ತೊರವಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ- ಸಚಿವ ಎಂ. ಬಿ. ಪಾಟೀಲ ಚಾಲನೆ

ವಿಜಯಪುರ: ಡಾ. ಫ. ಗು. ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಡಾ. ಬಿ. ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಪುಣ್ಯಸ್ಮರಣೆ ಅಂಗವಾಗಿ ತಿಕೋಟಾ ತಾಲೂಕಿನ ತೊರವಿಯಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸಿದರು.

ತೊರವಿ ಗ್ರಾಮದ ಶ್ರೀ ಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಚಿವರು ಶಿಬಿರಕ್ಕೆ ಚಾಲನೆ ನೀಡಿ ಅಲ್ಲಿ ವೈದ್ಯರು ನೀಡುತ್ತಿರುವ ಚಿಕಿತ್ಸೆಯನ್ನು ಪರಿಶೀಲಿಸಿದರು. ಅಲ್ಲದೇ, ಚಿಕಿತ್ಸೆಗೆ ಆಗಮಿಸಿದ ರೋಗಿಗಳ ಆರೋಗ್ಯ ವಿಚಾರಿಸಿದರು.

ತೊರವಿಯಲ್ಲಿ‌ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಆಗಮಿಸಿದ ಶಿಬಿರಾರ್ಥಿಗಳ ಆರೋಗ್ಯ ವಿಚಾರಿಸಿದ ಸಚಿವ ಎಂ. ಬಿ. ಪಾಟೀಲ

ಈ ಶಿಬಿರದಲ್ಲಿ ಸುಮಾರು 250ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದುಕೊಂಡರು. ಈ ಶಿಬಿರದಲ್ಲಿ ವೈದ್ಯಕೀಯ ಚಿಕಿತ್ಸಾ ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗ, ಎಲುಬು ಮತ್ತು ಕೀಲು ಚಿಕಿತ್ಸಾ ವಿಭಾಗ, ಕಿವಿ, ಮೂಗು ಹಾಗೂ ಗಂಟಲು ವಿಭಾಗ, ಹೆರಿಗೆ ಮತ್ತು ಪ್ರಸೂತಿ ವಿಭಾಗ, ಚಿಕ್ಕ ಮಕ್ಕಳ ಚಿಕಿತ್ಸಾ ವಿಭಾಗ, ಚರ್ಮರೋಗ ಚಿಕಿತ್ಸಾ ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ಹೃದ್ರೋಗ ಚಿಕಿತ್ಸಾ ವಿಭಾಗ, ನರ ರೋಗ ಚಿಕಿತ್ಸಾ ವಿಭಾಗ ಹಾಗೂ ದಂತ ಚಿಕಿತ್ಸಾ ವಿಭಾಗದ ವೈದ್ಯರು ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು. ಶಿಬಿರಾರ್ಥಿಗಳಿಗೆ ವೈದ್ಯರ ಸಲಹೆ ಮೇರೆಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ವೈದ್ಯಕೀಯ ಡಾ. ರಾಜೇಶ ಹೊನ್ನುಟಗಿ, ಡಾ. ಉದಯಕುಮಾರ ನುಚ್ಚಿ, ಡಾ. ವಿಕಾಸ ದೇಸಾಯಿ, ಡಾ. ಆನಂದ ನಿಂಬಾಳ, ಡಾ. ಎಸ್. ಎಸ್. ಪಾಟೀಲ, ಡಾ. ಶ್ರೀಧರ ಪಾಟೀಲ, ಡಾ. ರವಿ ನಾಗನೂರ, ಡಾ. ನೀಲಮ್ಮಾ ಪಾಟೀಲ, ಡಾ. ಸಂದೀಪ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಸಚಿವರು ತೊರವಿ ಶ್ರೀ ಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು.

Leave a Reply

ಹೊಸ ಪೋಸ್ಟ್‌