ವಿಜಯಪುರ: ಸರಕಾರ ಪತನ ಹಗಲು ಕನಸು. ನಾವೆಲ್ಲ 136 ಜನ ಒಗ್ಗಟ್ಟಿನಿಂದ ಇದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಕನ್ನೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಕೆಡವಲು ಸಿಂಗಾಪುರದಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ ನೀಡಿರುವ ಹೇಳಿಕೆಯ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ನಾವು 136 ಶಾಸಕರು ಒಂದಾಗಿದ್ದೇವೆ. ಈ ಸರಕಾರ ಕೆಡವಲು 60 ಶಾಸಕರು ಬೇಕಾಗುತ್ತದೆ. ಒಬ್ಬರೆ ಒಬ್ಬರು ಶಾಸಕರೂ ಕೂಡ ಹೋಗುವುದಿಲ್ಲ. ಇದು ಹಗಲು ಕನಸು. ಇದಾವುದೂ ಆಗುವುದಿಲ್ಲ. ನಮ್ಮ ಸರಕಾರ ಸಂಪೂರ್ಣವಾಗಿ ಐದು ವರ್ಷ ಅಧಿಕಾರದಲ್ಲಿ ಇರುತ್ತದೆ. ಒಳ್ಳೆಯ ಕೆಲಸ ಮಾಡುತ್ತೇವೆ. ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸಚಿವರ ವಿರುದ್ಧ ಶಾಸಕರು ಅಸಮಾಧಾನ ವಿಚಾರ
ಸಚಿವರ ವಿರುದ್ಧ ಶಾಸಕರು ಅಸಮಾಧಾನಗೊಂಡಿದ್ದಾರೆ. ಅಲ್ಲದೇ, ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದಿದ್ದಾರೆ ಎಂಬ ವಿಷಯದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸಮಾಧಾನ ಇರುವುದು ಸಹಜ. ಹಾಗೇನಾದರೂ ಇದ್ದರೆ ಅದು ಸಿಎಲ್ ಪಿಯಲ್ಲಿ ಚರ್ಚೆಯಾಗುತ್ತದೆ. ಅಲ್ಲಿ ಬಗೆಹರಿಸುವ ಕೆಲಸ ಆಗಲಿದೆ. ಶಾಸಕಾಂಗ ಸಭೆಯಲ್ಲಿ ನಮಗೆ ಅನುದಾನ ಬಂದಿಲ್ಲ ಎಂದು ಹೇಳಿಕೊಳ್ಳಬಹುದು ಎಂದು ಹೇಳಿದರು.
ಸಿಎಂ, ಡಿಸಿಎಂ ಯಾವುದೇ ಪತ್ರ ಬಂದಿಲ್ಲ ಎಂದು ಹೇಳಿರುವ ವಿಚಾರ, ನನಗೂ ಕೂಡ ಗೊತ್ತಿಲ್ಲ. ಪತ್ರವನ್ನು ನಾನೂ ನೋಡಿಲ್ಲ. ಮಾಧ್ಯಮವೊಂದರಲ್ಲಿ ಅದನ್ನು ಬಿಟ್ಟಿದ್ದರು ಶಾಸಕರ ಮೇಲೂ ಬಹಳಷ್ಟು ಒತ್ತಡಗಳಿರುತ್ತವೆ. ಮತಕ್ಷೇತ್ರದ ಅನುದಾನ, ಇನ್ನಿತರ ಕೆಲಸಗಳ ಒತ್ತಡ ಇರುತ್ತವೆ. ಅದನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಬಗೆಹರಿಸಿಕೊಳ್ಳುತ್ತವೆ ಎಂದು ಎಂ. ಬಿ. ಪಾಟೀಲ ಹೇಳಿದರು.
