ಗುಮ್ಮಟ ನಗರಿಯಲ್ಲಿ ಡಿಸಿ ಟಿ. ಭೂಬಾಲನ ಸಿಟಿ ರೌಂಡ್ಸ್- ಒಳಚರಂಡಿ, ನೀರು ಸರಬರಾಜು, ರಸ್ತೆ ಕಾಮಗಾರಿಗಳ ಪರಿಶೀಲನೆ

ವಿಜಯಪುರ: ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ವಿಜಯಪುರ ನಗರದ ಜುಮ್ಮಾ ಮಸೀದಿ ರಸ್ತೆ, ಹಕೀಮ್ ಚೌಕ್, ಗೋಲಗುಂಬಜ್, ರೇಲ್ವೆ ಸ್ಟೇಶನ್ ರಸ್ತೆ, ನವಬಾಗ ರಸ್ತೆ ಸೇರಿದಂತೆ ನಾನಾ ಸ್ಥಳಗಳಿಗೆ ಭೇಟಿ ನೀಡಿ ರಸ್ತೆ, ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.

ಬೆ. 7 ಗಂಟೆಗೆ ಮಹಾನಗರ ಪಾಲಿಕೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ನಗರ ನೀರು ಸರಬರಾಜು ಮಂಡಳಿ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ  ನಾನಾ ಅಧಿಕಾರಿಗಳೊಂದಿಗೆ ಸಿಟಿ ರೌಂಡ್ಸ್ ನಡೆಸಿದ ಜಿಲ್ಲಾಧಿಕಾರಿಗಳು, ನಗರದ ಅತಾವುಲ್ಲಾ ವೃತ್ತದಿಂದ ಜಂಡಾಕಟ್ಟಿಯ ಮುಖ್ಯ ರಸ್ತೆಯನ್ನು ವಿಕ್ಷಿಸಿದರು.  ಕೂಡಲೇ ಒಳಚರಂಡಿ ಕಾರ್ಯ ಪೂರ್ಣಗೊಳಿಸಿ ಸಿ. ಸಿ ರಸ್ತೆ ನಿರ್ಮಾಣಕ್ಕೆ ಪಾಲಿಕೆ ಅಭಿಯಂತರರಿಗೆ ಅವರು ಸೂಚನೆ ನೀಡಿದರು.

ಡಿಸಿ ಟಿ. ಭೂಬಾಲ ವಿಜಯಪುರ ನಗರದಲ್ಲಿ ಸಿಟಿರೌಂಡ್ಸ್ ನಡೆಸಿ ನಾನಾ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು

ನಂತರ ರೇಲ್ವೆ ಸ್ಟೇಶನ್ ಹತ್ತಿರ ರಸ್ತೆ ಕಾರ್ಯ ಆರಂಭಿಸದೇ ಇರುವ ಕುರಿತು ಕೆಆರ್‍ಐಡಿಎಲ್ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ವೈಜ್ಞಾನಿಕವಾಗಿ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಿ, ರಸ್ತೆ ಅಭಿವೃದ್ದಿ ಪಡಿಸಬೇಕು.  ಅತೀಕ್ರಮಣ ಮಾಡಿರುವ ಆಸ್ತಿದಾರರನ್ನು ಕರೆದು ರಸ್ತೆ ಅಭಿವೃದ್ಧಿಗೆ ಅತಿಕ್ರಮಣ ತೆರವು ಮಾಡಲು ಎಡಿಎಲ್‍ಆರ್ ಹಾಗೂ ಮಹಾನಗರ ಪಾಲಿಕೆ ಜಂಟಿಯಾಗಿ ಸಮೀಕ್ಷೆ ನಡೆಸಿ ಅತಿಕ್ರಮಣ ಕುರಿತು ಗುರುತುಗಳನ್ನು ಹಾಕುವಂತೆ ಅವರು ಸೂಚನೆ ನೀಡಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜ ನವಭಾಗ ಭೇಟಿ ನೀಡಿ, ಈ ಬಡಾವಣೆಯಲ್ಲಿ ಹೆಚ್ಚಿನ ಮಳೆಯಾದಾಗ ಎಲ್ಲ ಮನೆಗಳಿಗೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೆಜ್ ಆವರಣದಲ್ಲಿ ನೀರು ನಿಲ್ಲುತ್ತಿರುವ ಸಮಸ್ಯೆಯನ್ನು ಆಲಿಸಿ, ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ ಸೂಕ್ತ ಚರಂಡಿ ಹಾಗೂ ಒಳಚರಂಡಿ ವ್ಯವಸ್ಥೆ ಕೈಗೊಂಡು ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಬಳಿಕ ಪ್ರವಾಸೊದ್ಯಮ ಇಲಾಖೆಯ ರೂ. 1.40 ಕೋ. ಅನುದಾನದಲ್ಲಿ ಮಂಜೂರಾದ ವಿಜಯಪುರ ನಗರದ ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗೋಳಗುಮ್ಮಟ ಸ್ಮಾರಕದ (ರೈಲ್ವೆ ಬ್ರಿಡ್ಜ್ ನಿಂದ ರೈಲ್ವೆ ಸ್ಟೇಷನ್ ಸರ್ಕಲ್) ಕೋಟೆಗೋಡೆ ಕಂದಕದಿಂದ ಸ್ಮಾರಕದವರೆಗೆ ಪೂರ್ವ ರಸ್ತೆ ಸ್ಟೇಷನ್ ಹಿಂದಿನ ರಸ್ತೆ ಸೇರುವ ರಸ್ತೆಯ ದಕ್ಷಿಣ ಭಾಗದ ರಸ್ತೆ ಹಾಗೂ ಮಳೆ ನೀರು, ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಸ್ಥಳ ತಪಾಸಣೆ ನಡೆಸಿದರು.  ಅಲ್ಲದೇ, ಉದ್ದೇಶಿತ ರಸ್ತೆ ಸಮೀಕ್ಷಾ ಕಾರ್ಯಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು, ನಗರ ಸೌಂದರೀಕರಣಕ್ಕೆ ಪ್ರವಾಸೋದ್ಯಮಕ್ಕೆ ಪೂರಕವಾಗುವಂತೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವುದರೊಂದಿಗೆ ರಸ್ತೆಯ ಪಕ್ಕದಲ್ಲಿ ಒಳಚರಂಡಿ, ಪಾದಚಾರಿಗಳ ಅನುಕೂಲಕ್ಕಾಗಿ ಪುಟಪಾತ್ ನಿರ್ಮಾಣ ಮಾಡಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದಿನ್ ಸೌದಾಗರ, ಉಪಾಯುಕ್ತ ಮಹಾವೀರ ಬೋರಣ್ಣವರ, ಪ್ರವಾಸೊದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಕೆಆರ್‍ಐಡಿಎಲ್ ಅಭಿಯಂತರ ತಿಮ್ಮರಾಜಪ್ಪ, ಡಿಟಿಸಿ ಅನೀಲಕುಮಾರ ಬಣಜಿಗೇರ, ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರ ಶರಣಪ್ಪ, ಪರಿಸರ ಅಭಿಯಂತರ ಅಶೋಕ ಸಜ್ಜನ, ಮಲ್ಲಿಕಾರ್ಜುನ ಚಿಕೊಂಡ ವಿದ್ಯುತ್ ಅಭಿಯಂತರರು, ಹೊನ್ನಾಕಟ್ಟಿ ಜಲಮಂಡಳಿ ಅಭಿಯಂತರರು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