ಬೆಂಗಳೂರಿನಿಂದ ಕಾಶಿ ವಿಶ್ವನಾಥ ಸನ್ನಿಧಿಗೆ 50 ಜನರ ಪಾದಯಾತ್ರೆ- ಬಸವನಾಡಿನಲ್ಲಿ ಭಕ್ತರಿಗೆ ಬಸವ ನಾಡಿನಲ್ಲಿ ಆತಿಥ್ಯ ನೀಡಿದ ಶಿವಭಕ್ತರು

ವಿಜಯಪುರ: ಲೋಕಕಲ್ಯಾಣಕ್ಕಾಗಿ ಬೆಂಗಳೂರಿನ ಯಲಹಂಕ ಉಪನಗರದ ಗುರುಗಳಾದ ಶ್ರೀ ಡಿ. ಚಿಕ್ಕೀರಪ್ಪನವರ ನೇತೃತ್ವದಲ್ಲಿ 50 ಜನ ಪಾದಯಾತ್ರೆ ನಡೆಸುತ್ತಿದ್ದು, ಈ ತಂಡ ಬಸವನಾಡು ವಿಜಯಪುರಕ್ಕೆ ಆಗಮಿಸಿದೆ. 

ಯಲಹಂಕದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಿಂದ ಪರಮ ಪವಿತ್ರ ಕಾಶಿ ಕ್ಷೇತ್ರಕ್ಕೆ ಜುಲೈ 8 ಶನಿವಾರದಿಂದ ಪಾದಯಾತ್ರೆ ಆರಂಭವಾಗಿದ್ದು, ಕಾಶಿ ವಿಶ್ವನಾಥ ಮಂದಿರಕ್ಕೆ ಸುಮಾರು 80 ದಿನಗಳ ಪಾದಯಾತ್ರೆ ಕೈಗೊಂಡಿದ್ದಾರೆ.  ಡಿ. ಚಿಕ್ಕಿರಪ್ಪ ಅವರ ನೇತೃತ್ವದಲ್ಲಿ ಸರಿ ಸುಮಾರು 50 ಕ್ಕೂ ಹೆಚ್ಚು ಪಾದಯಾತ್ರೆಯನ್ನು ನಡೆಸುತ್ತಿದ್ದು, ವಿಜಯಪುರಕ್ಕೆ ಆಗಮಿಸಿದಾಗ ಅವರಿಗೆ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಗುಂಡು ಹನಮಶೆಟ್ಟಿ, ರಾಜು ಚೋರಗಿ, ಮಹೇಶ ಬಿದನೂರು, ವಿನೋದ ಆಲೂರ, ಸಂಗು ಹಳ್ಳಿ ಮುಂತಚಾದವರು ಆತಿಥ್ಯ ನೀಡಿ ಗೌರವಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿ. ಚಿಕ್ಕೀರಪ್ಪ ಲೋಕ ಕಲ್ಯಾಣಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೇವೆ.  ಜೊತೆಗೆ ದೇವರು ನಮಗೂ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸಿ ಈ ಯಾತ್ರೆ ಕೈಗೊಂಡಿದ್ದೇವೆ.  ಪ್ರತಿದಿನ 35 ರಿಂದ 40 ಕಿ. ಮೀ. ನಡೆಯುತ್ತೇವೆ ಎಂದು ತಿಳಿಸಿದ್ದಾರೆ.

ವಿಜಯಪುರಕ್ಕೆ ಆಗಮಿಸಿದ ಬೆಂಗಳೂರಿನ ಪಾದಯಾತ್ರಿಗಳ ತಂಡಕ್ಕೆ ಶಿವಭಕ್ತರು ಆತಿಥ್ಯ ನೀಡಿ ಗೌರವಿಸಿದರು

ಬೆಂಗಳೂರಿನಿಂದ ಈಗ ವಿಜಯಪುರಕ್ಕೆ ಆಗಮಿಸಿದ್ದು, ಮಾರ್ಗ ಮಧ್ಯದಲ್ಲಿ ಬರುವ ತೀರ್ಥಯಾತ್ರೆ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ.  ಇನ್ನು ಮುಂದೆ ಮಹಾರಾಷ್ಟ್ರದ ಪಂಢರಾಪುರ, ಭೀಮಾಶಂಕರ, ತ್ರಯಂಬಕೇಶ್ವರ, ನಾಸೀಕ, ಘೃಶ್ನೇಶ್ವರ, ನಾಸಿಕ, ಓಂಕಾರೇಶ್ವರ, ಮಹಾಕಾಳೇಶ್ವರ, ಉಜ್ಜಯಿನಿ, ಭೋಪಾಲ, ಖಜುರಾಹೋ, ಚಿತ್ರಕೂಟ, ಆಯೋಧ್ಯೆ ಮೂಲಕ ಕಾಶಿ ವಿಶ್ವನಾಥನ ದರ್ಶನ ಮಾಡುಲಿದ್ದೇವೆ ಎಂದು ಅವರು ತಿಳಿಸಿದರು.

