ವಿಜಯಪುರ: ಶಾಲೆಯ ಮುಖ್ಯ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಆರೋಪಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಮತ್ತು ರೂ. 31000 ದಂಡ ವಿಧಿಸಿ ಆದೇಶ ಹೊರಡಿಸಿದೆ ಎಂದು ಪ್ರಧಾನ ಸರಕಾರಿ ಅಭಿಯೋಜಕ ಎಸ್. ಎಚ್. ಹಕೀಂ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಚ್ಯಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಹುಸೇನ ಮೀರಾಸಾಬ ಮಣೂರ ಎಂಬುವರ ಮೇಲೆ ಹಲ್ಲೆ ನಡೆಸಿದ ಆರೋಪಿ ರಾಜು ಉರ್ಫ್ ರಾಜಶೇಖರ ಹಾದಿಮನಿ ಎಂಬುವರಿಗೆ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಮತ್ತು ರೂ. 31 ಸಾವಿರ ದಂಡ ವಿಧಿಸಿದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣ ವಿಚಾರಣೆಯನ್ನು ಕೆತ್ತಿಕೊಂಡ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಾಲವಾಡೆ, ಕಲಂ 307ರ ಅನ್ವಯ ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ರೂ. 25000 ದಂಡ, ಕಲಂ 332ರ ಅನ್ವಯ 1 ವರ್ಷ ಜೈಲು ಶಿಕ್ಷೆ ಮತ್ತು ರೂ. 1000 ದಂಡ, ಕಲಂ 353ರ ಅನ್ವಯ 1 ವರ್ಷ ಜೈಲು ಶಿಕ್ಷೆ ಮತ್ತು ರೂ. 1000 ದಂಡ, ಕಲಂ 427 ಅನ್ವಯ ಆರು ತಿಂಗಳು ಜೈಲು ಶಿಕ್ಷೆ ಮತ್ತು ರೂ. 1000 ದಂಡ ಕಲಂ 506 ಅನ್ವಯ ಆರು ತಿಂಗಳು ಜೈಲು ಶಿಕ್ಷೆ ಮತ್ತು ರೂ. ರೂ. 1000 ದಂಡ, ಕಲಂ ಕಲಂ 323ರ ಅನ್ವಯ ರೂ. 1000 ದಂಡ ಹಾಗೂ ಕಲಂ 504ರ ಅನ್ವಯ ರೂ. 1000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ
ಆರೋಪಿ ರಾಜು ಉರ್ಫ್ ರಾಜಶೇಖರ ಹಚ್ಯಾಳ ತಾನು ಸಂಘಟನೆಯೊಂದಕ್ಕೆ ಸೇರಿದವನಾಗಿದ್ದು, ತಾನು ಹೇಳಿದಂತೆ ವಯಸ್ಸಿನ ಪ್ರಮಾಣ ಪತ್ರ ತಿದ್ದಿಕೊಡುವಂತೆ ಕೇಳಿದ್ದ. ಆದರೆ, ಸರಕಾರಿ ರಜಿಸ್ಟರ್ ಇರುವುದರಿಂದ ಅದನ್ನು ಯಾರಿಂದಲೂ ತಿದ್ದಿಕೊಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಸಿಟ್ಟಾದ ಆರೋಪಿ ಶಾಲೆಯಲ್ಲಿ ಅತೀಕ್ರಮಣ ಪ್ರವೇಶ ಮಾಡಿ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ತಮಗೆ ಕೊಲೆ ಮಾಡಲು ಪ್ರಯತ್ನಿಸಿ ಹಲ್ಲೆ ನಡೆಸಿದ್ದ. ಅಷ್ಟೇ ಅಲ್ಲ, ಶಾಲೆಯ ಸರಕಾರಿ ದಾಖಲಾತಿಯನ್ನು ಹರಿದು ಹಾಕಿದ್ದಾನೆ ಎಂದು ಆರೋಪಿಸಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಹುಸೇನ ಮೀರಾಸಾಬ ಮಣೂರ ಅವರು 05.02.2019 ರಂದು ಸಿಂದಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಸಿಂದಗಿ ಪಿ. ಎಸ್. ಐ ಶರಣಗೌಡ ಬಿ. ಗೌಡರ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಶಿಕ್ಷೆ ಮತ್ತು ದಂಡ ವಿಧಿಸಿದೆ ಎಂದು ಎಸ್. ಎಚ್. ಹಕೀಂ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.