ಕನ್ನೂರಿಗೆ ಸಚಿವ ಎಂ. ಬಿ. ಪಾಟೀಲ ಭೇಟಿ- ಮನೆ ಕುಸಿದು ಸಾವಿಗೀಡಾದ ವೃದ್ಧೆಯ ಮಹಿಳೆಯ ಕುಟುಂಬಕ್ಕೆ ಸಾಂತ್ವನ- ರೂ. 5 ಲಕ್ಷ ಪರಿಹಾರದ ಚೆಕ್ ವಿತರಣೆ

ವಿಜಯಪುರ: ಕನ್ನೂರ ಗ್ರಾಮದಲ್ಲಿ ತೋಟದ ಮನೆ ಮೇಲ್ಛಾವಣಿ ಕುಸಿದ ಪರಿಣಾಮ ಶಿವಮ್ಮ ನೂರುಂದಪ್ಪ ಸಾವಳಗಿ(60) ಮೃತಪಟ್ಟಿದ್ದಾರೆ‌.

ಈ ಹಿನ್ನೆಲೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಗ್ರಾಮಕ್ಕೆ ಭೇಟಿ ನೀಡಿದರು. ಮೃತರ ಅಂತಿಮ ದರ್ಶನ ಪಡೆದ ಅವರು ಮೃತರ ಕುಟುಂಬ ಸದಸ್ಯರಿಗೆ ಸರಕಾರದ ವತಿಯಿಂದ ರೂ. 5 ಲಕ್ಷ ಪರಿಹಾರ ಧನದ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ನಾಗಠಾಣ ಶಾಸಕ‌ ವಿಠ್ಠಲ ಧೋಂಡಿಬಾ ಕಟಕದೊಂಡ, ವಿಜಯಪುರ ಉಪವಿಭಾಗಾಧಿಕಾರಿ ಬಸಣ್ಣಪ್ಪ‌, ಕಲಶೆಟ್ಟಿ, ವಿಜಯಪುರ ತಹಸೀಲದಾರ ಸುರೇಶ ಮುಂಜೆ, ಗ್ರಾಮೀಣ ಸಿಪಿಐ ಸಂಗಮೇಶ ಪಾಲಭಾವಿ, ಕಂದಾಯ ವಿಭಾಗದ ಅಧಿಕಾರಿಗಳು ಉಪಸ್ಥಿದರಿದ್ದರು.

ಬಳಿಕ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,

ಕನ್ನೂರ ಗ್ರಾಮದಲ್ಲಿ ಕಳೆದ 24 ಗಂಟೆಗಳಲ್ಲಿ ನಿರಂತರವಾಗಿ ಸುರಿದ ಜಿಟಿಜಿಟಿ ಮಳೆಗೆ ಮನೆಯೊಂದು ಕುಸಿದು ಶಿವಮ್ಮಸಾವಳಗಿ(78) ಹಿರಿಯ ಮಹಿಳೆ ಸಾವಿಗೀಡಾಗಿದ್ದಾರೆ.  ನಮ್ಮ ಅಧಿಕಾರಿಗಳು ಬೆಳಿಗ್ಗೆಯೇ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ಮಾಡಿಸಿ, ಸರಕಾರದಿಂದ ರೂ. 5 ಲಕ್ಷ ಪರಿಹಾರ ನೀಡುವ ವ್ಯವಸ್ಥೆ ಮಾಡಿದ್ದಾರೆ.  ಮನೆ ಹಳೆಯದಾಗಿತ್ತು.  ಪಕ್ಕದಲ್ಲಿಯೇ ಇದ್ದ ಹೊಸಮನೆ ಇನ್ನೂ ಗೃಹಶಾಂತಿ ಆಗಿರಲಿಲ್ಲ.  ಬೇಡ ಎಂದರೂ ಅವರು ಹಳೆಯ ಮನೆಯಲ್ಲಿಯೇ ಅವರು ಮಲಗಿದ್ದರು.  ಈ ಮನೆ ಸುಸಜ್ಜಿತವಾಗಿತ್ತು.  ಈ ಮನೆ ಬೀಳಬಹುದು ಎಂಬ ಆತಂಕವೂ ಯಾರಿಗೂ ಇರಲಿಲ್ಲ. ಮೇಲ್ಛಾವಣಿ ಕುಸಿದು ಈ ಆಕಸ್ಮಿಕ ಘಟನೆ ಸಂಭವಿಸಿದೆ.  ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ.  ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ ಮತ್ತು ನಾನು ಭೇಟಿ ನೀಡಿ ಸರಕಾರದಿಂದ ನೀಡಬೇಕಾದ ಪರಿಹಾರ ಧನವನ್ನು ವಿತರಿಸಿದ್ದೇವೆ.  ದೇವರು ಆ ತಾಯಿಯ ಆತ್ಮಕ್ಕೆ ಚಿರಶಾಂತಿ ನೀಡಲಿ.  ಅವರ ಕುಟುಂಬ ವರ್ಗಕ್ಕೆ ಈ ಅಕಾಲಿಕ ನಿಧನದಿಂದ ಆಗಿರುವ ದುಃಖವನ್ನು ಭರಿಸುವಂಥ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಾಂತ್ವನ ಹೇಳುತ್ತೇನೆ.  ಜನ ಇಂಥ ಸಂದರ್ಭದಲ್ಲಿ ಜಾಗೃತರಾಗಿ ಇರಬೇಕು ಎಂದು ತಮ್ಮ ಮೂಲಕ ವಿನಂತಿಸುತ್ತೇನೆ ಎಂದು ಹೇಳಿದರು.

Leave a Reply

ಹೊಸ ಪೋಸ್ಟ್‌