ವಿಜಯಪಯರ: ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯನ್ನು ಮುಂದಿನ ವರ್ಷ ಫೆಬ್ರವರಿಯೊಳಗೆ ಪೂರ್ಣಗೊಳಿದುವ ಗುರಿಯಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಬುರಣಾಪುರ ಬಳಿ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಜಿಲ್ಲೆ ಹಲವಾರು ಐತಿಹಾಸಿಕ ಸ್ಮಾರಕಗಳನ್ನು ಹೊಂದಿದ್ದು, ಪ್ರವಾಸಿ ತಾಣವೂ ಆಗಿದೆ. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೂ ಹೆಸರುವಾಸಿಯಾಗಿದೆ. ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿಯೂ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದರು.
ಹಿಂದಿನ ಸರಕಾರ ಕೇವಲ ಹಗಲು ವೇಳೆಯ ಹಾರಾಟಕ್ಕೆ ಮಾತ್ರ ವ್ಯವಸ್ಥೆ ಕಲ್ಪಿಸಿತ್ತು. ಇದರಿಂದ ಜನರಿಗೆ ಹೆಚ್ಚಿನ ಪ್ರಯೋಜನವಾಗುತ್ತಿರಲಿಲ್ಲ. ರಾತ್ರಿ ವೇಳೆಯೂ ಹಾರಾಟಕ್ಕೂ ಅಗತ್ಯವಿರುವ ಸೌಲಭ್ಯ ಕಲ್ಪಿಸಲು, ಹವಾಮಾನ ಮಾಹಿತಿ ನೀಡುವ ಯಂತ್ರಗಳು, ಕಂಟ್ರೋಲ್ ರೂಂ ಯಂತ್ರಗಳನ್ನು ಕೂಡಲೇ ತರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಅವರು ತಿಳಿಸಿದರು.
ಬಾಕಿ ಇರುವ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನದಲ್ಲಿ ಈಗ ರೂ. 50 ಕೋ. ಹಣವನ್ನು ಬಿಡುಗಡೆ ಮಾಡಿ ಸರಕಾರ ಆದೇಶ ನೀಡಿದೆ. ಏಪ್ರಿಲ್ ಬದಲಾಗಿ ಫೆಬ್ರವರಿ 2024ರ ವೇಳೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿನೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.
727 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತಿರುವ ಈ ವಿಮಾನ ನಿಲ್ದಾಣದ ಸಿವಿಲ್ ಕಾಮಗಾರಿಗಳು ಈ ವರ್ಷದ ಡಿಸೆಂಬರ್ ಗೆ ಮುಗಿಯಲಿವೆ. ಅದರ ನಂತರ ಇತರ ತಾಂತ್ರಿಕ ಕೆಲಸಗಳು ನಡೆಯಲಿದ್ದು, ಏಪ್ರಿಲ್ ವೇಳೆಗೆ ಎಲ್ಲವೂ ಮುಗಿಯುವ ವಿಶ್ವಾಸ ಇದೆ. ಆದರೆ, ಪೆಬ್ರವರಿಯೊಳಗೆ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಏರ್ ಬಸ್ ಮಾದರಿಯ ದೊಡ್ಡ ವಿಮಾನಗಳು ಕೂಡ ಇಲ್ಲಿಗೆ ಬಂದಿಳಿಯಲು ಅನುಕೂಲವಾಗುವಂತೆ ಯೋಜನೆಯಲ್ಲಿ ಮಾರ್ಪಾಡು ಮಾಡಲಾಗಿದೆ. ಕಾಮಗಾರಿಗಳು ತಾಂತ್ರಿಕ ಕಾರಣಗಳಿಂದ ನಿಲ್ಲಬಾರದೆಂಬ ಉದ್ದೇಶದಿಂದ ಎರಡು ದಿನಗಳ ಹಿಂದೆ ಈ ಯೋಜನೆಗೆ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿ ಶೌಚಾಲಯ, ಕ್ಯಾಂಟೀನ್ ಸೇರಿದಂತೆ ಪ್ರತಿಯೊಂದು ಸೌಲಭ್ಯವೂ ದೊಡ್ಡ ವಿಮಾನ ನಿಲ್ದಾಣದಲ್ಲಿ ಇರುವಂತೆಯೇ ಇರಲಿದೆ. ಜತೆಗೆ ಏರ್ ಬಸ್ ಮಾದರಿಯ ವಿಮಾನಗಳು ಬಂದಿಳಿಯಲು ಅಗತ್ಯವಿರುವ ಭೂಸ್ವಾಧೀನ ಕೂಡ ನಡೆಯಲಿದ್ದು, ಈ ಸಂಬಂಧ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಅವರು ವಿವರಿಸಿದರು.
