ವಿಜಯಪುರ: ಇತ್ತೀಚೆಗೆ ತರಕಾರಿ ಬೆಲೆ ಗಗನಮುಖಿಯಾಗಿದೆ. ಅದರಲ್ಲೂ ಕೆಂಪು ಬಂಗಾರ ಎಂದೇ ಈಗ ಕರೆಯಲಾಗುತ್ತಿರುವ ಟೊಮೆಟೊ ಬೆಲೆಯಂತೂ ಬಡವರಷ್ಟೇ ಯಾಕೆ, ಮಧ್ಯಮ ವರ್ಗದವರಿಗೂ ಕೈಗೆಟುಕದಂತಾಗಿದೆ.
ಮಕ್ಕಳಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ಸಾಮಾನ್ಯ ಜ್ಞಾನ ಒದಗಿಸುವ ನಿಟ್ಟನಲ್ಲಿ ಮತ್ತು ಹಣದ ಮಹತ್ವದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದ ಪ್ರೇರಣಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅರವಿಂದ ಪಾಟೀಲ ವಿನೂತನ ಜ್ಞಾನಹಂಚಿಕೆ ಮಾಡುತ್ತಲೇ ಇರುತ್ತಾರೆ.
ಈಗ ಗಗನಕ್ಕೇರಿರುವ ತರಕಾರಿ ಬೆಲೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಮತ್ತು ಅದಕ್ಕೆ ಪರಿಹಾರವಾಗಿ ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಬಳಸಿಕೊಂಡು ಮನೆಯ ಅಂಗಳ, ಹೂದೋಟ, ಮೇಲ್ಛಾವಣಿಯ ಮೇಲೆ ಟೊಮೆಟೋ ಮತ್ತು ಹಸಿ ಮೆಣಸಿನಕಾಯಿ ಸಸಿಗಳನ್ನು ನೆಡುವ ಕುರಿತು ಜಾಗೃತಿ ಮೂಡಿಸಿದ್ದರು. ಶಾಲೆಯ ಅಧ್ಯಕ್ಷರ ಈ ಯೋಚನೆಯಿಂದ ಪ್ರೇರಣೆಗೊಂಡ ವಿದ್ಯಾರ್ಥಿಯೋರ್ವ ತನ್ನ ಜನ್ಮದಿನವನ್ನು ಇದಕ್ಕೆ ಪೂರಕವಾಗಿ ಮತ್ತು ವಿನೂತನವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾನೆ.
ಪ್ರೇರಣಾ ಇಂಗ್ಲಿಷ್ ಮೀಡಿಯಮ್ ಹೈಸ್ಕೂಲ್ ನಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ನೂತನ ನವೀನ ಮಂಗಾನಗರ ಎಂಬ ವಿದ್ಯಾರ್ಥಿ ತನ್ನ ಜನ್ಮದಿನವನ್ನು ವಿನೂತನವಾಗಿ ಆಚರಿಸಲು ನಿರ್ಧರಿಸಿದ್ದಾನೆ. ಈ ಬಾರಿ ಸ್ನೇಹಿತರಿಗೆ ಮತ್ತು ಸಹಪಾಠಿಗಳಿಗೆ ಚಾಕಲೇಟ್ ಮತ್ತೀತರ ಸಿಹಿ ಅಥವಾ ಶೈಕ್ಷಣಕಿ ಸಂಬಂಧಿತ ಸಲಕರಣೆಗಳನ್ನು ನೀಡುವ ಬದಲು ಟೊಮೆಟೋ ಮತ್ತು ಹಸಿಮೆಣಸಿನಕಾಯಿ ಬೀಜಗಳನ್ನು ವಿತರಿಸುವ ಮೂಲಕ ಬಾಲ್ಯದಲ್ಲಿಯೇ ಸಮಾಜಪರ ಕಾಳಜಿ ಪ್ರದರ್ಶಿಸಿದ್ದಾನೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಾ. ಅರವಿಂದ ಪಾಟೀಲ, ಮಕ್ಕಳ ಭೂಮಿತಾಯಿ ಇದ್ದಂತೆ. ಭೂಮಿಯಲ್ಲಿ ಯಾವ ಬೀಜ ಬಿತ್ತುತ್ತೇವೋ ಆ ಬೆಳೆ ಬರುತ್ತದೆ. ಅದೇ ರೀತಿ ಮಕ್ಕಳಿಗೆ ಯಾವ ಜ್ಞಾನ ನೀಡುತ್ತೇವೋ ಅದೇ ಫಲವಾಗಿ ಸಿಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿ ನೂತನ ನವೀನ ಮಂಗಾನವರ ಬಾಲ್ಯದಲ್ಲಿಯೇ ವಿನೂತನ ಯೋಚನೆ ಹೊಂದುವ ಮೂಲಕ ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬ ನಾಣ್ಣುಡಿಗೆ ಪ್ರೇರಣೆಯಾಗಿದ್ದಾನೆ.