ವಿಜಯಪುರ: ಮಧುರಚೆನ್ನರು ಜಾನಪದ ಸಾಹಿತ್ಯ ಸಂಶೋಧನೆ ಸಂಗ್ರಹದ ಮೂಲಕ ಈ ನೆಲದ ಮೂಲ ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸಿದರು. ಅಲ್ಲದೇ, ಅನುಭಾವ ಸಾಹಿತ್ಯಕ್ಕೆ ಹೊಸ ಆಯಾಮವನ್ನು ಒದಗಿಸಿ ಶ್ರೀ ಮಾತಾ ಅರವಿಂದರ ತತ್ವ ಸಿದ್ದಾಂತಗಳನ್ನು ಅನುಸರಿಸಿ ಅರವಿಂದ ಮಂಡಲವನ್ನು ಸ್ಥಾಪಿಸಿ ಹಲಸಂಗಿ ಎನ್ನುವ ಕುಗ್ರಾಮವನ್ನು ಸಾಹಿತ್ಯ ಮತ್ತು ಸಂಸ್ಕೃತಿಯ ಕೇಂದ್ರವಾಗಿಸಿದ ಮಹಾನ್ ಚೇತನ ಎಂದು ಡಾ. ವಿ. ಡಿ. ಐಹೊಳ್ಳಿ ಹೇಳಿದ್ದಾರೆ.
ನಗರದ ನವಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಲಸಂಗಿ ಗೆಳೆಯರ ಪ್ರತಿಷ್ಠಾನ ವತಿಯಿಂದ ಮಧುರಚೆನ್ನರು 120ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾನಾಡಿದರು.
ಡಾ. ಸತ್ಯಮಂಗಲ ಮಹಾದೇವ ಮಾತನಾಡಿ, ಮಧುರ ಭಾವದ ಮಧುರಚೆನ್ನರು ತಮ್ಮ ಅನುಭಾವ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಅಮರರಾಗಿದ್ದಾರೆ. ಅವರು ರಚಿಸಿದ ಕವಿತೆ, ನಾಟಕಗಳು ಕರ್ನಾಟಕ ಏಕೀಕರಣದ ಮಹತ್ವವನ್ನು ಅಂದಿನ ಸಮಾಜಕ್ಕೆ ಮನವರಿಕೆ ಮಾಡುತ್ತವೆ.ಮಧುರಚೆನ್ನರು ಸೃಜನ ಸಾಹಿತ್ಯ, ಸಂಶೋಧನೆ, ಸಂಗ್ರಹ, ಹೀಗೆ ಬಹುಮುಖ ಪ್ರತಿಭಾ ಸಂಪನ್ನರು ಎಂದು ಹೇಳಿದರು.
ಇಂದಿನ ವಿದ್ಯಾರ್ಥಿಗಳಿಗೆ ಮಧುರಚೆನ್ನರು ಜೀವನ ಆದರ್ಶಮಯ ಅದಕ್ಕಾಗಿ ಹಲಸಂಗಿ ಗೆಳೆಯರ ಪ್ರತಿಷ್ಠಾನವನ್ನು ಸ್ಥಾಪಿಸಿದೆ ಎಂದು ಈ ಪ್ರತಿಷ್ಠಾನದ ಸದಸ್ಯ ಸಂಚಾಲಕರಾಗಿರುವ ಪ್ರೊ. ದೊಡ್ಡಣ್ಣ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರದಲ್ಲಿ ಮಧುರಚೆನ್ನರು ಮೊಮ್ಮಕ್ಕಾಳಾದ ಜಗದೇವ ಗಲಗಲಿ ಮತ್ತು ಪುಲಕೇಶಿ ಗಲಗಲಿ ಹಾಗೂ ಪ್ರತಿಷ್ಠಾನದ ಸದಸ್ಯ ಎ. ಎ.ಪಾರ್ಸಿ, ಮಹಾವಿದ್ಯಾಲಯದ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ರೋಹಿಣಿ ಹಿರೇಶೆಡ್ಡಿ ವಂದಿಸಿದರು.