ವಿಜಯಪುರ: ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ನೆಗೆಟಿವ್ ಸುದ್ದಿ ಪ್ರಸಾರ ಹೆಚ್ಚಾಗುತ್ತಿದ್ದು, ಅದರ ಬದಲು ಪಾಸಿಟಿವ್ ನ್ಯೂಸ್ ಗಳಿಗೆ ಆದ್ಯತೆ ನೀಡಬೇಕು ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುರದಲ್ಲಿ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಅವರು ಮಾತನಾಡುತ್ತಿದ್ದರು.
ಈ ಹಿಂದೆ ಪತ್ರಿಕೆಗಳು ಬಹಳ ವಿಶ್ವಾಸಾರ್ಹತೆ ಹೊಂದಿದ್ದವು. ಈಗ ಟಿವಿ ಮಾಧ್ಯಮ, ಯೂಟ್ಯೂಬ್ ಗಳಿಂದಾಗಿ ಬಹಳ ಬದಲಾವಣೆ ಹೊಂದಿವೆ. ಈಗ ದಿನಪತ್ರಿಕೆಗಳು ಅಂತರ್ಜಾಲದಲ್ಲಿ ಲಭ್ಯ ಇವೆ. ಮುದ್ರಣ ಮಾಧ್ಯಮ ಒತ್ತಡದಲ್ಲಿ ಕೆಲಸ ಮಾಡುತ್ತಿವೆ. ಮುದ್ರಣ ಮಾಧ್ಯಮ ಬಹುತೇಜ ಪರವಾಗಿಲ್ಲ. ಆದರೆ, ಬ್ರೇಕಿಂಗ್ ನ್ಯೂಸ್ ನೆಪದಲ್ಲಿ ನೆಗೆಟಿವ್ ಸುದ್ದಿ ಹೆಚ್ಚಾಗುತ್ತದೆ. ಪಾಸಿಟಿವ್ ನ್ಯೂಸ್ ಗೆ ಆದ್ಯತೆ ಕಡಿಮೆ ಇದೆ.
ಮಾಧ್ಯಮಗಳು ಸತ್ಯವನ್ನು ಬರೆಯುವಂತಾಗಬೇಕು. ಅಭಿವೃದ್ಧಿ, ಮಕ್ಕಳ ಶಿಕ್ಷಣದ ಬಗ್ಗೆ ಬರೆಯಬೇಕು ಎಂದು ಸಚಿವರು ಹೇಳಿದರು.
ಅಪರಾಧ ಸುದ್ದಿಗಳ ವೈಭವೀಕರಣ ಸಲ್ಲದು
ಅಪರಾಧ ಸುದ್ದಿಗಳಿಂದ ನಾವು ಏನು ಸಂದೇಶ ನೀಡುತ್ತಿದ್ದೇವ/ಗ್ರಾಮೀಣ ಭಾಗದ ಮಹಿಳೆಯರು
ಮತ್ತು ಮಕ್ಕಳ ಮೇಲೆ ಇಂಥ ಸುದ್ದಿಗಳು ದುಷ್ಪರಿಣಾಮ ಬೀರುತ್ತಿವೆ. ಪತ್ರಕರ್ತರು ಸಮಾಜ ಸುಧಾರಣೆ ಮತ್ತು ನಮ್ಮನ್ನು ತಿದ್ದುವ ಕೆಲಸ ತಾವು ಮಾಡುತ್ತೀರಿ. ಅಭಿವೃದ್ದಿ ಕಾಮಗಾರಿಗಳು, ನೀರಾವರಿ, ಜ್ವಲಂತ ಸಮಸ್ಯೆಗಳ ಬಗ್ಗೆ ಬರೆಯಬೇಕು ಎಂದು ಅವರು ಹೇಳಿದರು.
