ಹೊನವಾಡ ಗ್ರಾ. ಪಂ. ಗೆ ಜಿ. ಪಂ. ಸಿಇಓ ರಾಹುಲ ಶಿಂಧೆ ಭೇಟಿ: ನಾನಾ ಕಾಮಗಾರಿಗಳ ಪರಿಶೀಲನೆ

ವಿಜಯಪುರ: ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ತಿಕೋಟಾ ತಾಲೂಕಿನ ಹೊನವಾಡ ಗ್ರಾ.  ಪಂ. ಗೆ ಭೇಟಿ ನೀಡಿ ನಾನಾ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಹೊನವಾಡ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೈಗೊಂಡ ಅಮೃತ ಸರೋವರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಈ ಅಮೃತ ಸರೋವರ ಕಾಮಗಾರಿಯನ್ನು ಹಸಿರು ಸರೋವರ ಅಂತಾ ಆಯ್ಕೆ ಮಾಡಿದ್ದು, ಸರೋವರದ ದಡದಲ್ಲಿ ವಿವಿಧ ರೀತಿಯ ಉತ್ತಮ ಗುಣಮಟ್ಟದ ಸಸಿಗಳನ್ನು ನಾಟಿ ಮಾಡಬೇಕು. ಸರೋವರದ ಸುತ್ತಲೂ ಸ್ಥಳೀಯವಾಗಿ ಲಭ್ಯವಾಗುವ ಕೆಂಪು ಮಣ್ಣಿನಿಂದ ವಾಕಿಂಗ್ ಟ್ರ್ಯಾಕ್ ಜೊತೆಗೆ ಗ್ರಾಮದ ಯುವಕರಿಗಾಗಿ ಓಪನ್ ಝಿಮ್ ನಿರ್ಮಾಣ, ಸಾಯಂಕಾಲ ಮತ್ತು ಮುಂಜಾನೆ ವಾಯು ವಿಹಾರಕ್ಕೆ ಅವಕಾಶ ಕಲ್ಪಿಸಿ, ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೊನವಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿ. ಪಂ. ಸಿಇಓ ರಾಹುಲ ಶಿಂಧೆ ಭೇಟಿ ನೀಡಿ ಪರೀಶೀಲನೆ ನಡೆಸಿದರು

ಸರೋವರದ ದಡದಲ್ಲಿರುವ ಟಿಸಿ ಸ್ಥಳಾಂತರ ಮಾಡುವಂತೆ ಸ್ಥಳೀಯರು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಸ್ಥಳದಲ್ಲೇ ಅವರ ಮನವಿಗೆ ಸ್ಪಂದಿಸಿ, ಅಪಾಯಕಾರಿಯಾಗಿರುವ ಟಿಸಿಯನ್ನು ತಕ್ಷಣ ಸ್ಥಳಾಂತರ ಮಾಡುವಂತೆ ಹೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ದೂರವಾಣಿ ಮೂಲಕ ಅವರು ಸೂಚನೆ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಿಇಓ, ಮಹಾತ್ಮಗಾಂಧಿ ನರೇಗಾ ಯೋಜನೆಯ ಕಾಯಕಲ್ಪ ಅಭಿಯಾನದಡಿ ಪ್ರಗತಿಯಲ್ಲಿರುವ ಉದ್ಯಾನವನ ಕಾಮಗಾರಿ, ಮಳೆ ನೀರು ಕೊಯ್ಲು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ನಂತರ ಆಸ್ಪತ್ರೆಗೆ ಭೇಟಿ ನೀಡಿ ಒಳ ರೋಗಿಗಳ ವಿಭಾಗ, ಕಾರ್ಯಾಲಯ, ಉಗ್ರಾಣ, ಔಷಧಿ ವಿತರಣಾ ಕೇಂದ್ರಗಳನ್ನು ಪರಿಶೀಲನೆ ನಡೆಸಿ ಆಸ್ಪತ್ರೆಯಲ್ಲಿ ಸ್ವಚ್ಚತೆ ಕಾಪಾಡಲು ಸೂಚಿಸಿದ ಅವರು, ಆರೋಗ್ಯ ಕೇಂದ್ರಕ್ಕೆ ಕಂಪೌಂಡ ನಿರ್ಮಾಣಕ್ಕೆ ಅನುದಾನ ಲಭ್ಯತೆಯ ಮೇರೆಗೆ ಕ್ರಮ ಕೈಗೊಳ್ಳಲು ಸ್ಥಳದಲ್ಲಿದ್ದ ತಾಲೂಕಾ ಪಂಚಾಯತಿಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.

