ವಿಜಯಪುರ: ಮುಂಗಾರು ಬಹಳ ತಡವಾಗಿರುವುದರಿಂದ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಿದ್ದು, ರೈತರ ಜಮೀನಿಗೂ ನೀರು ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಡಿಸಿಎಂ ಮತ್ತು ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ ಅವರಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ(ICC) ರಚಿಸುವಂತೆ ಮತ್ತು ನೀರಾವರಿ ಸಲಹಾ ಸಮಿತಿ ಸಭೆ ಕರೆಯುವಂತೆ ಪತ್ರ ಬರೆದಿದ್ದಾರೆ.
ಶಾಸಕರು ಬರೆದಿರುವ ಪತ್ರದ ಪ್ರತಿ ಬಸವನಾಡು ವೆಬ್ ಗೆ ಲಭ್ಯವಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಈವರೆಗೂ ನೇಮಕಾತಿ ಮಾಡಿರುವುದಿಲ್ಲ. ಆದ ಕಾರಣ ತುರ್ತಾಗಿ ಯೋಜನೆಯ ನೀರಾವರಿ ಸಲಹಾ ಸಮಿತಿ(ICC)ಯನ್ನು ರಚಿನೆ ಮಾಡುವುದು.
ವಾಡಿಕೆಯಂತೆ ಜುಲೈ 15ಕ್ಕೆ ನೀರು ಹರಿಸುವುದು ಸಂಪ್ರದಾಯವಾಗಿರುತ್ತದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಕಾಲುವೆಗಳಿಗೆ ನೀರು ಹರಿಸಿರುವುದಿಲ್ಲ. ಪ್ರಸ್ತುತ ಮಹಾರಾಷ್ಟ್ರ ಭಾಗದಲ್ಲಿ ಯಥೇಚ್ಛವಾಗಿ ಮಳೆ ಸುರಿಯುತ್ತಿರುವುದರಿಂದ ಆಲಮಟ್ಟಿ ಜಲಾಷಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿರುತ್ತದೆ. ಆದಕಾರಣ ತುರ್ತಾಗಿ ನೀರಾವರಿ ಸಲಹಾ ಸಮಿತಿಯ(ICC) ಸಭೆಯನ್ನು ಕರೆದು ಕಾಲುವೆಗಳಿಗೆ ನೀರು ಹರಿಸುವುದರ ಬಗ್ಗೆ ತೀರ್ಮಾನ ಕೈಗೊಳ್ಳುವುದು ಅತೀ ಅವಶ್ಯಕವಾಗಿರುತ್ತದೆ.
ಆದ್ದರಿಂದ ರಾಜ್ಯ ಸರಕಾರ ಕೂಡಲೇ ಕೃಷ್ಣಾ ನದಿ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ(ICC)ಯನ್ನು ರಚಿಸುವುದು ಹಾಗೂ ನೀರಾವರಿ ಸಲಹಾ ಸಮಿತಿ(ICC) ಸಭೆಯನ್ನು ಕರೆದು ಆ ಭಾಗದ ಜನಪ್ರತಿನಿಧಿಗಳೊಂದಿಗೆ ಸೂಕ್ತ ನಿರ್ಣಯ ಕೈಗೊಳ್ಳಬೇಕಾಗಿ ತಮ್ಮಲ್ಲಿ ಕೋರುತ್ತೇನೆ ಎಂದು ಶಾಸಕ ಯಶವಂತರಾಯಗೌಡ ವಿ. ಪಾಟೀಲ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ ಅವರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.