ಮೊಹರೆ ಹನುಮಂತರಾಯರು, ಟಿ. ಬಿ. ನಾಯಕ ಮುಂತಾದವರು ಜಿಲ್ಲೆಯ ಪತ್ರಿಕೋದ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಜೊತೆ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಕೂಡ ಪತ್ರಕರ್ತರಾಗಿದ್ದರು. ಅವರನ್ನು ಕೇವಲ ವಚನಪಿತಾಮಹ ಎಂದರೆ ಸಾಲದು. ಅವರು 30 ವರ್ಷ ಪತ್ರಕರ್ತರಾಗಿ ಶಿವಾನುಭವ ಪತ್ರಿಕೆಯನ್ನು 25 ವರ್ಷ ಸೇವೆ ಮಾಡಿದ್ದಾರೆ. ಅವರ ಸ್ಮರಣೆಯನ್ನು ಮಾಡದಿರುವುದು ವಿಷಾಧನೀಯ. ಮನೆ ಮಾರಾಟ ಮಾಡಿ ಪ್ರಿಂಟಿಂಗ್ ಪ್ರೆಸ್ ಖರೀದಿಸಿ ಪತ್ರಿಕೆ ಪ್ರಕಟ ಮಾಡಿದ್ದಾರೆ ಎಂದು ಎಂ. ಬಿ. ಪಾಟೀಲ ಹೇಳಿದರು.
ಪೊಲೀಸರ ಕಾರ್ಯ ಶ್ಲಾಘನೀಯ
ಪೊಲೀಸರು ದಿನದ 12 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರಿಗೂ ಕುಟುಂಬ ಸದಸ್ಯರಿದ್ದರು ಹಬ್ಬದ ದಿನಗಳಲ್ಲಿ ನಮ್ಮ ರಕ್ಷಣೆಗಾಗಿ ಕೆಲಸ ಮಾಡುತ್ತಾರೆ. ಅವರಿಗೆ ಹಬ್ಬ ಆಚರಣೆಗೆ ಅವಕಾಶಗಳು ಬಹಳ ಕಡಿಮೆ. ಹೀಗಾಗಿ ಅವರ ಕೆಲಸಗಳ ಬಗ್ಗೆ ಹೆಮ್ಮೆ ಪಡಬೇಕು ಎಂದು ಅವರು ಹೇಳುದರು.
ಪತ್ರಕರ್ತರ ನೆರವಿಗೆ ಬದ್ದ
ಅದೇ ರೀತಿ ಪತ್ರಕರ್ತರ ಜೀವನವೂ ಕಷ್ಟಕರವಾಗಿದೆ. ಮಾಲೀಕರ ಸೂಚನೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತಾರೆ. ಯುಟ್ಯೂಬ್, ಸೋಷಿಯಲ್ ಮಿಡಿಯಾ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಈ ಹಿಂದೆ ನಾನೂ ಇಂಥ ಸಮಸ್ಯೆ ಎದುರಿಸಿದ್ದೇನೆ. ತೇಜೋವಧೆ, ಬ್ಲ್ಯಾಕಮೇಲ್ ಮಾಡಬಾರದು ಎಂದು ಅವರು ಹೇಳಿದರು.
ಸಾಹಿತ್ಯ ಶಿಕ್ಷಣ, ಧನಾತ್ಮಕ ಕೆಲಸ ಮಾಡಿ, ನಾನು ಪತ್ರಕರ್ತರಿಗೆ ಸಹಾಯ, ಸಹಕಾರ ಮಾಡುತ್ತೇನೆ. ಅದಕ್ಕೆ ಬದ್ಧನಾಗಿದ್ದೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಜಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಾಗಠಾಣ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ, ಹಾಸಿಂಪೀರ್ ದರ್ಗಾದ ಧರ್ಮಗುರು ಮುರ್ತುಜಾ ಹಾಶ್ಮಿ, ಡಿಸಿ ಟಿ. ಭೂವಾಲನ್, ಜಿ. ಪಂ. ಸಿಇಓ ರಾಹುಲ ಶಿಂಧೆ, ಎಸ್ಪಿ ಎಚ್. ಡಿ. ಆನಂದಕುಮಾರ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ಜನನ ಅನಿಪ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಪಿ. ಕುಲಕರ್ಣಿ, ರಾಜ್ಯ ಕಾರ್ಯ ಕಾರ್ಯಕಾರಿಣಿ ಸದಸ್ಯ ಡಿ. ಬಿ. ವಡವಡಗಿ, ಐ.ಎಫ್.ಡಬ್ಲ್ಯೂ ಜೆ ನಾಮನಿರ್ದೇಶಿತ ಸದಸ್ಯ ಮಹೇಶ ಶಟಗಾರ ವೇದಿಕೆ ಮೇಲೆ ಉಪಸ್ಥಿತರಿದ್ದರು.