ಪ್ರವಾಹ ಕುರಿತು ಆತಂಕ ಪಡುವ ಅಗತ್ಯವಿಲ್ಲ- ಮುನ್ನೆಚ್ಚರಿಕೆ ವಹಿಸಿ- ಜಿಲ್ಲಾಧಿಕಾರಿ ಟಿ. ಭೂಬಾಲನ್

ವಿಜಯಪುರ: ಜಿಲ್ಲೆಯಲ್ಲಿ ಪ್ರವಾಹ ಕುರಿತು ಸದ್ಯದ ಪರಿಸ್ಥಿತಿಯಲ್ಲಿ ಆತಂಕ ಪಡುವ ಅವಶ್ಯಕತೆಯಿಲ್ಲ ಅದಾಗ್ಯೂ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ ನೀಡಿದರು. 

ಮುಖ್ಯಮಂತ್ರಿಗಳಿಂದ ಮಳೆಹಾನಿ ಸ್ಥಿತಿಗತಿ ಕುರಿತು ವಿಡಿಯೋ ಸಂವಾದ ನಡೆಸಿದ ನಂತರ ಅಧಿಕಾರಿಗಳೊಂದಿಗೆ ಸಂಜೆ ಸಭೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯ ವಿಪತ್ತು ನಿರ್ವಹಣೆಗಾಗಿ ಮುಖ್ಯಮಂತ್ರಿಗಳು ಸೂಕ್ತ ನಿರ್ದೇಶನ ನೀಡಿದ್ದು, ಮಳೆಯಿಂದ ಜೀವ, ಜಾನುವಾರು ಹಾಗೂ ಮನೆ ಹಾನಿಗಳನ್ನು ತಡೆಗಟ್ಟಲು ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ನದಿ ಅಥವಾ ಸೇತುವೆಗಳ ಬಳಿ ಜನರು ಹೋಗದಂತೆ ಕಟ್ಟೆಚ್ಚರ ವಹಿಸಬೇಕು. ಪ್ರವಾಹ ಉಂಟಾಗಬಹದಾದ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಪದೇ ಪದೇ ಪ್ರವಾಹಕ್ಕೊಳಗಾಗುವ ಗ್ರಾಮಗಳಲ್ಲಿ ಎಲ್ಲ ಇಲಾಖಾ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಬೇಕು. ದುರಸ್ತಿಗೊಳಪಡುವ ಶಾಲಾ-ಅಂಗನವಾಡಿ ಕಟ್ಟಡಗಳು ಗುರುತಿಸಿ, ತಕ್ಷಣ ದುರಸ್ತಿಗೆ ಕ್ರಮ ವಹಿಸಬೇಕು ಎಂದು ಹೇಳಿದರು.

ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಸಮರ್ಥ ನಿರ್ವಹಣೆಗೆ ಮುಖ್ಯಮಂತ್ರಿಗಳು ಸೂಚಿಸಿದ ಹಿನ್ನಲೆಯಲ್ಲಿ ಈ ಕುರಿತು ಅಧಿಕಾರಿಗಳು ಸನ್ನದ್ಧರಾಗಿ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.

ನದಿ ಪಾತ್ರಗಳಲ್ಲಿ ಹೆಚ್ಚಿನ ನಿಗಾ ವಹಿಸಿ, ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬರಗಾಲ-ಪ್ರವಾಹ ಪರಿಸ್ಥಿತಿಯಲ್ಲಿ ರೈತರ ಸಾಲ ವಸೂಲಾತಿಗೆ ಒತ್ತಾಯಿಸದಂತೆ ಸಂಬಂಧಿಸಿದವರಿಗೆ ಸೂಚಿಸಲಾಯಿತು.

ಪರಿಸ್ಥಿತಿಯ ಕುರಿತು ತೀವ್ರ ನಿಗಾ ಇಡೆಬೇಕು.ಜಿಲ್ಲೆಯಲ್ಲಿ ಪ್ರತಿದಿನ ಮಳೆಯ ವರದಿ, ಪ್ರಕೃತಿ ವಿಕೋಪದಿಂದ ಉಂಟಾಗಿರುವ ಮಾನವ-ಜಾನುವಾರು ಜೀವನ ಹಾನಿ, ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಮತ್ತು ಮಳೆಯಿಂದ ಹಾನಿಗೊಳಗಾದ ಮನೆಗಳ ವರದಿಯನ್ನು ತಕ್ಷಣವೇ ಸಿದ್ಧಪಡಿಸಿ, ಪ್ರತಿದಿನ ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ  ಪ್ರಕೃತಿ ವಿಕೋಪದಿಂದ ಯಾವುದೇ ಅವಘಡಗಳು ಸಂಭವಿಸಿದ್ದಲ್ಲಿ ತಕ್ಷಣವೇ ಸಂಬಂಧಿಸಿದ ತಹಶೀಲ್ದಾರ, ಕಂದಾಯ ನೀರಿಕ್ಷಕರು, ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಆಸ್ತಿ-ಪಾಸ್ತಿ, ಜನ-ಜಾನುವಾರು ಜೀವಹಾನಿಗಳಿಗೆ 24 ಗಂಟೆಯೊಳಗಾಗಿ ನಿಯಮಾನುಸಾರ ಪರಿಹಾರ ವಿತರಣೆ ಕ್ರಮ ವಹಿಸಬೇಕು. ಪ್ರಕೃತಿ ವಿಕೋಪದ ಕುರಿತು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಹಾಗೂ ಸಲಹೆ ಸೂಚನೆಗಳನ್ನು ನೀಡಬೇಕು.

