ಅಂಗದಾನದ ಮಹತ್ವದ ಕುರಿತು ಜನಜಾಗೃತಿ ಮೂಡಿಸಲು ಸಾಮಾಜಿಕ ಚಳವಳಿ ಅಗತ್ಯ- ಡಾ. ಎಸ್. ಬಿ. ಪಾಟೀಲ

ವಿಜಯಪುರ: ಅಂಗಾಂಗ ದಾನದ ಮಹತ್ವದ ಕುರಿತು ಜನಜಾಗೃತಿಗೆ ಸಾಮಾಜಿಕ ಚಳವಳಿ ಅಗತ್ಯವಾಗಿದೆ ಎಂದು ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ‌ ಆಸ್ಪತ್ರೆಯ ಯುರಾಲಜಿ ವಿಭಾಗದ ಮುಖ್ಯಸ್ಥ ಡಾ. ಎಸ್. ಬಿ. ಪಾಟೀಲ ಹೇಳಿದ್ದಾರೆ.

ನಗರದಲ್ಲಿರುವ ವಿವಿಯಲ್ಲಿ ಕುಲಪತಿ ಡಾ. ಆರ್. ಎಸ್. ಮುಧೋಳ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಜೊತೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಪ್ರತಿ ವರ್ಷ ಜುಲೈ ತಿಂಗಳನ್ನು ಅಂಗದಾನ ಮಹೋತ್ಸವ ಮಾಸ ಎಂದು ಆಚರಿಸಲಾಗುತ್ತಿದೆ. ಅಲ್ಲದೇ, ಆಗಷ್ಟ 3 ರಂದು ರಾಷ್ಟ್ರೀಯ ಅಂಗದಾನ ದಿನಾಚರಣೆ ಮಾಡಲಾಗುತ್ತಿದೆ. ಇದರ ಅಂಗವಾಗಿ ವಿವಿಯ 400 ವೈದ್ಯರು ಮತ್ತು ವಿದ್ಯಾರ್ಥಿಗಳು ವಿಜಯಪುರ ನಗರದಲ್ಲಿ ಅಂಗದಾನ ಮಹತ್ವ ಮತ್ತು ಅಂಗದಾನದ ಬಗ್ಗೆ ಇರುವ ತಪ್ಪು ತಿಳಿವಳಿಕೆ ಹೋಗಲಾಡಿಸುವ ಕುರಿತು ಮನೆ- ಮನೆಗೆ ತೆರಳಿ ಸುಮಾರು 25000 ಕುಟುಂಬಗಳಲ್ಲಿ ಜನಜಾಗೃತಿ ಮೂಡಿಸಲಿದ್ದಾರೆ ಎಂದು ಅವರು ತಿಳಿಸಿದರು.

ವಿಜಯಪುರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿವಿಯಲಗಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಡಾ. ಆರ್. ಎಸ್. ಮುಧೋಳ ಮಾತನಾಡಿದರು

