ವಿಜಯಪುರ: ನಗರದ ಆಶ್ರಮ ರಸ್ತೆಯಲ್ಲಿರುವ ಸಾಯಿ ವಿಹಾರದ ಸಭಾಭವನದಲ್ಲಿ ಬಣಜಿಗ ಮುದಾಯದ ರಾಜ್ಯ ಮಟ್ಟದ ವಧು-ವರ ಸಮಾವೇಶ ಮತ್ತು ನಾನಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ಈ ಮುಂಚೆ ಸಮಾಜದ ಹಿರಿಯರು ಬಿಡುವ ಮಾಡಿಕೊಂಡು ಒಬ್ಬರಿಗೊಬ್ಬರು ಚರ್ಚಿಸಿ ಶುಭ ಕಾರ್ಯಗಳನ್ನು ಮಾಡುತ್ತಿದ್ದರು. ಈಗ ವಧು- ವರರ ಕಾರ್ಯಕ್ರಮ ಮಾಡುವ ಮೂಲಕ ಸಂಬಂಧ ಗಟ್ಟಿಗೊಳಿಸಲು ಸಹಕಾರಿಯಾಗುತ್ತಿದೆ ಎಂದು ಹೇಳಿದರು.
ಬುರುಣಾಪುರದ ಯೋಗೇಶ್ವರಿ ಮಾತಾಜಿ, ವಧು- ವರರ ಕಲ್ಯಾಣ ಕಾರ್ಯಕ್ರಮ ಮಾಡಬೇಕಾದರೆ ಹಿರಿಯರ ಕಾರ್ಯ ಮಹತ್ವವಾಗಿದೆ. ಹಣ ಅಂತಸ್ತು ಯಾವುದನ್ನೂ ನೋಡದೆ ಗುಣ ನೋಡಿ ಬೀಗತನ ಮಾಡಬೇಕು. ಎಲ್ಲರೂ ಶ್ರೀಮಂತರಿರುವುದಿಲ್ಲ. ಗುಣದಿಂದ ಶ್ರೀಮಂತರಿರುತ್ತಾರೆ. ಒಳ್ಳೆಯ ಶುಭ ಕಾರ್ಯಗಳಿಂದ ಅವರ ಮನೆತನಗಳು ಏಳಿಗೆಯಾಗುತ್ತವೆ ಎಂದು ಹೇಳಿದರು.
ಸಮಾಜದ ಬಬಲೇಶ್ವರ ತಾಲೂಕ ಘಟಕದ ಅಧ್ಯಕ್ಷ ಅಶೋಕ ಶಿವಪ್ಪ ತಿಮಶೆಟ್ಟಿ ಮಾತನಾಡಿ, ಈ ಕಾರ್ಯಕ್ರಮದ ಯಶಸ್ಸಿನ ಹಿಂದೆ ಸಮಾಜದ ಹಿರಿಯರು ಮತ್ತು ಸ್ನೇಹಿತರ ಸಹಕಾರವೇ ಕಾರಣ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಮಾತನಾಡಿ, ಎಲೆಕ್ಟ್ರಾನಿಕ್ ಕಂಪ್ಯೂಟರ್ ಯುಗದಲ್ಲಿ ಕೆಲಸದಲ್ಲಿ ಎಲ್ಲರೂ ಕೆಲಸದ ಒತ್ತಡದಲ್ಲಿ ವಧು- ವರರ ಜೋಡಿ ವಿಳಂಬವಾಗಿರುತ್ತದೆ. ಇಂಥ ಕಾರ್ಯಗಳು ಹೆಚ್ಚಾಗಿ ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ, ಸಮಾಜದ ಮುಖಂಡ ಗುರುಲಿಂಗಪ್ಪ ಅಂಗಡಿ, ಎಸ್. ಎಸ್. ನರಗುಂದ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಉಮೇಶ ಮಲ್ಲಣ್ಣನವರ, ರವಿ ಬಿಜ್ಜರಗಿ, ಅಣ್ಣಪ್ಪ ಗುಡ್ಡೋಡಗಿ, ಅರುಣ ವಾರದ ಮುಂತಾದವರು ಉಪಸ್ಥಿತರಿದ್ದರು.
ಬೆಂಗಳೂರಿನ ನಗರ. ಕೊಪ್ಪಳ. ಬೀದರ. ಕಲಬುರ್ಗಿ. ಕುಷ್ಟಗಿ. ಹುಬ್ಬಳ್ಳಿ. ಧಾರವಾಡ. ಬೆಳಗಾoವ. ಬಾಗಲಕೋಟೆ. ವಿಜಯಪುರ ಮಹಾರಾಷ್ಟ್ರದ ಸೋಲಾಪುರ. ಪುಣೆ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳ ವಧು- ವರರು ಮತ್ತು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವಿಜಯಪುರ ಜಿಲ್ಲೆ ಹಾಗೂ ತಾಲೂಕು ಘಟಕದ ಸದಸ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಬಸವರಾಜ ಮಂಟೂರ ನಿರೂಪಿಸಿದರು.