ಜಿಲ್ಲೆಯ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖಾ ಪಡೆ, ನಾಗರೀಕ ರಕ್ಷಣಾ ದಳ, ಗೃಹ ರಕ್ಷಕ ದಳ, ಆಪದ್ ಮಿತ್ರ ಅಡಿಯಲ್ಲಿ ತರಬೇತಿ ಪಡೆದ ಸಮುದಾಯ ಮಟ್ಟದ ಸ್ವಯಂ ಸೇವಕರನ್ನು ಜಾಗೃತಿಗೊಳಿಸಿ ಸಿದ್ಧವಾಗಿರಿಸಿಕೊಳ್ಳಬೇಕು. ಲಭ್ಯವಿರುವ ರಕ್ಷಣಾ ಸಲಕರಣೆ ಸುಸ್ಥಿತಿಯಲ್ಲಿರುವುದನ್ನು ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ವಿಪತ್ತಿ ಪರಿಸ್ತಿತಿಯಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವ ಈಜುಗಾರರು, ಹಾವು ಹಿಡಿಯುವರು ಮತ್ತು ನಾಗರಿಕ ಸ್ವಯಂ ಸೇವಕರ ಸಂಪರ್ಕ ವಿಳಾಸವನ್ನು ಪಡೆದುಕೊಂಡು, ಅವಶ್ಯವಿದ್ದಾಗ ಇವರ ಸೇವೆ ಪಡೆಯುವಂತೆ ಅವರು ಸೂಚಿಸಿದರು.

ಅತಿವೃಷ್ಟಿ-ಪ್ರವಾಹದಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಲ್ಲಿ ಕೂಡಲೇ ಬದಲಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಕಂಬಗಳ ತಪಾಸಣೆ ನಡೆಸಬೇಕು. ದೋಷಗಳಿದ್ದಲ್ಲಿ ತುರ್ತಾಗಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಮಳೆ ಗಾಳಿಗೆ ಬೀಳುವಂತಹ ವಿದ್ಯುತ್ ತಂತಿ ಹಾದು ಹೋಗುವ ಮರಗಳನ್ನು ಗುರುತಿಸಿ ಕೊಂಬೆಗಳನ್ನು ಕತ್ತರಿಸಬೇಕು. ವಿದ್ಯುತ್ ಸರಬರಾಜುವಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲು ಅರಣ್ಯ ಇಲಾಖೆ ಹಾಗೂ ಹೆಸ್ಕಾಂ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ ಜಿಲ್ಲಾ ಕಂಟ್ರೋಲ್ ರೂಂ ದೂರವಾಣಿ ಟೋಲ್ ಫ್ರೀ ಸಂಖ್ಯೆ 1077 (08352-221261) ಸ್ಥಾಪಿಸಲಾಗಿದ್ದು, ತಾಲೂಕಾ ಮಟ್ಟದಲ್ಲಿಯೂ 24/7 ಕಂಟ್ರೋಲ್ ರೂಂ ಸ್ಥಾಪಿಸಿ, ಸಹಾಯವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ಒದಗಿಸಬೇಕು. ಈ ಕುರಿತು ವ್ಯಾಪಕವಾಗಿ ಪ್ರಚಾರ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲ್ಲಶೆಟ್ಟಿ, ಇಂಡಿ ಉಪವಿಭಾಗಾದಿಕಾರಿ ಆಬಿದ್ ಗದ್ಯಾಳ, ಲೋಕೋಪಯೋಗಿ ಇಲಾಖೆ  ಅಭಿಯಂತರ ರಾಜು ಮುಜುಮದಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಎಲ್.ರೂಪಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ರಾಮಯ್ಯ ಬರಗಿಮಠ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