ವಿಜಯಪುರ: ಒಂದು ಕಾಲದಲ್ಲಿ ಬರದ ನಾಡು ಎಂದು ಅಪಖ್ಯಾತಿ ಪಡೆದಿದ್ದ ಬಸವನಾಡು ಈಗ ಹಸಿರು ನಾಡಾಗುವತ್ತ ಸಾಗುತ್ತಿದೆ. ಆಲಮಟ್ಟಿ ಜಲಾಷಯ ನಿರ್ಮಾಣ ಮತ್ತು ಈ ಜಲಾಷಯದಿಂದ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ನೀರಾವರಿ ಯೋಜನೆಗಳು ಭೂತಾಯಿಗೆ ನೀರುಣಿಸುತ್ತಿದ್ದು, ವಾತಾವರಣ ಹಸಿರಿನತ್ತ ಸಾಗುವಂತೆಯೂ ಮಾಡಿದೆ.
ಇದಕ್ಕೆ ಮತ್ತೋಂದು ಉದಾಹರಣೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಪ್ರವಾಸಿಗರನ್ನು ಸೆಳೆಯುತ್ತಿರುವ ಮಾನವ ನಿರ್ಮಿತ ಅರಣ್ಯ ಪ್ರದೇಶ. ಇಲ್ಲಿನ ಹೆಲಿಪ್ಯಾಡ್ ಪಕ್ಕದಲ್ಲಿದ್ದ ಖಾಲಿ ಜಮೀನಿನಲ್ಲಿ ಈಗ ಹುಲುಸಾಗಿ ಅರಣ್ಯ ಪ್ರದೇಶ ಬೆಳೆದಿದೆ. ನೋಡಲು ಇದು ಕಾಡಿಗಿಂತಲೂ ಕಡಿಮೆಯೇನಿಲ್ಲ. ಆಲಮಟ್ಟಿ ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿಗೂ ಭೇಟಿ ನೀಡಿ ಸಂತಸ ಪಡುತ್ತಿದ್ದಾರೆ.
ಇಲ್ಲಿಗೆ ಭೇಟಿ ನೀಡಿದರೆ ಸಾಕು ಕಿವಿ ಗಡಚಿಕ್ಕುವ ಶಬ್ದ ಕೇಳಿಸುತ್ತದೆ. ಅರೇ ಇದೇನಿದು ಎಂದು ಅಚ್ಚರಿ ಪಡುವಷ್ಟು ಅಲ್ಲಿ ಶಬ್ದವಿರುತ್ತದೆ. ತಲೆ ಮೇಲೆತ್ತಿದರೆ ಸಾಕು ಅಲ್ಲಿ ತಲೆ ಕೆಳಗೆ ಮಾಡಿ, ಕಾಲು ಮೇಲು ಮಾಡಿ ಗಿಡದ ಟೊಂಗಿಗಳನ್ನು ಹಿಡಿದು ಉಲ್ಟಾ ನೇತಾಡುತ್ತಿರುವ ಕಣಕಪ್ಲಿಗಳು ಅಂದರೆ ಬಾವಲಿಗಳು ರಾಚುತ್ತವೆ. ಇಲ್ಲಿ ಎಲ್ಲಿ ನೋಡಿದರೂ ಪ್ರತಿಯೊಂದು ಟೊಂಗೆಯಲ್ಲಿ ನಾಲ್ಕಾರು ಬಾವಲಿಗಳು ಕಾಣಸಿಗುತ್ತವೆ.
ಕಳೆದ ಹಲವಾರು ವರ್ಷಗಳ ಹಿಂದೆ ಇದ್ದ ತರಹೇವಾರಿ ಪಕ್ಷಿಗಳು, ಬಾವಲಿಗಳು ಇತ್ತೀಚಿನ ಆಧುನಿಕ ತಂತ್ರಜ್ಞಾನದ ಪರಿಣಾಮ ಬಹುತೇಕ ಮಾಯವಾಗಿದ್ದವು. ಒಂದೆಡೆ ಗಿಡಮರಗಳ ಕೊರತೆ ಮತ್ತೋಂದೆಡೆ ಮೊಬೈಲ್ ಸಿಗ್ನಲ್ ಮತ್ತೀತರ ಕಾರಣಗಳಿಂದ ಈ ಪಕ್ಷಿಗಳು ವಾಸಿಸಲು ಸಮಸ್ಯೆಯಾಗಿತ್ತು ಎಂದೇ ಹೇಳಲಾಗುತ್ತಿದೆ. ಇದೀಗ ಇಲ್ಲಿ ಸೋಂಪಾಗಿ ಬೆಳೆದಿರುವ ಗಿಡಮರಗಳು ಮತ್ತೆ ಪಕ್ಷಿಗಳನ್ನು ಕೈಬೀಸಿ ಕರೆಯುತ್ತಿದ್ದು, ಅವುಗಳಿಗೆ ಆಶ್ರಯ ಕಲ್ಪಿಸುತ್ತಿವೆ.
