ವಿಜಯಪುರ: ವಿಕಲಚೇತನರಿಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ನೆರವು ನೀಡುವುದು ಸರಕಾರ, ಸಂಘ-ಸಂಸ್ಥೆಗಳು ಮತ್ತು ಸಮಾಜದ ಎಲ್ಲ ಗಣ್ಯರ ಕರ್ತವ್ಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಗೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ವಿಜಯಪುರದಲ್ಲಿ ಶಾಸಕರ 2022-23ರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಕಲಚೇತನರಿಗೆ ಇಂಧನ ಚಾಲಿತ ತ್ರಿ- ಚಕ್ರ ವಾಹನಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಅಂಗವಿಕಲತೆ ಶಾಪವಲ್ಲ. ಯಾರಿಗೆ ಬೇಕಾದರೂ ಈ ಸಮಸ್ಯೆ ಎದುರಾಗಬಹುದು. ಅವರನ್ನು ಗೌರವದಿಂದ ಕಾಣಬೇಕು. ಅವರ ಅಂಗವಿಕಲತೆಗೆ ಅನುಗುಣವಾಗಿ ಅವರಿಂದ ಸಾಧ್ಯವಾಗುವ ಕೆಲಸ ಮಾಡಲು ಅವಕಾಶ ನೀಡಬೇಕು. ಅವರಿಗೆ ಇಷ್ಟವಾದ ರಂಗದಲ್ಲಿ ಸಾಧನೆ ಮಾಡಲು ಧೈರ್ಯ ತುಂಬಿದರೆ ಅವರಲ್ಲಿ ಕೀಳರಿಮೆ ಬಾರದಂತೆ ತಡೆಯಬಹುದು. ಆ ದಿಸೆಯಲ್ಲಿ ಸಮಾಜ ಅವರಲ್ಲಿ ಧೈರ್ಯ ತುಂಬಿ ನೀವು ನಮ್ಮಂತೆ, ನಮ್ಮವರು ಎಂದು ಅವರಿಗೆ ಸ್ಪೂರ್ತಿ ನೀಡಿದರೆ ಅವರ ಬಾಳು ಬೆಳಗಿದಂತಾಗುತ್ತದೆ. ಈ ದಿಸೆಯಲ್ಲಿ ಸಮಾಜ ಕೆಲಸ ಮಾಡಬೇಕಾಗಿದೆ. ಸರಕಾರ ನರೆಗಾ ಯೋಜನೆಯಡಿಯೂ ಅವರಿಗೆ ಉದ್ಯೋಗ ನೀಡುತ್ತಿದೆ ಎಂದು ಹೇಳಿದರು.
ಶಾಸಕರ ಅನುದಾನದಲ್ಲಿ ಅಂಗವಿಕಲರಿಗೆ ಮೀಸಲಿರುವ ಹಣವನ್ನು ಅವರ ಕಲ್ಯಾಣ ಯೋಜನೆಗಳಿಗೆ ಬಳಸಲೇಬೇಕು. ನಮ್ಮ ಅನುದಾನದಲ್ಲಿ ಈ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡುತ್ತಿದ್ದೇವೆ. ನಂತರ ಅನುದಾನವನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳುಸ್ತತಿದ್ದೇವೆ. ಬಬಲೇಶ್ವರ ಮತಕ್ಷೇತ್ರದಲ್ಲಿ ಶೇ. 90ರಷ್ಟು ಫಲಾನಭವಿಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿದ್ದೇವೆ. ಇನ್ನುಳಿದವರಿಗೂ ಶೀಘ್ರದಲ್ಲಿ ಸೌಕರ್ಯ ನೀಡಲಿದ್ದೇವೆ. ನಾವಾರಿಗೂ ಉಪಕಾರ ಮಾಡುತ್ತಿಲ್ಲ. ಇದು ನಮ್ಮ ಕರ್ತವ್ಯ. ತಾವೆಲ್ಲ ವಿಕಲಚೇತನ ಫಲಾನುಭವಿಗಳು ಯಾವುದೇ ಕೀಳರಿಮೆ ಇಟ್ಟುಕೊಳ್ಳಬೇಡಿ ಎಂದು ಅವರು ಹೇಳಿದರು.
