ಸಚಿವ ಶಿವಾನಂದ ಪಾಟೀಲ ಸೇರಿ ಹಲವು ಮಂತ್ರಿಗಳು ದೆಹಲಿಗೆ- ಯಾಕೆ ಗೊತ್ತಾ?

ವಿಜಯಪುರ: ಹೈಕಮಾಂಡ್ ನಿಂದ ಬುಲಾವ್ ಬಂದಿರುವ ಹಿನ್ನೆಲೆಯಲ್ಲಿ ಕೆಲವು ಸಚಿವರು ದೆಹಲಿಗೆ ತೆರಳುತ್ತಿದ್ದೇವೆ ಎಂದು ಜವಳಿ ಮತ್ತು ಸಕ್ಕರೆ ಹಾಗೂ ಎಪಿಎಂಸಿ ಸಚಿವ ಶಿವಾನಂದ ಎಸ್. ಪಾಟೀಲ ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ರಚನೆಯಾದ ಮೇಲೆ ಬಹಳಷ್ಟು ಸಚಿವರು ವರಿಷ್ಠರನ್ನು ಭೇಟಿ ಮಾಡಿಲ್ಲ ಈ ಹಿನ್ನೆಲೆಯಲ್ಲಿ ಕರೆದಿದ್ದಾರೆ ಎಂದು ತಿಳಿಸಿದರು.

ಮಂತ್ರಿ ಮಂಡಳ ರಚನೆಯಾದ ಮೇಲೆ ಅಧಿವೇಶನ, ಕಾರ್ಯಕ್ರಮ ನಡೆದ ಹಿನ್ನೆಲೆಯಲ್ಲಿ ಸಾಧ್ಯವಾಗಿಲ್ಲ.  ಬೆಂಗಳೂರಿಗೆ ಬಂದಾಗ ನಮ್ಮನ್ನು ಭೇಟಿ ಮಾಡಬೇಕು ಎಂಬುದು ರಾಹುಲ ಗಾಂಧಿ ಅವರ ಯೋಚನೆಯಾಗಿತ್ತು.  ಆದರೆ, ಅಂದು ದುರ್ದೈವವಶಾತ್ ಕೇರಳ ಮಾಜಿ ಮುಖ್ಯಮಂತ್ರಿ ತೀರಿಕೊಂಡಿದ್ದರಿಂದ ಭೇಟಿಯಾಗಿಲ್ಲ.  ಈ ಹಿನ್ನೆಲೆಯಲ್ಲಿ ಎಲ್ಲ ಸಚಿವರನ್ನು ದೆಹಲಿಗೆ ಕರೆಯಿಸಿದ್ದಾರೆ.  ಮತ್ತೇನಿಲ್ಲ.  ಬೇರಾವ ಡೆವಲೆಪಮೆಂಟ್ ಇಲ್ಲ.  ಕೆಲವರನ್ನು ಮಾತ್ರ ಕರೆದಿದ್ದಾರೆ.  ನನ್ನನ್ನು ಕರೆದಿದ್ದಾರೆ.  ಸಚಿವ ಸಂಪುಟದಲ್ಲಿ ಹಿರಿಯರನ್ನು ಕರೆದಿದ್ದಾರೆ ಎಂದು ಸಚಿವರು ತಿಳಿಸಿದರು.

ಆಳಂದ ಶಾಸಕ ಬಿ. ಆರ್. ಪತ್ರ ಬರೆದ ಹಿನ್ನೆಲೆಯಲ್ಲಿ ಕರೆದಿದ್ದಾರೆ ಎಂಬುದು ತಪ್ಪು.  ಬಿ. ಆರ್. ಪಾಟೀಲ ಪತ್ರ ಕೊಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ.  ಅವರು ಪತ್ರ ಕೊಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಶಾಸಕಾಂಗ ಪಕ್ಷದ ಸಭೆ ಕರೆಯುತ್ತಾರೆ ಎಂಬುದು ಗೊತ್ತಿರಲಿಲ್ಲ.  ಅವರು ಕರೆದಿದ್ದಾರೆ ಎಂದ ಮೇಲೆ ಎಲ್ಲರೂ ಹೋಗಿ ಬಗೆಹರಿಸಿದ್ದೇವೆ ಎಂದು ಅವರು ತಿಳಿಸಿದರು.