ಒಂದೆಡೆ ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರ ಜಲಾಷಯ. ಮತ್ತೋಂದೆಡೆ ಕೃಷ್ಣಾ ನದಿ. ಲಭ್ಯವಿರುವ ಸಾಕಷ್ಟು ನೀರು ಈ ಬಾನಾಡಿಗಳಿಗೆ ವರದಾನವಾಗಿವೆ. ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಬಾವಲಿಗಳು ಇಲ್ಲಿದ್ದು, ಆಲಮಟ್ಟಿ ಜಲಾಷಯ, ರಾಕ್ ಗಾರ್ಡನ್, ಸಂಗೀತ ಕಾರಂಜಿ ನೋಡಲು ಆಗಮಿಸುವ ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿವೆ.
ಒಂದಕ್ಕಿಂತ ಮತ್ತೋಂದು ಬಾವಲಿಗಳು ಇಲ್ಲಿ ವಿಭಿನ್ನವಾಗಿದ್ದು, ದೊಡ್ಡ ಗಾತ್ರ, ಚೂಪಾದ ಮೂಗು, ವಿಭಿನ್ನ ಹಾವಭಾವಗಳನ್ನು ಹೊಂದಿವೆ. ಹಗಲು ಹೊತ್ತು ಮರದ ಟೊಂಗೆಗಳಿಗೆ ಜೋತುಬಿಳುವ ಈ ಕಣಕಪ್ಲಿಗಳು ರಾತ್ರಿ ಆಯಿತೆಂದರೆ ಸಾಕು ಆಹಾರ ಹುಡುಕಿ ಬೇಟೆಗೆ ಹೊರಡುತ್ತವೆ. ಆದರೆ, ಹಗಲು ಹೊತ್ತಿನಲ್ಲಿ ನೇತಾಡುತ್ತಲೇ ಇವುಗಳು ಹೊರ ಹಾಕುವ ಕಿವಿ ಗಡಚಿಕ್ಕುವ ಶಬ್ದ ಇಲ್ಲಿಗೆ ಭೇಟಿ ನೀಡುವ ಎಲ್ಲರ ಗಮನ ಸೆಳೆಯುತ್ತವೆ.
ಈ ಭಾಗದಲ್ಲಿ ಈಗಾಗಲೇ ಪರಿಸರ ಮತ್ತು ಪ್ರಾಣಿ, ಪಕ್ಷಿಗಳಿಗೆ ಪೂರಕವಾದ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ತರಹೇವಾರಿ ಪಕ್ಷಿಗಳೂ ಇಲ್ಲಿಗೆ ಬಂದು ವಾಸಿಸ ತೊಡಗಿವೆ. ಬಹುತೇಕ ಕಾಡುಗಳು ಮತ್ತು ನಿರ್ಜನ ಪ್ರದೇಶಗಳಲ್ಲಿಯೇ ವಾಸಿಸುವ ಈ ಬಾವಲಿಗಳು ಈಗ ಆಲಮಟ್ಟಿಯಂಥ ಪ್ರವಾಸಿ ತಾಣಗಳತ್ತ ವಾಸಸ್ಥಾನ ಬದಲಾಯಿಸಿವೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಕಣಕಪ್ಲಿಗಳು ಅಂದರೆ ಬಾವಲಿಗಳ ಬಗ್ಗೆ ಪಕ್ಷಿತಜ್ಞರು ಅಧ್ಯಯನ ನಡೆಸಿದರೆ, ವಿಶಿಷ್ಠ ಪಕ್ಷಿ ಸಂಕುಲವನ್ನು ಸಂರಕ್ಷಿಸಿ ಬೆಳೆಸಬಹುದಾಗಿದೆ ಎಂದು ಪಕ್ಷಿ ಪ್ರೀಯರು ಅಭಿಪ್ರಾಯ ಪಟ್ಟಿದ್ದಾರೆ.