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಅಂಗದಾನದ ಅರಿವು ಮತ್ತು ಕಸಿ ಮಾಡಲು ಸೌಲಭ್ಯಗಳು ಇಲ್ಲದ ಕಾರಣ, ಅಂಗಾಂಗಗಳ ಕೊರತೆಯಿಂದ ಸಾವಿಗೀಡಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಕೊರತೆಯನ್ನು ನೀಗಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ನಾನಾ ಯೋಜನೆಗಳನ್ನು ರೂಪಿಸುತ್ತಿವೆ ಇದಕ್ಕೆ ಪೂರಕವಾಗಿ ವಿವಿಯ ಕುಲಾಧಿಪತಿಯಾಗಿರುವ ಎಂ. ಬಿ. ಪಾಟೀಲರು, ಅಂಗಾಂಗ ಕಸಿ ಸಂಬಂಧ ಜಿಲ್ಲೆಯ ಜನ ಬೇರೆ ಕಡೆ ಹೋಗುವುದನ್ನು ತಪ್ಪಿಸಲು ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಅಗತ್ಯವಾಗಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಿದ್ದಾರೆ. ಈಗ ಈ ಆಸ್ಪತ್ರೆಯಲ್ಲಿ ನಾವು ಕಿಡ್ನಿ ಮತ್ತು ಕಾರ್ನಿಯಾ ಕಸಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಮೆದುಳು ನಿಷ್ಕ್ರೀಯಗೊಂಡ ಓರ್ವ ವ್ಯಕ್ತಿಯಿಂದ ಎಂಟು ಜನರಿಗೆ ಜೀವದಾನ ಮಾಡಬಹುದಾಗಿದೆ. ಈ ವ್ಯಕ್ತಿಯಿಂದ ತಲಾ ಎರಡು ಕಣ್ಣು, ಕಿಡ್ನಿ, ಶ್ವಾಸಕೋಶಗಳು, ಹೃದಯ ಮತ್ತು ಯಕೃತ್‌ ನ್ನು ದಾನ ಮಾಡಬಹುದಾಗಿದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ಸುಮಾರು 2 ಲಕ್ಷ ಜನ ಕಿಡ್ನಿ ವೈಫಲ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಆದರೆ, ದಾನಿಗಳ ಕೊರತೆಯಿಂದ ಕೇವಲ ಸುಮಾರು 15000 ಜನರಿಗೆ ಮಾತ್ರ ಕಿಡ್ನಿ ಕಸಿ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಪ್ರತಿ ವರ್ಷ 50000 ಹೃದ್ರೋಗಿಗಳಿಗೆ ಹೃದಯದ ಅವಶ್ಯಕತೆಯಿದ್ದು, ಕೇವಲ 15 ರಿಂದ 20 ಜನರಿಗೆ ಮಾತ್ರ ಕಸಿ ಮಾಡಲಾಗುತ್ತಿದೆ. ಪ್ರತಿ ವರ್ಷ 1 ಲಕ್ಷ ಜನರಿಗೆ ನೇತ್ರಗಳ ಅವಶ್ಯಕತೆಯಿದ್ದು, ಕೇವಲ 25000 ಜನರಿಗೆ ಮಾತ್ರ ಕಾರ್ನಿಯಾ ಸಿಗುತ್ತಿದೆ. ಅದೇ ರೀತಿ ಪ್ರತಿ ವರ್ಷ ಸುಮಾರು 25000-30000 ಜನರಿಗೆ ಲಿವರ್(ಯಕೃತ್) ಅವಶ್ಯಕತೆಯಿದ್ದು ಕೇವಲ 1500 ರಿಂದ 2000 ಜನರಿಗೆ ಮಾತ್ರ ಕಸಿ ಮಾಡಲಾಗುತ್ತಿದೆ. ಅಲ್ಲದೇ, ಶ್ವಾಸಕೋಶಗಳ ಅವಶ್ಯಕತೆಯು ಹೆಚ್ಚಾಗಿದೆ. ಪ್ರತಿ ವರ್ಷ ನಮ್ಮ ದೇಶದಲ್ಲಿ ಅಪಘಾತಗಳಲ್ಲಿ ಸುಮಾರು 1.50 ಲಕ್ಷ ಜನ ಸಾವಿಗೀಡಾಗುತ್ತಿದ್ದು, ಈ ಜನರ ಅಂಗಾಗಳನ್ನು ಸಂಬಂಧಿಕರು ದಾನ ಮಾಡಿದರೆ ಮತ್ತು ಅಂಗಾಂಗ ಕಸಿ ಸೌಲಭ್ಯಗಳು ಹೆಚ್ಚಾದಾಗ ಮಾತ್ರ ಕನಿಷ್ಠ ಶೇ. 50 ರಷ್ಟು ಅಂಗಾಂಗಗಳ ಬೇಡಿಕೆಯನ್ನು ಪೂರೈಸಬಹುದಾಗಿದೆ. ಅಲ್ಲದೇ, ಅಂಗಾಂಗ ಕೊರತೆಯಿಂದ ಬಳಲುತ್ತಿರುವ ರೋಗಿಗಳಿಗೆ ಜೀವದಾನ ಮಾಡಬಹುದಾಗಿದೆ. ಅಂಗಾಂಗ ದಾನಿಗಳು ವೆಬಸೈಟ್ ಗಳ ಮೂಲಕವು ನೋಂದಣಿ ಮಾಡಲು ಅವಕಾಶವಿದೆ ಎಂದು ಅವರು ತಿಳಿಸಿದರು.

ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ರೋಗಿಗಳ ಬೇಡಿಕೆಗೆ ಅನುಗುಣವಾಗಿ ಅಂಗಾಂಗಗಳು ಮತ್ತು ಅಂಗಾಂಗ ದಾನಿಗಳು ಸಿಗುತ್ತಿಲ್ಲ. ಅಂಗಾಂಗಳ ಕೊರತೆ ಮತ್ತು ಅಂಗಾಂಗ ಕಸಿ ಸೌಲಭ್ಯಗಳ ಕೊರತೆಯಿಂದಾಗಿ ರೋಗಿಗಳಿಗೆ ತೊಂದರೆಯಾಗುತ್ತಿದೆ. ಅಂಗಾಂಗಗಳು ಲಭ್ಯವಿದ್ದರು ಕಸಿಗಾಗಿ ರೋಗಿಗಳು ದೂರದ ಊರುಗಳಿಗೆ ತೆರಳಬೇಕಿರುವುದರಿಂದ ಚಿಕಿತ್ಸೆ ವೆಚ್ಚದಷ್ಟೆ, ರೋಗಿಗಳ ಜೊತೆ ತೆರಳುವ ಆರೈಕೆ ಮಾಡುವ ವ್ಯಕ್ತಿಗಳು ಹಾಗೂ ನಿರ್ವಹಣೆ ವೆಚ್ಚವೂ ಸಮವಾಗಿರುವುದು ಹೊರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಎಂ. ಬಿ. ಪಾಟೀಲ ಅವರು ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಅಂಗಾಂಗ ಕಸಿಗೆ ಅಗತ್ಯವಾಗಿರುವ ಸೌಲಭ್ಯ ಒದಗಿಸಿದ್ದಾರೆ. ಅಲ್ಲದೇ, ಸರಕಾರಿ ಆರೋಗ್ಯ ವಿಮೆ ಯೋಜನೆಗಳಡಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದ್ದಾರೆ. ಇದಕ್ಕೆ ಪೂರಕವಾಗಿ ಅಂಗಾಂಗ ಕಸಿ ಚಿಕಿತ್ಸೆ ಪಡೆಯುವ ಮೊದಲು 5 ಜನ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದ ವಿಜಯಪುರ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶದ ರೋಗಿಗಳು ಹಾಗೂ ಅವರ ಕುಟುಂಬ ಚಿಕಿತ್ಸಾ ವೆಚ್ಚದ ಹೊರೆ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು.

ಶುದ್ದ ಗಾಳಿ, ಶುದ್ದ ನೀರು ಮತ್ತು ಶುದ್ದ ಆಹಾರದ ಕೊರತೆಯಿಂದಾಗಿ ಜನರಲ್ಲಿ ಕ್ಯಾನ್ಸರ್ ನಂಥ ಕಾಯಿಲೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಂ. ಬಿ. ಪಾಟೀಲ ಅವರು ಸಮಾಜಮುಖಿ ಕೆಲಸಗಳ ಕಡೆ ಕಾರ್ಯನ್ಮುಖರಾಗಿದ್ದು, ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಲು ಕ್ರಮ ಕೈಗೊಂಡಿದ್ದಾರೆ. ನಮ್ಮ ಜಿಲ್ಲೆಯ ಜನ ಗಂಭೀರ ಕಾಯಿಲೆಗಳಿಗೂ ವಿಜಯಪುರದಲ್ಲಿಯೇ ಚಿಕಿತ್ಸೆ ಪಡೆಯಲಿ ಎಂಬುದು ಅವರ ಆಶಯವಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ, ಮೆಡಿಕಲ್ ಸುಪರಿಂಟೆಂಡಂಟ್ ಡಾ. ರಾಜೇಶ ಹೊನ್ನುಟಗಿ ಮತ್ತು ಡಾ. ರೀನಾ ಸಿನ್ಹಾ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