ವಿಜಯಪುರ: ದೇಶದಲ್ಲಿಯೇ ಇದೇ ಮೊದಲ ಬಾರಿಗೆ ವಿನೂತನ ಕಾರ್ಯಕ್ರಮವೊಂದನ್ನು ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಬಸವನಾಡಿನ ಪ್ರತಿಷ್ಠಿತ ಬಿ.ಎಲ್.ಡಿ.ಈ ಡೀಮ್ಡ್ ವಿಶ್ವವಿದ್ಯಾಲಯದ ಸುಮಾರು 600 ಜನ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಜನಮೆಚ್ಚುವ ಕೆಲಸ ಮಾಡಿದ್ದಾರೆ.
ಆಗಷ್ಟು 3 ರಾಷ್ಟ್ರೀಯ ಅಂಗದಾನ ದಿನಾಚರಣೆ ನಡೆಯುತ್ತದೆ. ಈ ಕಾರ್ಯಕ್ರಮದ ಮಹತ್ವನ್ನು 25 ಸಾವಿರ ಮನೆಮನೆಗಳಿಗೆ ತೆರಳಿ ಜನಜಾಗೃತಿ ಮಾಡುವ ಮೂಲಕ ಈ ವೈದ್ಯರು ಮತ್ತು ವಿದ್ಯಾರ್ಥಿಗಳು ರಾಷ್ಟ್ರೀಯ ಅಂಗದಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಗಮನ ಸೆಳೆದಿದ್ದಾರೆ.
ಬಿ.ಎಲ್.ಡಿ.ಇ ಡೀಮ್ಡ್ ವಿವಿ ವೈದ್ಯರು ಮತ್ತು ವಿದ್ಯಾರ್ಥಿಗಳು ನಾಲ್ಕು ತಂಡಗಳಲ್ಲಿ ನಗರದ ನಾಲ್ಕೂ ದಿಕ್ಕುಗಳಲ್ಲಿ ಕೈಗೊಂಡ ಜನಜಾಗೃತಿ ಜಾಥಾಕ್ಕೆ ವಿವಿ ಸಮಕುಲಾಧಿಪತಿ ಡಾ. ವಾಯ್. ಎನ್. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಜಂಟಿಯಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ವಾಯ್. ಎನ್. ಜಯರಾಜ, ಅಂಗದಾನ ವಿಶ್ವದಲ್ಲೇಯೇ ಶ್ರೇಷ್ಠದಾನವಾಗಿದೆ. ಅಂಗಾಂಗಳ ವೈಫಲ್ಯದಿಂದ ಬಳಲುತ್ತಿರುವವರಿಗೆ ಅಂಗದಾನ ಮಾಡುವ ಮೂಲಕ ಜೀವನ ನೀಡಬಹುದು ಎಂದು ಹೇಳಿದರು.
ಮನುಷ್ಯ ಜೀವನ ಸಾರ್ಥಕವಾಗಬೇಕಾದರೆ ಉತ್ತಮ ಆರೋಗ್ಯ ಮತ್ತು ಉತ್ತಮ ನಡವಳಿಕೆ ಮುಖ್ಯವಾಗಿವೆ. ಉತ್ತಮ ಆರೋಗ್ಯ ಮತ್ತು ನಡವಳಿಕೆ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತವೆ. ಜನರಿಗೆ ರಕ್ತದಾನ ಮತ್ತು ನೇತ್ರದಾನದ ಬಗ್ಗೆ ಅರಿವು ಇದೆ. ಆದರೆ, ಜೀವರಕ್ಷಕ ಇತರ ಅಂಗಗಳ ದಾನದ ಮಹತ್ವ ಗೊತ್ತಿಲ್ಲ. ಅಷ್ಟೇ ಅಲ್ಲ, ಅಂಗದಾನದ ವಿಧಾನ ಮತ್ತು ಉಪಯೋಗದ ಕುರಿತು ಜರಿಗೆ ಮಾಹಿತಿಯ ಕೊರತೆ ಇದೆ. ಈ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ ನಾನಾ ಅಂಗಾಗ ವೈಫಲ್ಯದಿಂದ ಬಳಲುತ್ತಿರುವವರಿಗೆ ಜೀವದಾನ ನೀಡಬಹುದಾಗಿದೆ ಎಂದು ಅವರು ತಿಳಿಸಿದರು.