ಗ್ರಾಮದ ಬಸವಂತ್ರಾಯ ಪ್ರೌಢಶಾಲೆಗೆ ಭೇಟಿ ನೀಡಿ ತರಗತಿ ಕೋಣೆಗಳನ್ನು ವೀಕ್ಷಣೆ ಮಾಡಿ, ಮಕ್ಕಳೊಡನೆ ಸಂವಾದ ನಡೆಸಿದ ರಾಹುಲ ಶಿಂಧೆ, ನಂತರ ತರಗತಿ ಕೊಠಡಿಗಳಲ್ಲಿ ನಿಗದಿತ ಸಂಖ್ಯೆಗಿಂತ ಜಾಸ್ತಿ ಮಕ್ಕಳು ತರಗತಿಯಲ್ಲಿ ಇರುವುದನ್ನು ಗಮನಿಸಿ ಮಕ್ಕಳ ಸಂಖ್ಯಾನುಸಾರ ತರಗತಿ ಕೊಠಡಿಗಳನ್ನು ನಿರ್ಮಾಣ ಮಾಡಲು ಶಾಲಾ ಆಡಳಿತ ಮಂಡಳಿಯವರಿಗೆ ಸೂಚಿಸಿದರು. ಅಡುಗೆ ಕೊಠಡಿಯಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡಲು ಮತ್ತು ನಿರುಪಯುಕ್ತ ವಸ್ತುಗಳನ್ನು ಇಡದಂತೆ ತಿಳಿಸಿದ ಅವರು, ಶಾಲೆಯಲ್ಲಿರುವ ಗಣಕಯಂತ್ರಗಳನ್ನು ಪರಿಶೀಲನೆ ನಡೆಸಿ ಪ್ರತಿ ನಿತ್ಯ ವೇಳಾಪಟ್ಟಿಯಂತೆ ಎಲ್ಲ ಮಕ್ಕಳಿಗೂ ಕಂಪ್ಯೂಟರ್ ಶಿಕ್ಷಣ ನೀಡುವಂತೆ ತಿಳಿಸಿ, ಮುಂದಿನ 15 ದಿನದೊಳಗಾಗಿ ಶಾಲೆಯಲ್ಲಿ ಮಕ್ಕಳಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಕಟ್ಟು ನಿಟ್ಟಿನ ನಿರ್ದೇಶನ ನೀಡಿದರು.

ನಂತರ ಗ್ರಾ. ಪಂ. ಕಾರ್ಯಾಲಯಕ್ಕೆ ಭೇಟಿ ನೀಡಿ, ಬಾಪೂಜಿ ಸೇವಾ ಕೇಂದ್ರದ ಹಾಗೂ ಗ್ರಾಮ ಒನ್ ಕೇಂದ್ರದ ಪರಿಶೀಲನೆ ನಡೆಸಿದ ಅವರು, ಸರ್ಕಾರದ ನಿರ್ದೇಶನದಂತೆ ಪ್ರತಿ ದಿನ ತಂತ್ರಾಂಶದಲ್ಲಿ ನಿಗದಿ ಪಡಿಸಿದ ದಿನಕ್ಕೆ ಒಟ್ಟು 60 ಅರ್ಜಿಗಳನ್ನು ಹಾಕಬೇಕು ಎಂದು ಹೇಳಿದರು. ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಶಾಲೆಗೆ ಭೇಟಿ ನೀಡಿ,ವಿವೇಕ ಅಭಿಯಾನದಡಿ ನಿರ್ಮಿಸಿದ ಶಾಲಾ ಕೊಠಡಿಗಳನ್ನು ವೀಕ್ಷಣೆ ಮಾಡಿ, ಕಟ್ಟಡದ ಮೇಲೆ ನೀರು ನಿಲ್ಲದಂತೆ ಹಾಗೂ ತ್ಯಾಜ್ಯ ಸಂಗ್ರಹವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ರಾಹುಲ ಶಿಂಧೆ ಅವರು, ತರಗತಿಯಲ್ಲಿದ್ದ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ, ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾ. ಪಂ. ಸಹಾಯಕ ನಿರ್ದೇಶಕ ಎಂ. ಬಿ. ಮನಗೂಳಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಪಿ. ಎಸ್. ಚವ್ಹಾಣ, ಎಸ್. ಬಿ. ಪಾಟೀಲ, ವಲಯ ಅರಣ್ಯಾಧಿಕಾರಿ ಗಿರೀಶ ಹಲಕೊಡೆ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಎಸ್. ಸಿ. ಮ್ಯಾಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ಜಿ. ಪಂ. ಅಧಿಕಾರಿಗಳಾದ ಆಂಜನೇಯ, ಪೃಥ್ವಿರಾಜ ಪಾಟೀಲ, ಶಾಖಾಧಿಕಾರಿ
ಪಿ. ಎಚ್. ಹೆಬ್ಬಾರೆ, ಪಿಡಿಓ ಸುರೇಶ ಕಳ್ಳಿಮನಿ, ನರೇಗಾ ಯೋಜನೆಯ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