ಶಾಸಕರಿಗೆ ಕೆಲವೊಂದು ಸಮಸ್ಯೆಗಳಾಗಿವೆ.  ಹೊಸ ಸರಕಾರ ಬಂದ ಮೇಲೆ ವರ್ಗಾವರ್ಗಿ ಆಗಬೇಕು ಎಂಬ ಬೇಡಿಗೆ ನ್ಯಾಚುರಲ್ ಆಗಿ ಇರುತ್ತದೆ.  ಅದರಲ್ಲಿ 6 ಪರ್ಸೆಂಟ್ ಮಿತಿ ಹಾಕಿದ್ದರಿಂದ ಬಹಳ ವರ್ಗಾವರ್ಗಿ ಆಗಿರಲಿಲ್ಲ.  ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಿ. ಎಲ್. ಪಿ. ಸ್ಪಷ್ಟಪಡಿಸಿದ್ದಾರೆ.  ಯಾವುದೇ ಮಂತ್ರಿಗಳಿಗೆ 6 ಪರ್ಸೆಂಟ್ ಗಿಂತ ಹೆಚ್ಚು ವರ್ಗಾವರ್ಗಿ ಮಾಡಬೇಡ ಎಂದು ಆದೇಶ ಮಾಡಿದ್ದರಿಂದ ಅದು ಆಗಿಲ್ಲ.  ಕಾಲಕ್ರಮೇಣ ನಾನೇ ಬಗೆಹರಿಸಿ ಕೊಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಶಿವಾನಂದ ಎಸ್. ಪಾಟೀಲ ತಿಳಿಸಿದರು.

ಶಾಸಕ ಶಿವಾನಂದ ಎಸ್. ಪಾಟೀಲ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು

ಸಿ ಎಲ್‌ ಪಿ ಮೀಟಿಂಗ್ ನಲ್ಲಿ ಅಸಮಾಧಾನ ವಿಚಾರ

ಶಾಸಕಾಂಗ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಆಂತರಿಕವಾಗಿ ಚರ್ಚೆ ಮಾಡದಿದ್ದರೆ ಬಹಿರಂಗವಾಗಿ ಚರ್ಚೆ ಮಾಡೋಣ್ವಾ? ಶಾಸಕರಿಗೆ ನೋವಾಗಿದ್ದರೆ ಅವರು ಹೇಳಿಕೊಳ್ಳಲು ಅವಕಾಶವಿದೆ.  ಅವರು ಹೇಳಿಕೊಂಡಿದ್ದಾರೆ.  ನಮ್ಮ ಪಕ್ಷದ ವರಿಷ್ಠರು ಈ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್ ಮತ್ತು ಬಿಜೆಪಿ ಸೇರಿಕೊಂಡು ಸರಕಾರ ಪತನ ಯತ್ನ ವಿಚಾರ

ಜೆಡಿಎಸ್ ಮತ್ತು ಬಿಜೆಪಿ ಸೇರಿ ಸರಕಾರ ಪತನ ಮಾಡುವುದು ಅದು ಯಾವ ಕಾಲಕ್ಕೂ ಸಾಧ್ಯವಿಲ್ಲ.  ನಾವು 136 ಜನ ಇದ್ದಾಗ ಯಾವ ಕಾರಣದಿಂದ ಬೀಳಿಸುತ್ತಾರೆ? ಯಾಕೆ ಬೀಳುತ್ತಾರೆ? ಅದು ಸುಳ್ಳು.  ಯಾವುದೇ ಊಹಾಪೋಹಕ್ಕೆ ಸಹಾಯ ಮಾಡಬೇಡಿ.  ದೇವೇಗೌಡರೆ ಬಿಜೆಪಿ ಜೊತೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.  ಮತ್ತೇಕೆ ಜೆಡಿಎಸ್ ಎಂದು ಹೇಳುತ್ತೀರಿ? ಎಂದು ಸಚಿವರು ಮರುಪ್ರಶ್ನೆ ಹಾಕಿದರು.

