ವಿಜಯಪುರ: ಮಹಾರಾಷ್ಟ್ರದ ಸೋಲಾಪೂರದ ಶ್ರದ್ಧಾ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಅಬ್ಯಾಕಸ್ ಮತ್ತು ವೇದಿಕ್ ಗಣಿತ ಸ್ಪರ್ಧೆಯಲ್ಲಿ ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿರುವ ಸಿದ್ಧೇಶ್ವರ ಕೋಚಿಂಗ್ ಕ್ಲಾಸ್ ನ ವಿದ್ಯಾರ್ಥಿನಿ ಸ್ಪಂದನಾ ಬಸನಗೌಡ ಬಿರಾದಾರ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದು ಗಮನ ಸೆಳೆದಿದ್ದಾರೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸುರೇಶ ಜತ್ತಿ, ದೇವರು ಪ್ರತಿಯೊಬ್ಬ ಮಗುವಿನಲ್ಲಿ ವಿಶೇಷ ಸಾಮರ್ಥ್ಯ ಕೊಟ್ಟಿರುತ್ತಾನೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಮಗುವಿಗೆ ಕ್ರೀಡೆ ನೃತ್ಯ, ಸಂಗೀತ ಯೋಗ ಸೇರಿದಂತೆ ಯಾವ ಕ್ಷೇತ್ರದಲ್ಲಿ ಸಾಧಿಸಲು ಆಸಕ್ತಿ ಇದೆಯೋ ಅದರ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಪಾಲ್ಗೋಂಡಿದ್ದ ಈ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದರುವುದು ಹೆಮ್ಮೆಯ ವಿಷಯವಾಗಿದೆ. ಇತರ ವಿದ್ಯಾರ್ಥಿಗಳೂ ಕೂಡ ಸಮಾಜದಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನೀಲಾ ಜತ್ತಿ, ಶಿಕ್ಷಕರಾದ ಭಾಗ್ಯಾ ಬಡಿಗೇರ, ಮಂಜುನಾಥ ಚವ್ಹಾಣ, ಸುಮಿತ್ರಾ ಹೊಸಮನಿ, ಶಿವಕುಮಾರ ಕುದರಗೊಂಡ, ಮನಮೋಹನ ಮುಗಳಿ, ಚಂದ್ರಕಲಾ ಕಟ್ಟಿಮನಿ, ಸಾರಿಗೆ ವಿಭಾಗದ ಮುಖ್ಯಸ್ಥ ಶಿವು ಆಲಬಾಳಮಠ, ವಾಣಿ ಬಡಿಗೇರ, ಮಧು ಬಿರಾದಾರ, ಸುಧಾರಾಣಿ ಹಾಗೂ ಸಿಬ್ಬಂಧಿ ಸಂತಸ ವ್ಯಕ್ತಪಡಿಸಿದ್ದಾರೆ.