ಬೆಲೆಏರಿಕೆಯಿಂದ ತತ್ತರಿಸಿರುವ ಜನರಿಗೆ ಸರಕಾರ ಗ್ಯಾರಂಟಿ ಸ್ಕೀಂ ಗಳ ಮೂಲಕ ಶಕ್ತಿ ತುಂಬುತ್ತಿದೆ- ಎಂ. ಬಿ. ಪಾಟೀಲ

ವಿಜಯಪುರ: ಬೆಲೆ ಏರಿಕೆಯಿಂದ ತತ್ತರಿಸಿರುವ ನಾಡಿನ ಜನರಿಗೆ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಶಕ್ತಿ ತುಂಬುತ್ತಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಗೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ನಗರದಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿಗಳ ಕುರಿತು ಭರಸವೆ ನೀಡಿದ್ದೇವು. ಅದಕ್ಕೆ ಸ್ಪಂದಿಸಿ ಅಧಿಕಾರ ನೀಡಿದ ಜನರಿಗಾಗಿ ಈ ಯೋಜನೆಗಳನ್ನು ಜಾರಿ ಮಾಡುವ ಮೂಲಕ ನುಡಿದಂತೆ ನಡೆಯುತ್ತಿದ್ದೇವೆ. ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ, ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ, ಈಗ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಯೋಜನೆಗೆ ಚಾಲನೆ ನೀಡಿದ್ದೇವೆ. ಆಗಷ್ಟ 15 ರಿಂದ ಮನೆಯ ಮುಖ್ಯಸ್ಥ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯಡಿ ರೂ. 2000 ಮಾಶಾಸನ ಹಾಗೂ ಶೀಘ್ರದಲ್ಲಿ ನಿರುದ್ಯೋಗಿ ಯುವಕರಿಗೆ ಯುವನಿಧಿ ಯೋಜನೆಯಡಿ ಮಾಶಾಸನ ನೀಡಲಿದ್ದೇವೆ ಎಂದು ಅವರು ತಿಳಿಸಿದರು.

ಅಕ್ಕಿಯನ್ನು ಕೇಳಿದರೂ ಕೇಂದ್ರ ಸರಕಾರ ಮೊದಲು ಒಪ್ಪಿ ನಂತರ ನಿರಾಕರಿಸಿದರು. ನುಡಿದಂತೆ ನಡೆಯುವ ಧರ್ಮಪಾಲನೆ ಹಿನ್ನೆಲೆ ಅಕ್ಕಿಯ ಬದಲು ರೂ. 170 ಹಣವನ್ನು ಫಲಾನುಭವಿಗಳ ಅಕೌಂಟಿಗೆ ಹಾಕುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳ ಕುರಿತು ಪ್ರತಿಪಕ್ಷಗಳು ಮಾಡುತ್ತಿದ್ದ ಟೀಕೆಗಳಿಗೆ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಉತ್ತರ ನೀಡಿದ್ದೇವೆ. ಗ್ಯಾರಂಟಿ ಯೋಡಜನೆಗಳ ಜಾರಿಯಿಂದ ಅಭಿವೃದ್ಧಿ ಕುಂಠಿತವಾಗುತ್ತದೆ. ದಿವಾಳಿಯಾಗುತ್ತತದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿದ್ದವು. ಆದರೆ, ಬಡವರಿಗೆ, ಅನ್ನ, ವಿದ್ಯುತ್, ಉಚಿತ ಬಸ್ ಪ್ರಯಾಣ, ಕುಟುಂಬದ ಹಿರಿಯ ಮಹಿಳೆಗೆ ಹಣ, ನಿರುದ್ಯೋಗಿ ಯುವಕರಿಗೆ ಯುವನಿಧಿ ನೀಡಿದರೆ ರಾಜ್ಯ ಹೇಗೆ ದಿವಾಳಿಯಾಗುತ್ತದೆ ಎಂದು ಪ್ರಶ್ನಿಸಿದ ಅವರು, ಟೀಕೆಗಳ ಸವಾಲನ್ನು ಎದುರಿಸಿ ಮುನ್ನಡೆದಿದ್ದೇವೆ. ಗ್ಯಾರಂಟಿ ಸ್ಕೀಂ ಗಳ ಜಾರಿಯಿಂದ ಅಭಿವೃದ್ಧಿಗೆ ಹಿನ್ನೆಡೆಯಾಗಲ್ಲ. ಬಜೆಟ್ ನಲ್ಲಿ ರೈತರ ಸಾಲದ ಪ್ರಮಾಣ ಹೆಚ್ಚಿಸಿದ್ದೇವೆ. ಕೃಷಿ ಹೊಂಡ ಯೊಜನೆ ಪುನಾರಂಭ ಮಾಡಿದ್ದೇವೆ ಎಂದು ಅವರು ಹೇಳಿದರು.

