ಅಪರಾಧಿಗಳು ಯಾವುದೇ ಜಾತಿ, ಧರ್ಮ, ಪಕ್ಷದವರಿದ್ದರೂ ಶಿಕ್ಷೆಯಾಗಬೇಕು- ನಿರಪರಾಧಿಗಳಿಗೆ ಅನ್ಯಾಯವಾಗಬಾರದು- ಎಂ. ಬಿ. ಪಾಟೀಲ

ವಿಜಯಪುರ: ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣಗಳ ಕುರಿತು ಶಾಸಕ ತನ್ವೀರ್ ಸೇಠ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಪತ್ರ ಬರೆದಿರುವುದು ತಪ್ಪಲ್ಲ.  ಅದೊಂದು ಸಹಜ ಪ್ರಕ್ರಿಯೆಯಾಗಿದೆ.  ಆ ಪತ್ರದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ರೊಟೀನ್ ಮ್ಯಾಟರ್.  ತನ್ವಿರ್ ಸೇಠ ಬರೆದಿರುವ ಪತ್ರವನ್ನು ಗೃಹ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಿದ್ದಾರೆ.  ಯಾವಾಗಲೂ ಅಪರಾಧಿಗಳಿಗೆ ಶಿಕ್ಷೆಯಾಗಬೇಕು.  ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು.  ನಮ್ಮ ಸಂವಿಧಾನವೂ ಅದನ್ನೇ ಹೇಳುತ್ತದೆ.  ತನಿಖೆಯಲ್ಲಿ ಯಾರು ಅಪರಾಧಿ, ಯಾರು ಅಪರಾಧಿಗಳಲ್ಲ ಎಂಬುದು ಗೊತ್ತಾಗುತ್ತದೆ.  ಅದನ್ನು ಒಂದೇ ರೀತಿ ನೋಡಲು ಆಗುವುದಿಲ್ಲ.  ಅವರು ಏನು ಪತ್ರ ಬರೆದಿದ್ದಾರೆ ನನಗೆ ಗೊತ್ತಿಲ್ಲ.  ಅಪರಾಧಿಗಳಾಗಿದ್ದರೆ, ಯಾವುದೇ ಪಕ್ಷ, ಧರ್ಮ, ಜಾತಿಯಾವರಾಗಿರಲಿ ಶಿಕ್ಷೆಯಾಗಬೇಕು.  ನಿರಪರಾಧಿಗಳಾಗಿದ್ದರೆ, ಅವರು ಯಾವುದೇ ಪಕ್ಷ, ಜಾತಿ, ಧರ್ಮದವರಾಗಿದ್ದರೂ ಅವರಿಗೆ ಅನ್ಯಾಯವಾಗಬಾರದು.  ಆ ದಿಸೆಯಲ್ಲಿ ತನ್ವಿರ್ ಸೇಠ ಅವರ ಪತ್ರದ ವಿಷಯದಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ರೀತಿ ಪತ್ರ ಬರೆಯುವುದರಿಂದ ತನಿಖಾಧಿಕಾರಿಗಳ ನೈತಿಕತೆ ಕುಸಿಯಲಿದೆ ಎಂದು ಪ್ರತಿಪಕ್ಷಗಳ ಆರೋಪದ ಕುರಿತು ಸಚಿವರು ಖಾರವಾಗಿ ಪ್ರತಿಕ್ರಿಯೆ ನೀಡಿದರು.  ಹಿಂದಿನ ಗೃಹ ಸಚಿವರು ಪೊಲೀಸರ ಬಗ್ಗೆ ಯಾವ ಶಬ್ದ ಬಳಸಿದ್ದರು ಗೊತ್ತಿಲ್ವಾ? ನಾನೂ ಗೃಹ ಸಚಿವನಾಗಿದ್ದೆ.  