ಬಸವನಾಡಿನ ಪಿಡಿಜೆ ಬ ಶಾಲೆಯ ನೂತನ ಸಂಸತ್ತು ರಚನೆ- ಪ್ರಮಾಣ ವಚನ ಸ್ವೀಕರಿಸಿದ ಶಾಲೆಯ ಮಂತ್ರಿಮಂಡಳದ ಹೊಸ ಪದಾಧಿಕಾರಿಗಳು

ವಿಜಯಪುರ: ಬಸವನಾಡಿನ ಪ್ರತಿಷ್ಠಿತ ಪಿ.ಡಿ.ಜೆ ಬ ಶಾಲೆಯ ನೂತನ ಸಂಸತ್ತಿನ ಹೊಸ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆ ಹೊಸ ಮಂತ್ರಿಮಂಡಳದ ಪ್ರವೀಣ ಹಡಪದ, ಪ್ರಧಾನ ಮಂತ್ರಿಯಾಗಿ ಕುಬೇರ ಹೊನ್ನಕಸ್ತೂರಿ, ಉಪಪ್ರಧಾನ ಮಂತ್ರಿ ಆದರ್ಶ ಅಂಗಡಿ, ವಿರೋಧ ಪಕ್ಷದ ನಾಯಕ ಇಮ್ರಾನ್ ನದಾಫ ಮತ್ತು ಸದಸ್ಯರಾಗಿ 44 ಜನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪ್ರಮಾಣ ವಚನ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ಈ ಶೈಕ್ಷಣಿಕ ವರ್ಷ ಶಾಲೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಸ್ವಾಗತಿಸಲಾಯಿತು.

ವಿಜಯಪುರ ನಗರದ ಪಿಡಿಜೆ ಬ ಹೈಸ್ಕೂಲ್ ಶಾಲೆಯ ನೂತನ ಸಂಸತ್ತಿನ ಪದಾಧಿಕಾರಿಗಳ ನಾಮಫಲಕ ಉದ್ಘಾಟಿಸಲಾಯಿತು

 

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೋಂಡಿದ್ದ ಹಿರಿಯ ಪತ್ರಕರ್ತ ಮತ್ತು ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ನಾಮನಿರ್ದೇಶಿತ ಸದಸ್ಯ ಮಹೇಶ ವಿ. ಶಟಗಾರ, ಮೊಬೈಲ್ ಮತ್ತು ಟಿವಿ ಗೀಳಿನಿಂದ ಹೊರಬಂದು ಶಾಲಾ ಪುಸ್ತಕಗಳ ಓದಿನ ಕಡೆಗೆ ಹೆಚ್ಚಿನ ಗಮನ ನೀಡಿದರೆ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗೆಲುವು ಮತ್ತು ಸೋಲನ್ನು ಚುನಾವಣೆಗೆ ಮಾತ್ರ ಸೀಮಿತಗೊಳಿಸಿ ಇಬ್ಬರೂ ಸೇರಿಕೊಂಡು ಕಳೆದ ವರ್ಷದ ವಿದ್ಯಾರ್ಥಿಗಳು ಮಾಡಿರುವುದಕ್ಕಿಂತಲೂ ಹೆಚ್ಚಿನ ಸಾಧನೆ ಮಾಡಬೇಕು.  ಮೊಬೈಲ್ ಮತ್ತು ಟಿವಿಗೆ ನೀಡುವ ಸಮಯವನ್ನು ಲೈಬ್ರರಿಯಲ್ಲಿ ಮತ್ತು ಮನೆಯಲ್ಲಿ ಪುಸ್ತಕಗಳ ಓದಿನ ಕಡೆಗೆ ನೀಡಬೇಕು.  ಪಾಠದ ಜೊತೆಗೆ ಆಟ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಸಮಯ ನೀಡಬೇಕು.  ಮನೆಯಲ್ಲಿ ತಂದೆ, ತಾಯಿ ಹಾಗೂ ಶಾಲೆಯಲ್ಲಿ ಗುರುಗಳು ನಮ್ಮ ಹಿತಚಿಂತಕರಾಗಿರುತ್ತಾರೆ.  ಅವರ ಬುದ್ದಿಮಾತುಗಳನ್ನು ಕೇಳಬೇಕು.  ಟೀನೇಜ್ ಬ್ರೇಕ್ ಇಲ್ಲದ ಕಾರು ಇದ್ದಂತೆ.  ಈ ಕಾರನ್ನು ಜಾಗರೂಕತೆಯಿಂದ ಚಲಾಯಿಸಿದರೆ ಸುರಕ್ಷಿತ ಮತ್ತು ಜೀವನ ಪೂರ್ತಿ ಉತ್ತಮ ಪ್ರಯಾಣ ಮಾಡಬಹುದು.  10ನೇ ತರಗತಿಯವರೆಗಿನ ವಯಸ್ಸಿನಲ್ಲಿ ರೂಢಿ ಮಾಡಿಕೊಳ್ಳುವ ಉತ್ತಮ ಹವ್ಯಾಸಗಳು ಬದುಕನ್ನು ಹಸನಗೊಳಿಸಲು ನೆರವಾಗುತ್ತವೆ.  ಟೀಕಾಕಾರನ್ನು ನಮ್ಮ ಮಾರ್ಗದರ್ಶಕರೆಂದು ತಿಳಿಯಬೇಕು.  ಜೊತೆಗೆ ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಸಂಸ್ಕೃತ ತರಗತಿಗಳು ನಡೆಯುವಾಗ ವಿದ್ಯಾರ್ಥಿಗಳು ಆಯಾ ಭಾಷೆಯಲ್ಲಿಯೇ ಮಾತನಾಡುವ ಮೂಲಕ ಬಹುಭಾಷಾ ಪಾಂಡಿತ್ಯ ಹೊಂದಬಹುದು.  ಇದು ವಿದ್ಯಾರ್ಥಿಗಳ ವೃತ್ತಿ ಜೀವನದಲ್ಲಿ ಬಹು ಉಪಯೋಗಿಯಾಗಿದೆ.  ಒಟ್ಟಾರೆ ಧನಾತ್ಮಕ ವಿಚಾರಗಳನ್ನು ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದು ಅವರು ಹೇಳಿದರು.

