ವಿಜಯಪುರ: ಎಸ್. ಡಿ. ಎಂ. ಸಿ ಅಂದರೆ ಶಾಲಾ ಅಭಿವೃದ್ಧಿ ನಿರ್ವಹಣೆ ಸಮಿತಿ ಮಕ್ಕಳ ವಿದ್ಯಾಭ್ಯಾಸದ ಗುಣಮಟ್ಟದ ಶಿಕ್ಷಣದ ಪರಿಶೀಲನೆ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುವುದು ಸಾಮಾನ್ಯ.
ಆದರೆ, ಇಂಥ ಎಸ್. ಡಿ. ಎಂ. ಸಿ ಅಧ್ಯಕ್ಷರು ಮಕ್ಕಳಿಗೆ ಪಾಠ ಮಾಡಿಸುವ ಬದಲು ಆಟಕ್ಕೆ ಬಿಟ್ಟರೆ ಹೇಗಿರಬೇಡ? ಆಟವಾಡುವುದೆಂದರೆ ಮಕ್ಕಳಿಗೆ ಸಿಗುವ ಮಜವೇ ಬೇರೆ. ಆದರೆ, ಪಾಠ ಬೇಡ ಎಂದು ಆಟಕ್ಕೆ ಕಳುಹಿಸಿದರೆ ಪೋಷಕರೂ ತಕರಾರು ಮಾಡುವುದುಂಟು. ಆದರೆ, ಇಲ್ಲಿ ಯಾರೂ ಈ ಬಗ್ಗೆ ತಕರಾರು ಮಾಡುತ್ತಿಲ್ಲ. ಏಕೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಇದು ಬಸವನಾಡು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ರಾಜನಾಳ ತಾಂಡಾದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಇಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೆ 293 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಾರೆ. ಶಿಕ್ಷಕರ ಕೊರತೆಯೂ ಇಲ್ಲಿದೆ. ಇದೆಲ್ಲದರ ನಡುವೆ ಶಿಕ್ಷಣ ನೀಡಲಾಗುತ್ತಿದ್ದರು, ಮಳೆ ಇವರ ಪಾಲಿಗೆ ಶಾಪವಾಗಿದೆ.
ಈವರೆಗೆ ಮುಂಗಾರು ಕೈಕೊಟ್ಟಿತ್ತು. ಆದರೆ, ಕಳೆದ ಎರಡು ದಿನಗಳಿಂದ ವಿಜಯಪುರ ಜಿಲ್ಲೆಯ ಅಲ್ಲಲ್ಲಿ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಆದರೆ, ಇದೇ ಮಳೆ ಈ ಶಾಲೆಯ ಪಾಲಿಗೆ ಆತಂಕ ತಂದೊಡ್ಡಿದೆ. ಇಲ್ಲಿನ ಮಕ್ಕಳು ಶಾಲಾ ಕೊಠಡಿಯ ಹೊರಗಡೆ ಪಾಠ ಕೇಳಬೇಕು. ಇಲ್ಲವೇ, ಆಟವಾಡಬೇಕು. ಇಂಥ ದುಸ್ಥಿತಿ ಎದುರಾಗಿದೆ.
ಇಲ್ಲಿನ ಶಾಲೆಯಲ್ಲಿ ಒಂಬತ್ತು ಕೊಠಡಿಗಳಿದ್ದು, ಅವುಗಳಲ್ಲಿ ಮೂರು ಕೊಠಡಿಗಳು ಶಿಥಿಲಗೊಂಡಿವೆ. ಹೊಸದಾಗಿ ಎರಡು ಕೊಠಡಿಗಳು ಮಂಜೂರಾಗಿ ಒಂದು ಕೊಠಡಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಆದರೆ, ಈಗ ಇರುವ ಕೊಠಡಿಗಳು ಮಳೆಯಿಂದಾಗಿ ಸೋರಿಕೆಯಾಗುತ್ತಿವೆ. ಶಾಲಾ ಕೊಠಡಿಯ ಮೇಲ್ಛಾವಣಿಯ ಕಾಂಕ್ರೀಟ್ ಹಲವಾರು ಕಡೆ ಉದುರಿ ಬಿದ್ದಿದ್ದು, ವಿದ್ಯಾರ್ಥಿಗಳು ಕುಳಿತುಕೊಳ್ಳುವ ನೆಲಹಾಸು ಕೂಡ ನೀರು ಸೋರಿ ಗಲೀಜಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಒಂದು ಶಾಲೆಯ ಹೊರಗಡೆ ಪಾಠ ಕೇಳಬೇಕು. ಇಲ್ಲವೇ, ಶಾಲೆಯ ಮುಂಭಾಗದಲ್ಲಿರುವ ಮೈದಾನದಲ್ಲಿ ಆಟವಾಡಬೇಕಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜನಾಳ ಎಲ್. ಟಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷ ಬಾಬು ಪವಾರ. ಶಾಲೆಯ ಕೊಠಡಿಗಳ ಅವ್ಯವಸ್ಥೆ ಕುರಿತು ಕಳೆದ ವರ್ಷದಿಂದಲೇ ಸಂಬಂಧಿಸಿದ ಬಿಇಓ, ಡಿಡಿಪಿಐ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಎರಡು ಹೊಸ ಕೊಠಡಿಗಳನ್ನು ಮಂಜೂರು ಮಾಡಿದ್ದಾರಾದರೂ, ಒಂದೂ ಕಟ್ಟಡ ಪೂರ್ಣಗೊಂಡಿಲ್ಲ. ಈಗ ವಿದ್ಯಾರ್ಥಿಗಳು ಹೊರಗಡೆಯೇ ಪಾಠ ಕೇಳಬೇಕಿದೆ. ಹೀಗಾಗಿ ಕೆಲವು ಕಡೆ ಹೊರಗಡೆ ಪಾಠ ಕೇಳಲು ಜಾಗವೂ ಸರಿಯಿಲ್ಲ. ಶಾಲೆಗೆ ಬಂದಿರುವ ಮಕ್ಕಳನ್ನು ಮನೆಗೆ ವಾಪಸ್ ಕಳುಹಿಸುವ ಬದಲು ಮೈದಾನದಲ್ಲಿಯೇ ಆಟವಾಡಲು ಕಳುಹಿಸಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.
ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳು ನಮ್ಮೂರ ಶಾಲೆಯ ಕೊಠಡಿಗಳನ್ನು ಕೂಡಲೇ ದುರಸ್ಥಿ ಮಾಡಿ ನವೀಕರಣ ಮಾಡಬೇಕು. ಅಲ್ಲದೇ, ಹೊಸದಾಗಿ ಕನಿಷ್ಠ ಐದಾರು ಕೊಠಡಿಗಳನ್ನಾದರೂ ನಿರ್ಮಿಸಬೇಕು. ಅಲ್ಲದೇ, ಶಿಕ್ಷಕರ ಕೊರತೆಯನ್ನೂ ನೀಗಿಸಬೇಕು. ಇಲ್ಲದಿದ್ದರೆ, ನಮ್ಮೂರಿನಲ್ಲಿ ಶಾಲೆ ಇದ್ದರೂ ವಿದ್ಯಾರ್ಥಿಗಳು ಅಭ್ಯಾಸ ಮಾಡಲು ಪ್ರಯೋಜನವಾಗುವುದಿಲ್ಲ ಎಂದು ಬಾಬು ಪವಾರ ಅಲವತ್ತುಕೊಂಡಿದ್ದಾರೆ.