ಔರಾದಕರ ವರದಿ ಜಾರಿಯ ಬಗ್ಗೆ ನಾನು ಸಾಕಷ್ಟು ಪ್ರಯತ್ನ ಮಾಡಿದ್ದೇನೆ.  ಪೊಲೀಸರ ಸೌಲಭ್ಯಗಳಲ್ಲಿ ತಾರತಮ್ಯ ಇರಬಾರದು ಎಂದು ಅಂದೇ ಸಿಎಂ ಗಮನಕ್ಕೆ ತಂದು ಪ್ರಯತ್ನ ಮಾಡಿದ್ದೇನೆ.  ಇವರು ಗೃಹ ಸಚಿವರಾಗಿದ್ದಾಗ ಏನು ಮಾಡಿದ್ದರು? ಪೊಲೀಸರ ವಿರುದ್ಧ ನಾಯಿ ಎಂದು ಶಬ್ದ ಬಳಸಿದ್ದರು.  ಯಾವನೋ ಒಬ್ಬ ಪೊಲೀಸ್ ತಪ್ಪು ಮಾಡಿದರೆ ಇಡೀ ಪೊಲೀಸ್ ಇಲಾಖೆಗೆ ಅದನ್ನು ಅನ್ವಯಿಸಲಾಗದು.  ನಾವೆಲ್ಲ ಅಧಿಕಾರಿಗಳು ಎಂಟು ಗಂಟೆ ಕೆಲಸ ಮಾಡುತ್ತೇವೆ.  ಪೊಲೀಸ್ ಇಲಾಖೆ 12 ಗಂಟೆ ಕೆಲಸ ಮಾಡುತ್ತಾರೆ.  ನಮ್ಮ ಮನೆಯಲ್ಲಿ ದೀಪಾವಳಿ, ಗಣೇಶ ಚತುರ್ಥಿ ಹಬ್ಬ ಮಾಡುತ್ತಿರುತ್ತೇವೆ.  ದಸರಾ ಮಾಡುತ್ತಿರುತ್ತೇವೆ.  ಅವರು ಅಲ್ಲಿ ಬಂದೋಬಸ್ತ್ ಕೆಲಸದಲ್ಲಿ ತೊಡಗಿರುತ್ತಾರೆ.  ಅವರಿಗೂ ಕುಟುಂಬವಿರುತ್ತದೆ.  ನಾನು ಸ್ವಲ್ಪ ಸಮಯ ಗೃಹ ಸಚಿವನಾಗಿದ್ದರೂ ಅವರ ಬಗ್ಗೆ ಮಾಹಿತಿ ಇದೆ.  ಬಹಳ ಕಷ್ಟದ ಜೀವನ ಅವರು ಸಾಗಿಸುತ್ತಿದ್ದಾರೆ.  ನನಗೆ ಅವರ ಬಗ್ಗೆ ಅಪಾರವಾದ ಗೌರವವಿದೆ.  ಕಾನಸ್ಟೇಬಲ್ ನಿಂದ ಹಿಡಿದು ಹಿರಿಯ ಅಧಿಕಾರಿಗಳ ವರೆಗೆ ಏನು ಕೆಲಸ ಮಾಡುತ್ತಾರೆ ಎಂಬುದು ಗೊತ್ತಿದೆ.  ಎಲ್ಲ ಕ್ಷೇತ್ರಗಳಲ್ಲಿ ಒಳ್ಳೆಯವರು ಮತ್ತು ಕೆಟ್ಟವರು ಇರುತ್ತಾರೆ.  ರಾಜಕಾರಣ, ಪತ್ರಿಕೋದ್ಯಮ, ಅಧಿಕಾರ, ಪೊಲೀಸರು ಹೀಗೆ ಎಲ್ಲರಲ್ಲೂ ಕೆಲವರು ಕೆಟ್ಟವರಿರುತ್ತಾರೆ.  ಬಹಳಷ್ಟು ಜನ ಒಳ್ಳೆಯವರಿರುತ್ತಾರೆ.  ಹೀಗಾಗಿ ಅದನ್ನು ಒಂದೇ ರೀತಿ ಹೇಳಲು ಬರುವುದಿಲ್ಲ.  ಬಿಜೆಪಿಯವರಿಂದ ಪೊಲೀಸರ ಬಗ್ಗೆ, ಅವರ ನೈತಿಕತೆ ಬಗ್ಗೆ ಹೇಳಿಸಿಕೊಳ್ಳುವ ಅಗತ್ಯವಿಲ್ಲ.  ಅಂದು ಗೃಹ ಸಚಿವರು ನಾಯಿಗಳು ಎಂದು ಹೇಳಿದಾಗ ಅವರಿಗೆ ಏನಾಗಿರಬೇಡ? ನನಗೆ ನಾಯಿಗಳ ಬಗ್ಗೆಯೂ ಗೌರವವಿದೆ.  ಶ್ವಾನಗಳು ನಿಯತ್ತಾಗಿರುತ್ತವೆ ಎಂದು ಹೇಳಿದರು.

