ರೂ. 10 ಸೇರಿದಂತೆ ಎಲ್ಲಾ ನಾಣ್ಯಗಳನ್ನು ಕಾನೂನು ಬದ್ಧವಾಗಿ ಸ್ವೀಕರಿಸಿ: ಡಿಸಿ ಟಿ. ಭೂಬಾಲನ್ ಸೂಚನೆ

ವಿಜಯಪುರ: ಭಾರತೀಯ ರಿಸರ್ವ್ ಬ್ಯಾಂಕಿನಿಂದ ಚಲಾವಣೆಯಾಗಿರುವ ಎಲ್ಲಾ ನಾಣ್ಯಗಳನ್ನು ಕಾನೂನು ಬದ್ಧವಾಗಿ ಸ್ವೀಕರಿಸಬೇಕು.  ರೂ. 10 ನಾಣ್ಯಗಳನ್ನು ಸ್ವೀಕರಿಸದಿರುವುದು ನಾಣ್ಯ ಕಾಯ್ದೆ 2011ರ ಸೆಕ್ಷನ್ 6(1)ರ ಉಲ್ಲಂಘನೆಯಾಗುವುದರಿಂದ ಎಲ್ಲ ನಾಣ್ಯಗಳನ್ನು ಕಾನೂನಾತ್ಮಕವಾಗಿ ಸ್ವೀಕರಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ ನೀಡಿದ್ದಾರೆ.  

ಭಾರತೀಯ ರಿಸರ್ವ್ ಬ್ಯಾಂಕ್ ಕಾಲಕಾಲಕ್ಕೆ ವಿಶಿಷ್ಟ ಲಕ್ಷಣಗಳುಳ್ಳ ನಾಣ್ಯಗಳನ್ನು ಬಿಡುಗಡೆ ಮಾಡುತ್ತದೆ.  ನಾಣ್ಯಗಳ ಅಸಲಿತನ ಬಗ್ಗೆ ಶಂಕೆ ವ್ಯಕ್ತಪಡಿಸಿ, ವ್ಯಾಪಾರಸ್ಥರು, ಅಂಗಡಿಯವರು ಮತ್ತು ಸಾರ್ವಜನಿಕರ ಮನಸ್ಸಿನಲ್ಲಿ ಶಂಕೆ ಬಿತ್ತಿರುತ್ತಾರೆ.  ಇದರಿಂದ ದೇಶದ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಈ ನಾಣ್ಯಗಳ ಚಲಾವಣೆಗೆ ತೊಡಕು ಉಂಟಾಗಿರುತ್ತದೆ.  ಇಂಥ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು.  ಅಲ್ಲದೇ, ಯಾವುದೇ ಹಿಂಜರಿಕೆ ಇಲ್ಲದೇ ಈ ನಾಣ್ಯಗಳನ್ನು ಎಂದಿನಂತೆಯೇ ಶಾಸನಬದ್ದ ಚಲಾವಣೆಯಾಗಿ ಸ್ವೀಕರಿಸುವುದನ್ನು ಮುಂದುವರೆಸುವಂತೆ ಭಾರತೀಯ ರಿಸರ್ವ ಬ್ಯಾಂಕ್ ಸೂಚನೆ ನೀಡಿದೆ.

ಈಗ 50 ಪೈಸೆ ರೂ. 1, 2, 5 ಹಾಗೂ ರೂ. 10 ಮತ್ತು ರೂ. 20 ಮುಖಬೆಲೆಯ ನಾನಾ ಗಾತ್ರದ ಮತ್ತು ವಿನ್ಯಾಸದ ನಾಣ್ಯಗಳು ಚಲಾವಣೆಯಲ್ಲಿವೆ.  ಈ ನಾಣ್ಯಗಳನ್ನು ಎಲ್ಲರೂ ಸ್ವೀಕರಿಸಬೇಕಾಗಿರುತ್ತದೆ.  ಕೆಲವು ಕಡೆ ಅಂಥ ನಾಣ್ಯಗಳ ಅಸಲಿತನದ ಬಗ್ಗೆ ಜನರಲ್ಲಿ ಅನುಮಾನಗಳಿವೆ.  ಇದರ ಪರಿಣಾಮವಾಗಿ ಕೆಲವು ವ್ಯಾಪಾರಿಗಳು, ಅಂಗಡಿಕಾರರು, ವಾಣಿಜ್ಯ ಸಂಸ್ಥೆಗಳು, ರಾಜ್ಯ ರಸ್ತೆ ಸಾರಿಗೆ ನಿಗಮ, ಸರಕಾರಿ, ಅರೆ ಸರಕಾರಿ, ಸರಕಾರದ ಹೊರತಾದ ಇಲಾಖೆಯ ಸಿಬ್ಬಂದಿಗಳು, ವಾಹನ ಚಾಲಕರು, ಆಟೋ, ಟ್ಯಾಕ್ಸಿ, ಇತರೆ ಮತ್ತು ಸಾರ್ವಜನಿಕರು ನಾಣ್ಯಗಳನ್ನು ಸ್ವೀಕರಿಸಲು ಹಿಂಜರಿಯದೇ, ತಮ್ಮ ಅನುಮಾನಗಳನ್ನು ಬದಿಗಿಟ್ಟು ನಿಯಮಿತವಾಗಿ ಚಲಾವಣೆಗೆ ಬಂದ ನಾನಾ ಮುಖಬೆಲೆಯ ಎಲ್ಲಾ ನಾಣ್ಯಗಳನ್ನು ಕಾನೂನುನಾತ್ಮಕವಾಗಿ ಸ್ವೀಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಸೂಚನೆ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