ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಅಡವಿ ಸಂಗಾಪುರ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಕಾಲುಜಾರಿ ಬಿದ್ದು ಸಾವನ್ನಪ್ಪಿರುವ ತಿಕೋಟಾ ತಾಲೂಕಿನ ಅತಾಲಟ್ಟಿ ಗ್ರಾಮದ ಸುಭಾಷ ಬಿಳೂರ(12) ಮತ್ತು ಸಂತೋಷ ಪಾಶು ಬಿಳೂರ (9) ಬಾಲಕರ ಮನೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ. ಬಿ. ಪಾಟೀಲ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.
ಕಳೆದ ರವಿವಾರ ಬಾಲಕರು ಆಟವಾಡುವಾಗ ಕೃಷಿ ಹೊಂಡದಲ್ಲಿ ಇಬ್ಬರೂ ಸಾವನ್ನಪ್ಪಿದ್ದರು. ಮಂಗಳವಾರ ಸಚಿವರು ಅತಾಲಟ್ಟಿ ಗ್ರಾಮದಲ್ಲಿರುವ ಮೃತರ ಮೃತ ಮಕ್ಕಳ ಕುಟುಂಬಸ್ಥರ ತೋಟದ ಮನೆಗೆ ಭೇಟಿ ನೀಡಿ
ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೇ, ವೈಯಕ್ತಿಕವಾಗಿ ರೂ. 1 ಲಕ್ಷ ಧನ ಸಹಾಯ ಮಾಡಿದರು. ಅಲ್ಲದೇ, ಸರಕಾರದಿಂದ ಸಿಗುವ ಪರಿಹಾರವನ್ನು ದೊರಕಿಸುವುದಾಗಿ ಭರವಸೆ ನೀಡಿದರು.
ಬಳಿಕ ಮಾತನಾಡಿದ ಸಚಿವರು ಇದೊಂದು ದುರದೃಷ್ಟಕರ ಘಟನೆಯಾಗಿದೆ. ಮುಂದೆ ಇಂತಹ ಘಟನೆಗಳು ಜರುಗದಂತೆ ಎಚ್ಚರಿಕೆ ವಹಿಸಬೇಕು. ಕೃಷಿ ಹೊಂಡಗಳಿಗೆ ಸೂಕ್ತ ಬೇಲಿ ವ್ಯವಸ್ಥೆ ಮಾಡಿ, ಮಕ್ಕಳು ಜಾನುವಾರುಗಳು ಬೀಳದಂತೆ ಎಚ್ಚರಿಕೆ ವಹಿಸುವ ಪರಿಪಾಠ ರೈತರು ಬೆಳೆಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ವಿಭಾಗಾಧಿಕಾರಿ ಬಸಣ್ಣಪ್ಪ ಕಲಶೆಟ್ಟಿ, ವಿಜಯಪುರ ತಹಶೀಲ್ದಾರ ಸುರೇಶ ಮುಂಜೆ, ವಿಜಯಪುರ ಗ್ರಾಮೀಣ ಡಿವೈಎಸ್‍ಪಿ ಗಿರಿಮಲ್ಲಪ್ಪ ತಳಕಟ್ಟಿ, ವಿಜಯಪುರ ಗ್ರಾಮೀಣ ಸಿಪಿಐ ಸಂಗಮೇಶ ಪಾಲಭಾವಿ, ತಿಕೋಟಾ ತಹಸೀಲ್ದಾರ ಪ್ರಶಾಂತ ಚನಗೊಂಡ, ಬಬಲೇಶ್ವರ ತಹಸೀಲ್ದಾರ ಸಂತೋಷ ಮ್ಯಾಗೇರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಲ್. ರೂಪಾ, ಸಹಾಯಕ ನಿರ್ದೇಶಕ ಎಸ್. ಡಿ. ದೊಡಮನಿ, ತಾ. ಪಂ. ಇಓ ಬಸವರಾಜ ಐನಾಪೂರ ಉಪಸ್ಥಿತಿ. ಸೇರಿದಂತೆ ಇತರರು ಉಪಸ್ಥಿತರಿದ್ದರು.