ಡಿಜಿಸಿಎ ಮಾನದಂಡಗಳ ಪ್ರಕಾರ ಇಲ್ಲಿನ ವಿಮಾನ ನಿಲ್ದಾಣಕ್ಕೆ ಎರಡು ವಿಮಾನ ರಕ್ಷಣಾ ಅಗ್ನಿಶಾಮಕ ವಾಹನಗಳು ಅಗತ್ಯವಿವೆ. ರಾತ್ರಿ ವೇಳೆ ಇಳಿಯುವ ಸೌಲಭ್ಯ ಕಲ್ಪಿಸಲು ಬೇಕಾಗುವ ಉಪಕರಣಗಳ ಸಂಗ್ರಹಣೆಗೆ ಕೂಡ ಸ್ಪಷ್ಟ ನಿರ್ದೇಶನ ಕೊಡಲಾಗಿದೆ. ಇದರ ಜೊತೆಗೆ ಹವಾಮಾನ ಕುರಿತ ಮಾಹಿತಿ ನೀಡುವ ಉಪಕರಣಗಳನ್ನು ಅಳವಡಿಸಬೇಕಾಗಿದೆ. ಈ ಎಲ್ಲದಕ್ಕೂ ಅಂದಾಜು ರೂ. 50 ಕೋ. ಬೇಕಾಗುತ್ತದೆ. ಹೀಗಾಗಿ ವಿಮಾನ ನಿಲ್ದಾಣದ ಅಂದಾಜು ವೆಚ್ಚ ರೂ. 400 ಕೋ. ಆಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಇದುವರೆಗೂ ರೂ. 300 ಕೋ. ಅನುದಾನ ಬಿಡುಗಡೆ ಮಾಡಲಾಗಿದೆ. ಪರಿಸರ ಇಲಾಖೆಯ ಅನುಮತಿಗಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಕಾಮಗಾರಿಗಳು ಮುಕ್ತಾಯದ ಹಂತಕ್ಕೆ ಬಂದಿರುವುದರಿಂದ ಈ ಪ್ರಕ್ರಿಯೆ ಸುಗಮವಾಗಿ ನಡೆಯಲಿದೆ. ಜತೆಗೆ ಕೇಂದ್ರ ಸರಕಾರದ ಮಲ್ಟಿ ಡಿಸಿಪ್ಲಿನರಿ ತಂಡದಿಂದ ವಿಮಾನ ನಿಲ್ದಾಣ ಕಾಮಗಾರಿಯ ಪರಿಶೀಲನೆ ನಡೆಸುವಂತೆ ಕೋರಲಾಗಿದ್ದು, ಈ ತಂಡವು ಆಗಸ್ಟ್ ತಿಂಗಳಲ್ಲಿ ವಿಜಯಪುರಕ್ಕೆ ಭೇಟಿ ನೀಡಬಹುದು ಎಂದು ಸಚಿವರು ತಿಳಿಸಿದರು.
