ವಿಜಯಪುರ:ನಗರದ ಹೊರ ವಲಯದಲ್ಲಿರುವ ಭೂತನಾಳ ಕೆರೆಗೆ ಕೃಷ್ಣಾ ನದಿಯಿಂದ ನೀರು ತುಂಬಿಸಲಾಗುತ್ತಿದ್ದು, ಶೀಘ್ರದಲ್ಲಿ ಕೆರೆ ಸಂಪೂರ್ಣವಾಗಿ ಭರ್ತಿಯಾಗಲಿದೆ. ಇದರಿಂದ ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿರುವ ಐತಿಹಾಸಿಕ ಭೂತನಾಳ ಕೆರೆಯಿಂದ ವಿಜಯಪುರ ನಗರದ ಉತ್ತರ ಮತ್ತು ಪಶ್ಚಿಮ ಭಾಗದ 10 ವಾರ್ಡುಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗದ ಕಾರಣ ಕೆರೆಯಲ್ಲಿ ನೀರಿನ ಸಂಗ್ರಹವಾಗಿಲ್ಲ. ಹೀಗಾಗಿ ಡೆಡ್ ಸ್ಟೋರೇಜ್ ಗಿಂತ ಕಡಿಮೆ ನೀರು ಸಂಗ್ರಹವಾಗಿತ್ತು ಎಂದು ತಿಳಿಸಿದ್ದಾರೆ.
ಈಗ ಆಲಮಟ್ಟಿ ಜಲಾಶಯದ ಹಿನ್ನಿರಿನಲ್ಲಿ ಜಲಸಂಗ್ರಹ ಪ್ರಮಾಣ ಹೆಚ್ಚಾಗಿದೆ. ಕೃಷ್ಣಾ ನದಿಗೆ ಲಿಂಗದಳ್ಳಿ ಜಾಕವೆಲ್ ದಿಂದ ಕೆರೆಗೆ ನೀರು ತುಂಬಿಸುವ ಕಾರ್ಯ ಆರಂಭಗೊಂವಾಗಿದೆ. ಶೀಘ್ರದಲ್ಲಿಯೇ ಭೂತನಾಳ ಕೆರೆ ಸಂಪೂರ್ಣ ಭರ್ತಿ ಆಗಲಿದೆ. ಆದ್ದರಿಂದ ನಗರದ ಶೇ 30 ರಷ್ಟು ಭಾಗಕ್ಕೆ ನೀರು ಪೂರೈಕೆಯಾಗುತ್ತದೆ. ಉಳಿದ ಶೇ. 70 ರಷ್ಟು ಭಾಗಕ್ಕೆ ಕೊಲ್ಹಾರ್ ಜಾಕವೆಲ್ ದಿಂದ ನೀರು ಪೂರೈಕೆ ಆಗುತ್ತದೆ.
ಹೀಗಾಗಿ ವಿಜಯಪುರ ನಗರದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗುವುದಿಲ್ಲ. ಸಾರ್ವಜನಿಕರು ಕುಡಿಯುವ ನೀರಿಗಾಗಿ ಆತಂಕ ಪಡುವ ಅಗತ್ಯವಿಲ್ಲ. ಇನ್ನು ಮುಂದೆ ಸಮರ್ಪಕವಾಗಿ ನೀರು ಪೂರೈಕೆಯಾಗಲಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.