ಇದರಿಂದ ಯಾವುದು ಸಂಘರ್ಷಕ್ಕೆ ಕಾರಣವಾಗುವುದಿಲ್ಲ.  ಅಪರಾಧಿಗೆ ಶಿಕ್ಷೆ ಆಗಬೇಕು ಎಂಬುದು ನಮ್ಮ ಸರಕಾರದ ನಿಲುವಾಗಿದೆ.  ಆರೋಪಿಗಳು ಯಾವುದೇ ಧರ್ಮದವರಿರಲಿ.  ಜಾತಿಯವರಿರಲಿ.  ಪಕ್ಷದವರಿರಲಿ.  ನಮ್ಮ ಪಕ್ಷದವರೇ ಇರಲಿ.  ಹಿಂದು ಧರ್ಮವಿರಲಿ, ಮುಸ್ಲಿಂ ಧರ್ಮವಿರಲಿ, ಬೌದ್ಧವಿರಬಹುದು, ಕ್ರಿಶ್ಚಿಯನ್ ಇರಬಹುದು, ಸಿಖ್ ಇರಬಹುದು.  ಒಳ್ಳೆಯ ಕೆಲಸ ಮಾಡಿರಬಹುದು.  ಆದರೆ, ಯಾರೋ ಒಬ್ಬರು ತಪ್ಪು ಮಾಡಿದಾಗ ಅದನ್ನು ಇಡೀ ಧರ್ಮದ್ದೆ ತಪ್ಪು ಎಂದು ಹೇಳಲು ಬರುವುದಿಲ್ಲ. ಈ ಬಗ್ಗೆ ತನಿಖೆ ಮಾಡಲು ಅಧಿಕಾರಿಗಳಿದ್ದಾರೆ, ಸಚಿವರಿದ್ದಾರೆ, ಸರಕಾರವಿದೆ, ಮುಖ್ಯಮಂತ್ರಿಗಳಿದ್ದಾರೆ.  ಇದೆಲ್ಲವನ್ನು ವಿಚಾರ ಮಾಡಿಯೇ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.

ವಿಧಾನ ಪರಿಷತ ಸದಸ್ಯ ಹರಿಪ್ರಸಾದ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎಂ. ಬಿ. ಪಾಟೀಲ ಅವರು, ಈ ಕುರಿತು ಪಕ್ಷ ಚರ್ಚೆ ಮಾಡುತ್ತದೆ.  ಪಕ್ಷದಲ್ಲಿ ವರಿಷ್ಠರಿದ್ದಾರೆ.  ಹರಿಪ್ರಸಾದ ಹೇಳಿಕೆ ಇರಬಹುದು.  ಎಂ. ಬಿ. ಪಾಟೀಲ ಹೇಳಿಕೆ ಇರಬಹುದು.  ಯಾರದೇ ಹೇಳಿಕೆ ಇರಬಹುದು.  ಅದನ್ನು ಪಕ್ಷ ಗಮನಿಸುತ್ತಿರುತ್ತದೆ.  ಅವರು ಯಾಕೆ? ಯಾವ ಸಂದರ್ಭದಲ್ಲಿ ಏನು ಹೇಳಿದ್ದಾರೆ? ಎಂಬುದನ್ನು ನೋಡಿಕೊಂಡು ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಈ ಹಿಂದೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಪಿಎಫ್ ಐ ವಿರುದ್ಧ ದಾಖಲಾಗಿದ್ದ ಕೇಸ್ ಗಳನ್ನು ಹಿಂಪಡೆದಿತ್ತು.  ಈಗ ಮತ್ತೆ ಡಿಜೆ ಹಳ್ಳಿ, ಕೆಜಿಹಳ್ಳಿ ಪ್ರಕರಣಗಳಲ್ಲಿಯೂ ಕಾಂಗ್ರೆಸ್ ಇಧೇ ರೀತಿ ನಡೆದುಕೊಳ್ಳಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡಿರುವ  ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ ಅವರು ಹೇಳಿದಂತೆ ನಮ್ಮ ಸರಕಾರ ನಡೆಯುವುದಿಲ್ಲ.   ಅವರು ಹೇಳಿದಂತೆ ನಡೆಯಬೇಕು ಎಂಬುದೂ ಇಲ್ಲ.  ಯಾವುದೇ ಧರ್ಮ, ಜಾತಿ ಏನೇ ಇರಲಿ.  ಯಾರು ಅಪರಾಧಿಗಳ ಇರುತ್ತಾರೆ ಅವರಿಗೆ ಶಿಕ್ಷೆಯಾಗುತ್ತದೆ.  ನಿರಪರಾಧಿಗಳಿಗೆ ಶಿಕ್ಷೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Leave a Reply

ಹೊಸ ಪೋಸ್ಟ್‌