ವಿಮಾನ ನಿಲ್ದಾಣದ ಕಾಮಗಾರಿಗಳು ಒಟ್ಟು ಮೂರು ಪ್ಯಾಕೇಜ್‍ಗಳಲ್ಲಿ ನಡೆಯುತ್ತಿವೆ. ಪ್ಯಾಕೇಜ್-1ರಲ್ಲಿ ರೂ. 222.92 ಕೋ. ವೆಚ್ಚದಲ್ಲಿ ರಸ್ತೆ, ಪೆರಿಫೆರಲ್ ರಸ್ತೆ, ಏಪ್ರಾನ್, ಟ್ಯಾಕ್ಸಿವೇ, ಅಪ್ರೊಚ್ ರಸ್ತೆಗಳ ಕೆಲಸ ನಡೆಯುತ್ತಿದೆ. ಪ್ಯಾಕೇಜ್-2ರಲ್ಲಿ ರೂ. 86.20 ಕೋ. ವೆಚ್ಚದಲ್ಲಿ ಪ್ಯಾಸೆಂಜರ್ ಟರ್ಮಿನಲ್, ಎಟಿಸಿ ಕಟ್ಟಡ, ವಿದ್ಯುತ್ ಉಪಕೇಂದ್ರ, ಕಾಂಪೌಂಡ್, ವೀಕ್ಷಣಾ ಗೋಪುರ, ಅಂಡರ್ ಗ್ರ್ರೌಂಡ್ ಟ್ಯಾಂಕ್ ಕಾಮಗಾರಿ ಪ್ರಗತಿಯಲ್ಲಿದೆ. ಪ್ಯಾಕೇಜ್-3ರಲ್ಲಿ ರೂ. 19.30 ಕೋ. ವಿನಿಯೋಗಿಸಿ ಎಲೆಕ್ಟ್ರೋ- ಮೆಕ್ಯಾನಿಕಲ್ ಸಾಧನಗಳ ಕೆಲಸ ಚಾಲ್ತಿಯಲ್ಲಿದೆ. ಅದರಂತೆ ವಿದ್ಯುತ್ ಪೂರೈಕೆ, ಸರ್ವೇ ಇತ್ಯಾದಿ ಕೆಲಸಗಳಿಗಾಗಿ ರೂ. 19.41 ಕೋ. ವಿನಿಯೋಗಿಸಲಾಗಿದೆ ಎಂದು ಅವರು ಹೇಳಿದರು.
ವಿಮಾನ ನಿಲ್ದಾಣ ಸರಕಾರದಿಂದ ನಿರ್ವಹಣೆಗೆ ಚಿಂತನೆ
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗಳು ಪೂರ್ಣಗೊಂಡ ನಂತರ ರಾಜ್ಯ ಸರಕಾರದಿಂದಲೇ ನಿರ್ವಹಣೆ ಮಾಡಲು ಚಿಂತಿಸಲಾಗುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹಲವು ವಿಮಾನ ನಿಲ್ದಾಣಗಳ ಕಾಮಗಾರಿಗಳಿಗೆ ಕೇಂದ್ರ ಸರಕಾರ ಹಣ ಕೊಟ್ಟಿಲ್ಲ. ಎಲ್ಲದಕ್ಕೂ ರಾಜ್ಯ ಸರಕಾರವೇ ಹಣ ನೀಡಿದೆ. ಹೀಗಾಗಿ ಭಾರತೀಯ ವಿಮಾನ ಪ್ರಾಧಿಕಾರಕ್ಕೆ ನಿರ್ವಹಣೆ ವಹಿಸುವುದರಲ್ಲಿ ಅರ್ಥ ಇಲ್ಲ ಎನ್ನುವ ಕಾರಣಕ್ಕೆ ರಾಜ್ಯ ಸರಕಾರದಿಂದಲೇ ನಿರ್ವಹಣೆ ಮಾಡಲು ಸಾಧಕ- ಬಾಧಕ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲೆಯ ವಾಣಿಜ್ಯ ಬೆಳೆಗಳ ರಫ್ತಿಗೆ ಅನುಕೂಲ
ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ನಂತರ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ದ್ರಾಕ್ಷಿ ಸೇರಿದಂತೆ ಇತರ ಕೃಷಿ ಉತ್ಪನ್ನಗಳ ರಫ್ತಿಗೂ ಅನುಕೂಲವಾಗಲಿದೆ. ಅದರಂತೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಗೂ ಒತ್ತು ನೀಡಿ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿದರು.
ಈ ಸಂದರ್ಭಧಲ್ಲಿ ನಾಗಠಾಣ ಶಾಸಕರಾದ ಶ್ರೀ ವಿಠಲ ಕಟಕದೊಂಡ, ಕೆ ಎಸ್ ಐ ಐ ಡಿ ಸಿ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ. ಆರ್ ರವಿ, ಜಿಲ್ಲಾಧಿಕಾರಿಗಳಾರಿ ಟಿ. ಭೂಬಾಲನ್, ಜಿ. ಪಂ. ಸಿಇಒ ರಾಹುಲ ಶಿಂಧೆ, ಎಸ್ಪಿ ಎಚ್.ಡಿ. ಆನಂದಕುಮಾರ, ಲೋಕೋಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜು ಮಜುಂದಾರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.