ವಿಶ್ವಾದ್ಯಂತ ಶಾಂತಿ, ಸುಖ, ಸಮೃದ್ಧಿ ನೆಲೆಸಲಿ.  ಅಭಿವೃದ್ಧಿ ಕಾರ್ಯಗಳು ಮುಂದುವರೆಯಲಿ.  ವರುಣ ದೇವ ಕೃಪೆ ತೋರಿ ನಾಡಿನಾದ್ಯಂತ ಸಮೃದ್ಧಿಯಾಗಲಿ.  ಒಟ್ಟಾರೆ ಎಲ್ಲೆಡೆ ಪ್ರೀತಿ, ವಿಶ್ವಾಸ, ಪರೋಪಕಾರ ಹೆಚ್ಚಾಗಲಿ ಎಂದು ಈ ಯಾತ್ರೆ ಕೈಗೊಂಡಿದ್ದೇವೆ.  ಮಾರ್ಗದುದ್ದಕ್ಕೂ ನಾವು ವಾಸ್ತವ್ಯ ಮಾಡುವ ಪ್ರದೇಶಗಳಲ್ಲಿ ಸ್ಥಳೀಯರು ಮನಸಾರಿ ವ್ಯವಸ್ಥೆ ಮಾಡುತ್ತಿದ್ದಾರೆ.  ನಮ್ಮ ತಂಡದ ಯಾತ್ರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಆತಿಥ್ಯ ನೀಡುವ ಮೂಲಕ ಹೃದಯವಂತಿಕೆ ತೋರಿಸುತ್ತಿದ್ದಾರೆ.  ಅಲ್ಲದೇ, ನಮ್ಮ ಯಾತ್ರೆಗೆ ಶುಭ ಕೋರಿ ಹರಸುತ್ತಿದ್ದಾರೆ.  ನಮ್ಮ ಯಾತ್ರೆಗೆ ಜನಸಾಮಾನ್ಯರಿಂದ ಸಿಗುತ್ತಿರುವ ಪ್ರೀತಿ ಮತ್ತು ಬೆಂಬಲ ನಮ್ಮ ಯಾತ್ರೆಯ ಹುಮ್ಮಸ್ಸನ್ನು ಹೆಚ್ಚಿಸುತ್ತಿದೆ.  ಅಷ್ಟೇ ಅಲ್ಲ, ಈ ಯಾತ್ರೆಯ ಉದ್ಧೇಶ ಮತ್ತು ನಾವು ಪಸರಿಸುತ್ತಿರುವ ಸಂದೇಶದ ಉದ್ಧೇಶ ಸಾರ್ಥಕವಾಗುತ್ತಿದೆ ಎಂದು ಅವರು ತಿಳಿಸಿದರು.

ವಿಜಯಪುರಕ್ಕೆ ಆಗಮಿಸಿದ್ದ ಬೆಂಗಳೂರಿನ ಯಲಹಂಕದ 50 ಜನ ಪಾದಯಾತ್ರಿಗಳ ತಂಡಕ್ಕೆ ಇಲ್ಲಿನ ಮಾಜಿ ಸಚಿವ ಈರಣ್ಣ ಪಟ್ಟಣಶೆಟ್ಟಿ ಮತ್ತು ಸ್ನೇಹಿತರು ರಾತ್ರಿ ತಂಗಲು ಊಟ ಮತ್ತು ಬೆಳಿಗ್ಗೆ ಉಪಹಾರ ಸೇರಿದಂತೆ ಅವರಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ನೀಡುವ ಮೂಲಕ ಕಾಶಿ ವಿಶ್ವನಾಥನ ಭಕ್ತರಿಗೆ ತಮ್ಮ ಅಳಿಲು ಸೇವೆ ಸಲ್ಲಿಸಿದ್ದಾರೆ.  ಈ ಮೂಲಕ ದೈವ ಭಕ್ತಿ ಮೆರೆದಿದ್ದಾರೆ.

Leave a Reply

ಹೊಸ ಪೋಸ್ಟ್‌