ಸಂಬಂಧಿಕರಿಗೆ ಕಿಡ್ನಿ ಕೊಡುವುದರಿಂದ ಜೀವ ಉಳಿಸಬಹುದು. ವ್ಯಕ್ತಿ ಮೃತಪಟ್ಟರೆ ಆತನ ಅಂತ್ಯಕ್ರಿಯೆಯೊಂದೆ ಕೊನೆಯ ದಾರಿ ಎಂಬ ಮೂಢನಂಬಿಕೆಯಿಂದ ಹೊರಬರಬೇಕಿದೆ. ಯಾವುದೇ ವ್ಯಕ್ತಿ ನಿಧನ ಹೊಂದಿದ ಬಳಿಕವೂ ಆತನ ದೇಹದಿಂದ ಬಳಸಬಹುದಾದ ಅಂಗಾಂಗಳನ್ನು ದಾನ ಮಾಡಿದರೆ ಈ ಅಂಗಾಂಗಳು ಅಗತ್ಯವಿರುವ ರೋಗಿಯನ್ನು ಬದುಕಿಸಬಹುದು. ಮೆದುಳು ನಿಷ್ಕ್ರೀಯವಾಗಿರುವ ವ್ಯಕ್ತಿಯೊಬ್ಬರ ಎರಡು ತಲಾ ಎರಡು ಕಣ್ಣು, ಶ್ವಾಸಕೋಶ, ಕಿಡ್ನಿ, ಹೃದಯ ಮತ್ತು ಲಿವರ್ ದಾನ ಮಾಡುವ ಮೂಲಕ ಎಂಟು ಜನರಿಗೆ ಮರುಜನ್ಮ ನೀಡಬಹುದಾಗಿದೆ. ನಿಧನ ಹೊಂದಿದ ವ್ಯಕ್ತಿಯ ದೇಹಕ್ಕೆ ಬೆಲೆ ಎಂಬುದರ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ಜನರಿಗೆ ಅಂಗದಾನದ ವಿಧಾನ, ಮಹತ್ವ ಮತ್ತು ಚಿಕಿತ್ಸೆಯ ಕುರಿತು ಮನವರಿಕೆ ಮಾಡಿಕೊಡಬೇಕು. ವೈದ್ಯರು ಮತ್ತು ವಿದ್ಯಾರ್ಥಿಗಳು ತಮ್ಮಲ್ಲಿರುವ ಜ್ಞಾನವನ್ನು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳಬೇಕು. ಓರ್ವ ವ್ಕತ್ಯಿಯಿಂದ ಎಷ್ಟು ಜನರಿಗೆ ಉಪಯೋಗವಾಗಬುಹುದು ಎಂಬುದನ್ನು ತಿಳಿಸಬೇಕು. ವಿವಿಯ ಕುಲಾಧಿಪತಿ ಎಂ. ಬಿ. ಪಾಟೀಲ ಅವರ ಜನಪರ ಕಾಳಜಿಯ ಹಿನ್ನೆಲೆಯಲ್ಲಿ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಕಿಡ್ನಿ ಮತ್ತು ಕಾರ್ನಿಯಾ ಕಸಿಗೆ ಅವಕಾಶ ಒದಗಿಸಲಾಗಿದೆ. ಸರಕಾರಿ ಆರೋಗ್ಯ ವಿಮೆ ಯೋಜನೆಗಳ ಮೂಲಕವೂ ಚಿಕಿತ್ಸೆ ಪಡೆಯಬಹುದು ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಆಸ್ಪತ್ರೆಯ ಯುರಾಲಜಿ ವಿಭಾಗದ ಮುಖ್ಯಸ್ಥ ಡಾ. ಎಸ್. ಬಿ. ಪಾಟೀಲ ಮಾತನಾಡಿ, ದೇಶದಲ್ಲಿ ಪ್ರತಿವರ್ಷ ನಾನಾ ಅಂಗಾಂಗಳ ಬೇಡಿಕೆಗೆ ತಕ್ಕಷ್ಟು ಅಂಗಗಳು ಸಿಗದ ಕಾರಣ ಲಕ್ಷಾಂತರ ಜನರು ಸಾವಿಗೀಡಾಗುತ್ತಿದ್ದಾರೆ. ಅಂಗದಾನದ ಬಗ್ಗೆ ಅರಿವು ಮೂಡಿಸಿದರೆ ಈ ಕೊರತೆಯನ್ನು ತಕ್ಕಮಟ್ಟಿಗೆ ತಡೆದು ಜೀವದಾನ ಮಾಡಬಹುದಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಮಾತನಾಡಿ, ಈ ಜನಜಾಗೃತಿ ಜಾಥಾದ ಮೂಲಕ ಜನರು ದೇಹದಾನ ಮಾಡಲು ಪ್ರೋತ್ಸಾಹಿಸಬೇಕು. ಅಂಗದಾನ ನೋಂದಣಿ ವಿಧಾನ, ಅಗತ್ಯ ದಾಖಲೆಗಳನ್ನು ಸಂಗ್ರಹಿಸುವ ಮೂಲಕ ಈ ವಿನೂತನ ಯೋಜನೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ಡಾ. ಅರವಿಂದ ಪಾಟೀಲ ಮತ್ತು ಡಾ. ಮನೋಜ ವೈದ್ಯ ತಂಡ ನಗರದ ಉತ್ತರ ಭಾಗದಲ್ಲಿ ಐಶ್ರವರ್ಯ ನಗರ, ಗುರುರಾಜ ಕಾಲನಿ ಮತ್ತೀತರ ಕಡೆ, ಡಾ. ಉದಯಕುಮಾರ ನುಚ್ಚಿ ಮತ್ತು ಡಾ. ದಯಾನಂದ ಬಿರಾದಾರ ನಗರದ ದಕ್ಷಿಣ ಭಾಗದ ವಜ್ರಹನುಮಾನ ನಗರ, ಜಲನಗರ, ಡಾ. ಸಂದೀಪ ಯಂಕಂಚಿ, ಮತ್ತು ಡಾ. ಸಂತೋಷ ನಂದಿ ಹಾಗೂ ಡಾ. ಸಂತೋಷ ಪಾಟೀಲ ನೇತೃತ್ವದ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ನಗರದ ಪೂರ್ವ ಮತ್ತು ಪಶ್ಚಿಮ ಭಾಗದ ನಾನಾ ಬಡಾವಣೆಗಳ 25000 ಮನೆಮನೆಗಳಿಗೆ ತೆರಳಿ ಅಂಗದಾನದ ವಿಧಾನ, ಮಹತ್ವದ ಕುರಿತು ಜಾಗೃತಿ ಮೂಡಿಸಿರು.
ಈ ಸಂದರ್ಭದಲ್ಲಿ ವಿವಿ ರಜಿಸ್ಟ್ರಾರ್ ಡಾ. ರಾಘವೇಂದ್ರ ವಿ. ಕುಲಕರ್ಣಿಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಡಾ. ವಿನಯ ಕುಂದರಗಿ ಮುಂತಾದವರು ಉಪಸ್ಥಿತರಿದ್ದರು.
ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಈ ಯೋಜನೆಗೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗುರುರಾಜ ಕಾಲನಿ ನಿವಾಸಿ ಸವಿತಾ ಬಿರಾದಾರ ಎಂಬುವರು ಸತ್ತ ಮೇಲೆ ವ್ಯಕ್ತಿಯನ್ನು ಅಂತ್ಯಕ್ರಿಯೆ ಮಾಡಿ ಮಣ್ಣಿನಲ್ಲಿ ಮಣ್ಣು ಮಾಡುವ ಬದಲು ಉಪಯೋಗವಿರುವ ಅಂಗಗಳನ್ನು ದಾನ ಮಾಡುವ ಮೂಲಕ ಅಂಗಾಂಗ ವೈಫಲ್ಯದಿಂದ ಬಳಲುವ ರೋಗಿಗಳಿಗೆ ಜೀವದಾನ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದ ಮಾತು ಈ ಜನಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿರುವುದಕ್ಕೆ ಸಾಕ್ಷಿಯಾಗಿದೆ.