ಜಿಲ್ಲೆಯಲ್ಲಿ ಮುಂಗಾರು ವಿಳಂಬ ದ ಕಬ್ಬು ಬೆಳೆ ಹಿನ್ನೆಲೆ, ಬರ ಘೋಷಣೆ ವಿಚಾರ

ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ವಿಳಂಬವಾಗಿರುವ ಹಿನ್ನೆಲೆಯಲ್ಲಿ ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವುದು ಹಾಗೂ ಮಳೆಯ ಕೊರತೆಯಿಂದ ಕಬ್ಬು ಇಳುವರಿಗೆ ಹೊಡೆತ ಬೀಳುವ ಆತಂಕದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರಕಾರ ಬರಗಾಲ ಘೋಷಣೆಗೆ ಕಾಲ ಮಿತಿ ಹಾಕಿದ್ದರು.  ಆ ಕಾಲಮಿತಿಯೊಳಗೆ ಮಳೆಯಾಗಿದೆ.  ಈ ಹಿನ್ನೆಲೆಯಲ್ಲಿ ಬರಗಾಲ ಘೋಷಣೆ ಮಾಡಲು ಆಗುವುದಿಲ್ಲ.  ಸುದೈವದಿಂದ ಮಳೆ ಎಂಟ್ಹತ್ತು ದಿನ ತಡವಾಗಿದೆ ನಿಜ.  ಆದರೆ, ಯಾವುದೇ ಕಬ್ಬು ಹಾನಿಯಾಗಿಲ್ಲ.  ಕಬ್ಬು ಪುನಃ ಬೆಳೆಯುತ್ತಿದೆ.  ಮತ್ತೆ ಯಥಾವತ್ತಾಗಿ ಕಾರ್ಖಾನೆಗಳು ಕಬ್ಬು ನುರಿಸಲಿವೆ ಎಂದು ಸ್ಪಷ್ಟಪಡಿಸಿದರು.

ಸಕ್ಕರೆ ಕಾರ್ಖಾನೆಗಳಿಂದ ಹಣ ಬಾಕಿ ವಿಚಾರ

ಬಸವೇಶ್ವರ ಸಕ್ಕರೆ ಕಾರ್ಖಾನೆಯವರಿಂದ ಹಣ ನೀಡಲು ವಿಳಂಬವಾಗಿದೆ ಎಂಬ ಮಾಹಿತಿ ಬಂದಿದೆ.  ನಿನ್ನೆ ಪ್ರಾದೇಶಿಕ ಆಯುಕ್ತರಿಗೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ.  ಬಸವೇಶ್ವರ ಶುಗರ್ಸ್ ನವರು ರೂ. 50 ಕೋ. ಬಾಕಿ ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದ ಅವರು, ಭೀಮಾಶಂಕರ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಹಣ ನೀಡಿಲ್ಲ ಎಂಬುದರ ಕುರಿತು ನನಗೆ ಯಾವುದೇ ಮಾಹಿತಿ ಬಂದಿಲ್ಲ.  ನನಗೆ ಬಸವೇಶ್ವರ ಸಕ್ಕರೆ ಕಾರ್ಖಾನೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಮಾತ್ರ ಮಾಹಿತಿ ಬಂದಿದೆ.  ಭೀಮಾಶಂಕರ ಸಕ್ಕರೆ ಕಾರ್ಖಾನೆಯ ಬಗ್ಗೆ ಮಾಹಿತಿ ಬಂದಿಲ್ಲ.  ನಿಮ್ಮ ಬಳಿ ಮಾಹಿತಿ ಇದ್ದರೆ ಕೊಡಿ.  ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ.  ಯಾವುದೇ ಕಾರ್ಖಾನೆಯವರು ಬಿಲ್ ಕೊಡಲೇಬೇಕು.  ಈ ಬಾರಿ ಇಡೀ ರಾಜ್ಯದಲ್ಲಿ ರೂ. 290 ಕೋ. ಮಾತ್ರ ಬಾಕಿ ಉಳಿದಿದೆ ಎಂದು ಶಿವಾನಂದ ಎಸ್. ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಹಾರಿವಾಳ ಸೇರಿದಂತೆ ನಾನಾ ಧುರೀಣರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