ನಿವೃತ್ತ ಶಿಕ್ಷಕ ಎಸ್. ಆರ್. ಕುಲಕರ್ಣಿ ಮಾತನಾಡಿ, ಪ್ರತಿದಿನ ಮನೆಯಲ್ಲಿ ತಂದೆ-ತಾಯಿ ಮತ್ತು ಶಾಲೆಯಲ್ಲಿ ಶಿಕ್ಷಕರ ಆಶೀರ್ವಾದ ಪಡೆದು ಉತ್ತಮ ವಿದ್ಯಾರ್ಥಿಗಳಾಗಬೇಕು ಎಂದು ಹೇಳಿದರು.

ಶಾಲೆಯ ಮುಖ್ಯಾಧ್ಯಾಪಕಿ ಕೆ. ಎಂ. ಸೀತಿಮನಿ ಪದಗ್ರಹಣ ಮಾಡಿದ ನೂತನ ಮಂತ್ರಿ ಮಂಡಲದ ಪದಾಧಿಕಾರಿಗಳಿಗೆ ಪ್ರತಿಜ್ಞೆ ಕೈಗೊಳ್ಳುವುದರ ಹಿಂದಿರುವ ಸದುದ್ದೇಶದ ಮಹತ್ವದ ಕುರಿತು ಸವಿಸ್ತಾರವಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಶಾಲಾ ಸಂಸತ್ತಿನ ಉಪಾಧ್ಯಕ್ಷೆ ಎ. ಎನ್. ಉಮ್ಮವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.  ಶಾಲೆಯ ವಿಜ್ಞಾನ ಮತ್ತು ಗಣಿತ ಶಿಕ್ಷಕ ಎಸ್. ಆರ್. ಜೋಶಿ ಸ್ವಾಗತಿಸಿದರು.  ದೈಹಿಕ ಶಿಕ್ಷಕ ಎ. ಎಂ. ಮಾಂಗ, ನಿರೂಪಣೆ ಎನ್. ಎಸ್. ರಘುವೀರ ಮತ್ತು ಎಸ್. ಎಂ. ಹಲಗಣಿ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