ಐಟಿಐ, ಡಿಪ್ಲೋಮಾದಲ್ಲಿ ಅವರ ಅರ್ಹತೆಗೆ ಅನುಗುಣವಾಗಿ ಕೈಶಲ್ಯಾಭಿವೃದ್ಧಿ ತರಬೇತಿ ನೀಡಿ ಉದ್ಯೋಗ ಕೊಡಿಸುವ ಕೆಲಸವಾಗಬೇಕು. ನಾನು ಸರಕಾರದ ಮಟ್ಟದಲ್ಲಿಯೂ ಈ ಕುರಿತು ಚರ್ಚೆ ಮಾಡುತ್ತೇನೆ. ಅವರ ಶಕ್ತಿ- ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ನೀಡುವ ಕಾರ್ಯವಾಗಬೇಕು.. ನೀವೂ ಉಳಿದವರಂತೆ ಸಮರ್ಥರಿರುತ್ತಿರಿ. ಇದು ಯಾವುದೇ ಶಾಪವಲ್ಲ. ಇಂಥ ಮೂಢನಂಬಿಕೆಗಳು, ಮೌಢ್ಯಗಳು ತೊಲಗಬೇಕು. ನೀವು ಐಎಎಸ್, ಐಪಿಎಸ್, ಕೆಎಎಸ್, ವಿಜ್ಞಾನಿ, ಶಿಕ್ಷಕ ಸೇರಿದಂತೆ ಎಲ್ಲ ವೃತ್ತಿಗಳನ್ನು ಮಾಡಿ. ಆ ಧೈರ್ಯ ನಿಮ್ಮಲ್ಲಿರಲಿ. ಸಮಾಜವೂ ನಿಮಗೆ ಧೈರ್ಯ ನೀಡಲಿ. ಸರಕಾರದ ಐದು ಗ್ಯಾರಂಟಿ ಸ್ಕೀಂ ಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಎಂ. ಬಿ. ಪಾಟೀಲ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರ ಅನುದಾನದಲ್ಲಿ 22, ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಅನುದಾನದಲ್ಲಿ 11 ಮತ್ತು ತಾ. ಪಂ. ಅನುದಾನದಲ್ಲಿ 16 ಸೇರಿದಂತೆ ಒಟ್ಟು 49 ವಿಕಲಚೇನತ ಫಲಾನುಭವಿಗಳಿಗೆ ಇಂಧನ ಚಾಲಿತ ತ್ರಿ- ಚಕ್ರ ವಾಹನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಜಿಲ್ಲಾ ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ, ಬಿ.ಎಲ್.ಡಿ.ಇ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಸೋಮದೇವರಹಟ್ಟಿ ಎಲ್. ಟಿ. 1ರ ಜಗನು ಮಹಾರಾಜ, ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ದೈವಾಡಿ, ತಾ. ಪಂ. ಮುಖ್ಯಾಧಿಕಾರಿಗಳಾದ ಬಸವರಾಜ ಐನಾಪುರ, ಜೆ. ಎಸ್. ಪಠಾಣ, ಉಮೇಶ ಮಲ್ಲಣ್ಣವರ, ಮುಖಂಡರಾದ ಎಚ್. ಎಸ್. ಕೊರಡ್ಡಿ,ಭೀಮನಗೌಡ ಪಾಟೀಲ ಕೋಟ್ಯಾಳ, ಬಸವರಾಜ ಚಿಕ್ಕರೆಡ್ಡಿ, ಮಹೇಶಗೌಡ ಪಾಟೀಲ, ಮಧುಕರ ಜಾಧವ, ಎಸ್. ಎಸ್. ಗುದಿಗೆಣ್ಣವರ ಉಪಸ್ಥಿತರಿದ್ದರು.