ಬೆಂಗಳೂರು ಗ್ರಾಮೀಣ ಭಾಗಕ್ಕೆ ಮೆಟ್ರೋ ರೈಲು ಸೇವೆ ವಿಸ್ತಾರ ವಿಚಾರ
ಇದೇ ವೇಳೆ ಬೆಂಗಳೂರು ಗ್ರಾಮಾಂತರ ಭಾಗಕಕ್ಕೆ ಮೆಟ್ರೋ ರೈಲು ವಿಸ್ತರಣೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 148 ಕಿ. ಮೀ. ಒಂದೆ ಹಂತದ ಕೆಲಸ ನಡೆಯುತ್ತಿದೆ. 2ನೇ ಹಂತದಲ್ಲಿ ನಾವು ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರದ ಬಗ್ಗೆ ಗಮನ ಹರಿಸಿದ್ದೇವೆ. ಬೆಂಗಳೂರಿನಿಂದ ಸುಮಾರು 60 ಕಿ. ಮೀ. ಸುತ್ತಮುತ್ತ ತುಮಕೂರು, ಹೊಸೂರು, ಮಾಗಡಿ ಕಡೆ ಬೆಂಗಳೂರು ಬೆಳೆಯುತ್ತಿದೆ. ಅಲ್ಲಿ ಕಾರ್ಖಾನೆಗಳು ಬೆಳೆಯುತ್ತಿವೆ. ಜನವಸತಿ ಕೂಡ ಬೆಳೆಯುತ್ತಿವೆ. ಬೆಂಗಳೂರು ಮಧ್ಯಭಾಗದಲ್ಲಿ ಬಾಡಿಗೆ ಅಥವಾ ಸ್ವಂತ ಮನೆ ಖರೀದಿಸಲು ಬೆಲೆ ದುಬಾರಿಯಾಗಿದೆ. ಬಹಳ ಕಷ್ಟವಾಗುತ್ತದೆ. ಮಧ್ಯಮ ವರ್ಗದವರು, ಕಾರ್ಮಿಕರಿಗೆ ಭಾರವಾಗುತ್ತದೆ. ಹೀಗಾಗಿ ಮುಂಬೈ ಮತ್ತು ಕೊಲ್ಕೊತ್ತಾದಲ್ಲಿ ಲೋಕಲ್ ಟ್ರೇನ್ ರೀತಿಯಲ್ಲಿ ಸಬ್ ಅರ್ಬನ್ ರೇಲ್ವೆ ವಿಸ್ತರಿಸಲು ಯೋಜನೆ ರೂಪಿಸಿದ್ದೇವೆ. ಪ್ರಥಮ ಹಂತದ ಯೋಜನೆ ಮುಗಿಸುತ್ತೇವೆ. ಎರಡನೇ ಹಂತದ ಸಾಧ್ಯತಾ ಯೋಜನೆಯನ್ನು ರೂಪಿಸುತ್ತೇವೆ. ಈ ಕುರಿತು ರೇಲ್ವೆ ಇಲಾಖೆಗೆ ಪತ್ರ ಬರೆದಿದ್ದೇವೆ. ಆ ಸಾಧ್ಯತಾ ವರದಿ ಬಂದ ಮೇಲೆ ಪ್ರೊಜೆಕ್ಟ್ ವರದಿ ಮಾಡಿಸಿ ಕೆರೈಡ್ ನಂತೆ ಕೇಂದ್ರ ಮತ್ತು ರಾಜ್ಯ ಸರಕಾರ ಶೇ. 50ರಷ್ಟು ಹಣ ನೀಡುವ ಕುರಿತು ನಿರ್ಧರಿಸಬೇಕಿದೆ. ಈ ಕುರಿತು ನಾವು ಹಣಕಾಸು ಒದಗಿಸುವ ಕುರಿತು ಸಿಎಂ ಮತ್ತು ರೇಲ್ವೆ ಇಲಾಖೆಯೊಂದಿಗೆ ಚರ್ಚಿಸುತ್ತೇವೆ. ಇದರಿಂದ ಬೆಂಗಳೂರು ಮಧ್ಯ ಭಾಗದ ಮೇಲೆ ಇರುವ ಒತ್ತಡ ಕಡಿಮೆಯಾಗಲಿದೆ. ಸೆಟಲೈಟ್ ಟೌನ್ಸ್, ಜನ ಉದ್ಯಮಗಳಿಗೆ ಸಮೀಪ ಮನೆ ನಿರ್ಮಿಸಿ ವಾಸಿಸಬಹುದು. ಸಮಯ ಉಳಿತಾಯವಾಗಲಿದೆ. ಜನರಿಗೆ ಮತ್ತು ಉದ್ಯಮಗಳಿಗೂ ಇದರಿಂದ ಬಹಳ ಉಪಯೋಗವಾಗಲಿದ್ದು, ಇದನ್ನು ದೃಷ್ಠಿಯಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗುತ್ತಿದೆ ಎಂ. ಬಿ. ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ, ಕಾಂಗ್ರೆಸ್ ಮುಖಂಡ ಚನ್ನಪ್ಪ ಕೊಪ್ಪದ ಮುಂತಾದವರು ಉಪಸ್ಥಿತರಿದ್ದರು.