ಭೂತನಾಳ, ಬೇಗಂ ತಾಲಾಬ, ಮಮದಾಪುರ ಕೆರೆಗಳಿಗೆ ಹರಿದ ಕೃಷ್ಮೆಯ ನೀರು- ಎಂ. ಬಿ. ಪಾಟೀಲ ಹರ್ಷ

ವಿಜಯಪುರ: ನಗರಕ್ಕೆ ಕುಡಿಯುವ ನೀರು ಪೂರೈಸುವ ಭೂತನಾಳ ಕೆರೆ ಮಳೆಯ ಕೊರತೆಯಿಂದ ಬತ್ತಿ ಹೋಗಿತ್ತು.  ಇದೀಗ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಕೃಷ್ಣಾ ನದಿಯಿಂದ ಸಪ್ತ ಕೆರೆಗಳಲ್ಲಿ ಬರುವ ಭೂತನಾಳ, ಬೇಗಂ ತಲಾಬ್ ಮತ್ತು ಮಮದಾಪುರ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಚಾಲನೆಗೊಂಡಿರುವುದಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಅಮೃತ ಯೋಜನೆಯಡಿ ನಗರದ ಜನರಿಗೆ ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಯೋಜನೆ ಭೂತನಾಳ ಕೆರೆ ಬತ್ತಿದ್ದರಿಂದ ಸ್ಥಗಿತಗೊಂಡಿತ್ತು.  ಜುಲೈ 20 ರ ಹೊತ್ತಿಗೆ ಬತ್ತಿಹೋಗಿದ್ದ ಭೂತನಾಳ ಕೆರೆಯಲ್ಲಿ ನೀರು ಡೆಡ್ ಸ್ಟೋರೆಜ್‍ಗಿಂತಲೂ ಕಡಿಮೆಯಾಗಿತ್ತು.  ಇದರಿಂದ ನಗರದ ಭೂತನಾಳ ಗ್ರಾಮ, ಎಂ. ಬಿ. ಪಾಟೀಲ ನಗರ, ಆದರ್ಶ ನಗರ, ಆಶ್ರಮ, ಬಿ. ಎಂ. ಪಾಟೀಲ ನಗರ, ವಿಜಯ ಕಾಲೇಜು, ಕೆ. ಎಚ್. ಬಿ ಕಾಲನಿ, ಚಾಲುಕ್ಯ ನಗರದವರೆಗೆ ಸುಮಾರು 13 ಸಾವಿರ ಮನೆಗಳಿಗೆ ನಳದ ಸಂಪರ್ಕ ಹೊಂದಿದ್ದು, 75 ಸಾವಿರಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರು ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು 10-15 ದಿನಗಳಿಗೊಮ್ಮೆ ಸಹಿತ ನೀರು ಸರಬರಾಜು ಮಾಡಲು ಹರಸಾಹಸ ಪಡುವಂತಾಗಿತ್ತು.

ವಿಜಯಪುರ ನಗರದ ಭೂತನಾಳ ಕೆರೆಗೆ ಕೃಷ್ಣಾ ನದಿಯಿಂದ ನೀರು ಹರಿದು ಬರುತ್ತಿರುವುದು

ಈ ಕುರಿತು ತಮಗೆ ಮಾಹಿತಿ ನೀಡಿದಾಗ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಆಲಮಟ್ಟಿ ಆಣೆಕಟ್ಟೆಯ ಹಿನ್ನಿರಿನಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.  ಈ ನೀರನ್ನು ಕೆರೆಗಳಿಗೆ ಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ.  ಈಗ ಲಿಂಗದಳ್ಳಿ ಜಾಕವೆಲ್ ನಿಂದ ಕೃಷ್ಣಾ ನದಿಯಿಂದ ನೀರನ್ನು ವಿಜಯಪುರ ಜಿಲ್ಲೆಯ ಐತಿಹಾಸಿಕ ಕೆರೆಗಳಾದ ಮಮದಾಪುರ, ಬೇಗಂ ತಲಾಬ್ ಮತ್ತು ಭೂತನಾಳ ಕೆರೆಗಳಿಗೆ ತುಂಬಿಸಲು ಎರಡು ಮೊಟಾರ್ ಅಳವಡಿಸಲಾಗಿದೆ.  ಈಗ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭಗೊಂಡಿದೆ.  ಇದರಿಂದ ಬಸವನಾಡು ವಿಜಯಪುರ ನಗರದ ಜನತೆಗೆ ಕುಡಿಯುವ ನೀರಿನ ಬವಣೆ ನೀಗಲಿದೆ ಎಂದು ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