕೊಂಡರು.  ಹಣ್ಣಿನ ಬೀಗರು, ಗಂಡಿನ ಬೀಗರು ಎಂಬ ಠೀವಿಯಿಂದ ಎದುರು- ಬದುರು ಭೇಟಿಯಾದರು.

ನೂಲು ಸುತ್ತಿ, ಜಾನಪದ ಹಾಡು ಹೇಳುತ್ತ, ಆಹೇರಿ ಮಾಡುತ್ತ ಅಂದರೆ ಹೊಸ ಬಟ್ಟೆಗಳ ಕಾಣಿಕೆಯನ್ನು ನೀಡಿ ಎಲ್ಲ ಆಚರಣೆ ಮತ್ತು ಕಾರ್ಯಕ್ರಮಗಳನ್ನು ಸಂಪ್ರದಾಯಬದ್ಧವಾಗಿ ಮಾಡಿದರು.  ಪರಸ್ಪರ ಅರಿಶಿಣ ಹಚ್ಚಿಕೊಂಡು ಹಳದಿ ಅರಿಶಿಣ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡರು.  ಗ್ರಾಮದ ಶ್ರೀ ಭೀರಲಿಂಗೇಶ್ವರ ಪಲ್ಲಕ್ಕಿ ಮನೆಯಿಂದ ಪ್ರಮುಖ ರಸ್ತೆಯ ಮೂಲಕ ಪ್ರತಿ ಮನೆಯಿಂದ ಕತ್ತೆಗಳಿಗೆ ನೀರು ಹಾಕಿ ಅರಶಿಣ ಕುಂಕುಮ ಹಚ್ಚಿ ಪೂಜೆ ಮಾಡಿojg.  ಗ್ರಾಮದ ಸುಮಂಗಲಿಯರಿಂದ ಆರತಿ ಮಾಡಿ ಮೆರವಣಿಗೆಯಲ್ಲಿ ಪಾಲ್ಗೊಂಡರು.  ಪ್ರಮುಖ ರಸ್ತೆಗಳಲ್ಲಿ ವಾದ್ಯಮೇಳದೊಂದಿಗೆ ನೂತನ ವಧು- ವರ ಕತ್ತೆಗಳ ಭವ್ಯ ಮೆರವಣಿಗೆ ನಡಸಿದರು.

ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಪ್ರಮುಖ ರಸ್ತೆಯ ಮೂಲಕ ಸಾಗಿದ ಕತ್ತೆಗಳ ಮದುವೆ ಮೆರವಣಿಗೆ ಹನುಮಾನ ಮಂದಿರ ತಲುಪಿತು.  ನಂತರ ಅಲ್ಲಿಂದ ಶ್ರೀ ಭೀರಲಿಂಗೆಶ್ವರ ದೇವಸ್ಥಾನ ಆವರಣದ ವರೆಗೆ ಮೆರವಣಿಗೆ ನಡೆಸಲಾಯಿತು.

ಮದುವೆ ಊಟದಲ್ಲಿ ಹುಗ್ಗಿ ಸವಿದ ಗ್ರಾಮಸ್ಥರು

ಅಷ್ಟೇ ಅಲ್ಲ, ಮದುವೆಯಲ್ಲಿ ಭಾಗವಹಿಸಿದ ಹೆಣ್ಣು ಮತ್ತು ಗಂಡು ಕತ್ತೆಗಳ ಹಾಗೂ ಅಡ್ಡ ಭೀಗರಿಗೆ ಹುಗ್ಗಿ ಹಾಗೂ ಅನ್ನ ಸಾಂಬರ ಊಟ ಮಾಡಿಸಿದರು.  ಈ ಮೂಲಕ ವರುಣದೇವ ಕೃಪೆ ತೋರಿ ಬಾನಿನಿಂದ ಮಳೆ ಸುರಿಸಿ ಧರೆಯಲ್ಲಿ ಉತ್ತಮ ಬೆಳೆ ಬೆಳೆಯುವಂತಾಗಲಿ ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಅಣ್ಣಪ್ಪ ತಳವಾರ, ಅಶೋಕ ಕಾಪಸೆ,ಶಂಕರಗೌಡ ಬಿರಾದಾರ,  ರವಿ ಹೂಗಾರ, ಹುಸೇನಿ ಪಾಚ್ಚಂಗಿ, ತುಕಾರಾಮ ಕಾಗರ, ಹಣಮಂತ ಕೋಳಿ, ಇತರರು.

Leave a Reply

ಹೊಸ ಪೋಸ್ಟ್‌