ವಿಜಯಪುರದಲ್ಲಿ ಗೃಹ ಜ್ಯೋತಿ ಕಾರ್ಯಕ್ರಮಕ್ಕೆ ಸಚಿವ ಎಂ. ಬಿ. ಪಾಟೀಲ ಚಾಲನೆ ನೀಡಿದರು

ಉಚಿತ ಯೋಜನೆಗಳಿಂದ ಬಡವರ ಹಣ ಉಳಿತಾಯವಾಗಲಿದೆ. ಉಪವಾಸ ತಪ್ಪಲಿದೆ. ಮಧ್ಯಮ ವರ್ಗದವರಿಗೂ ಇದರಿಂದ ಲಾಭವಾಗಲಿದ್ದು, ತೈಲಬೆಲೆ, ಆಹಾರ ಪದಾರ್ಥಗಳ ಬೆಲೆ ಹೆಚ್ಚಳದಿಂದಾಗಿ ತತ್ತರಿಸಿರುವ ಜನರಿಗೆ ಜನಪರ ಯೋಜನೆಗಳ ಮೂಲಕ ಶಕ್ತಿವಂತರನ್ನಾಗಿ ಮಾಡುತ್ತಿದ್ದೇವೆ. ಎಲ್ಲ ಜನಪರ ಯೋಜನೆಗಳು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಾರಿಗೆ ಬಂದಿರುವುದು ಗಮನಾರ್ಹವಾಗಿದೆ.

ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ರೈತರ ರೂ. 76000 ಕೋ. ಸಾಲ ಮನ್ನಾ ಮಾಡಿದ್ದರು. ಆದರೆ, ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಬದಲು ಉದ್ಯಮಿಗಳ ರೂ. 20 ಲಕ್ಷ ಕೋ. ಸಾಲ ಮನ್ನಾ ಮಾಡಿದೆ. ನಾವು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ತಕ್ಕ ಉತ್ತರ ನೀಡಿದ್ದೇವೆ. ಹಣಕಾಸು ನಿರ್ವಹಣೆಯಲ್ಲಿ ಸಿಎಂ ಮೇಧಾವಿಯಾಗಿದ್ದಾರೆ. ಎಲ್ಲ ವಿಚಾರಗಳು ಅವರಿಗೆ ಗೊತ್ತಿದೆ. 14 ಬಜೆಟ್ ಮಂಡಿಸಿರುವ ಅವರು, ರಾಜ್ಯವನ್ಮು ಮತ್ತಷ್ಟು ಅಭಿವೃದ್ಧಿ ಮಾಡಲು ಸಮರ್ಥರಿದ್ದು, ಅದು ಯಶಸ್ವಿಯೂ ಆಗಲಿದೆ. ನಮ್ಮ ಯೋಜನೆಗಳಿಂದ ಜನರನ್ನು ಶಕ್ತಿವಂತರನ್ನಾಗಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಈಗಿನ ಯೋಜನೆಯಿಂದ ವಿಜಯಪುರ ಜಿಲ್ಲೆಯ ಒಟ್ಟು 4 ಲಕ್ಷ 62 ಸಾವಿರ ಗೃಹ ವಿದ್ಯುತ್ ಬಳಕೆದಾರರಿದ್ದಾರೆ. ಈ ಕುಟುಂಬಗಳ ಪೈಕಿ 26 ಸಾವಿರ ಕುಟುಂಬಗಳನ್ನು ಹೊರತು ಪಡಿಸಿ ಉಳಿದ ಎಲ್ಲರಿಗೂ ಲಾಭವಾಗಲಿದೆ. ಗ್ರಾಮೀಣ ಪ್ರದೇಶದ ಶೇ. 99.6 ಮತ್ತು ನಗರ ಪ್ರದೇಶದ ಶೇ. 98 ರಷ್ಟು ಗ್ರಾಹಕರಿಗೆ 200 ಯುನಿಟ್ ಉಚಿತ ವಿದ್ಯುತ್ ಲಾಭ ಸಿಗಲಿದೆ. ಈ ಯೋಜನೆಯಿಂದ ನಗರ ಪ್ರದೇಶದ 24 ಸಾವಿರ ಮತ್ತು ಗ್ರಾಮೀಣ ಭಾಗದ ಎರಡು ಸಾವಿರ ಜನ ಮಾತ್ರ ಹೊರಗುಳಿಯಲಿದ್ದಾರೆ. ಒಟ್ಟಾರೆ ಜಿಲ್ಲೆಯ ಗೃಹ ವಿದ್ಯುತ್ ಬಳಕೆದಾರರಿಗಾಗಿ ಸರಕಾರ ಪ್ರತಿವರ್ಷ ರೂ. 200 ಕೋ. ಹಣವನ್ನು ಹೆಸ್ಕಾಂ ಗೆ ಪಾವತಿಸಲಿದೆ. ವಿಜಯಪುರ ಜಿಲ್ಲೆಯಲ್ಲಿರುವ 2.16 ಲಕ್ಷ ರೈತರ ಪಂಪಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ರೈತರ ಪರವಾಗಿ ಸರಕಾರ ಪ್ರತಿವರ್ಷ ರೂ. 1200 ಹಣವನ್ನು ಹೆಸ್ಕಾಂ ಗೆ ಪಾವತಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

 

ಬರದ ಜಿಲ್ಲೆಯನ್ನು ಈಗ ನೀರಾವರಿ ಜಿಲ್ಲೆಯನ್ನಾಗಿ ಮಾಡಿದ್ದೇವೆ. ಇನ್ನು ಮುಂದೆ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಿದ್ದೇವೆ. ಈ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೇವೆ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಪ್ರಧಾನಿ ಈ ಹಿಂದೆ ಭರವಸೆ ನೀಡಿದ್ದರು. ಆದರೆ, ಕಳೆದ ಒಂಬ್ತತು ವರ್ಷಗಳಲ್ಲಿ 18 ಕೋಟಿ ಉದ್ಯೋಗ ನೀಡಲಿಲ್ಲ. ರೈತರ ಆದಾಯ ದ್ವಿಗುಣವಾಗಲಿಲ್ಲ. ನಾವು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತಿದ್ದೇವೆ ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ಸಾಂಕೇತಿಕವಾಗಿ 26 ಜನ ಗೃಹ ಜ್ಯೋತಿ ಫಲಾನುಭವಗಳಿಗೆ ಶೂನ್ಯ ವಿದ್ಯುತ್ ಬಿಲ್ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ನಾಗಠಾಣ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ, ಸಿಂದಗಿ ಶಾಸಕ ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಟಿ. ಭೂಬಾಲನ, ಜಿ. ಪಂ. ಸಿಇಓ ರಾಹುಲ ಶಿಂಧೆ, ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಹೆಸ್ಜಾಂ ತಾಂತ್ರಿಕ ನಿರ್ದೇಶಕ ಶ್ರೀಕಾಂತ ಸಸಾಲಟ್ಟಿ, ಸೂಪರಿಂಟೆಂಡೆಂಟ್ ಎಂಜಿನಿಯರ ಜಿ. ಕೆ. ಗೋಟ್ಯಾಳ, ಎಕ್ಸಿಕ್ಯೂಟಿವ್ ಎಂಜಿನಿಯರ್ ಸಿದ್ದಪ್ಪ ಬಿಂಜಗೇರಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