ವಿಜಯಪುರ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಸತ್ಯ, ಅಹಿಂಸೆ ಎಂಬ ತತ್ವಗಳು ಅನುಸರಿಸಿ ಅವುಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಸರ್ವಕಾಲಕ್ಕೂ ಸತ್ಯದೆಡೆಗೆ ಅವರು ನಂಬಿ ಆಚರಿಸಿದ ತತ್ವಾದರ್ಶಗಳನ್ನು ಅರಿತುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನವದೆಹಲಿಯ ರಾಷ್ಟ್ರೀಯ ಮಳೆಯಾಶ್ರಿತ ಕೃಷಿ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಅಶೋಕ ದಳವಾಯಿ ಹೇಳಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದೊಂದಿಗೆ ಗಾಂಧಿ ಭವನದಲ್ಲಿ ಆಯೋಜಿಸಿದ್ದ 1942ರ ಕ್ವಿಟ್ ಇಂಡಿಯಾ ಮೂವ್‌ಮೆಂಟ್ ಚಳುವಳಿಯ ನೆನಪಿಗಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಾತನಾಡಿದರು.
ಗಾಂಧೀಜಿಯವರು ತಮ್ಮ ಜೀವನವನ್ನು ಸಮಾಜದ ಒಳಿತಿಗಾಗಿ ಮುಡಿಪಾಗಿಟ್ಟರು. ನಮ್ಮ ಮನಸ್ಸು,ಹೃದಯ ಪ್ರೀತಿಯಿಂದ ತುಂಬಿರಬೇಕು. ಗಾಂಧಿ ಅವರ ವಿಚಾರಧಾರೆಗಳನ್ನು ಅರಿಯಬೇಕು. ಮಹಾತ್ಮ ಗಾಂಧಿಜಿ ಅವರ ಹೋರಾಟದ ರೀತಿ ಅನೇಕ ದೇಶಗಳಿಗೆ ಪ್ರೇರಣೆಯಾದವು. ಮಾರ್ಟಿನ ಲೂಥರ್ ಕಿಂಗ್ ಗಾಂಧೀಜಿಯ ವಿಚಾರಗಳಿಂದ ಪ್ರಭಾವಿತರಾಗಿದ್ದರು. ದೇಶದ ಸ್ವಾತಂತ್ರ್ಯ ಹೋರಾಟವು ಪ್ರೀತಿ ವಿಶ್ವಾಸ, ಸತ್ಯ ಅಹಿಂಸೆಯ ತತ್ವ ಒಳಗೊಂಡಿದ್ದವು. ಗಾಂಧಿ ಪ್ರತಿಯೊಂದು ವಿಷಯದ ಮೇಲೆ ಚಿಂತನೆ ಮಾಡಿದ್ದಾರೆ. ಮಹಾತ್ಮರ ಚರಿತ್ರೆ ಅರಿತುಕೊಳ್ಳುವ ನಿಟ್ಟಿನಲ್ಲಿ ದೇಶದ ಅಭ್ಯುದಯಕ್ಕೆ ಇಂದಿನ ಯುವಕರು ಕೈಜೋಡಿಸಬೇಕು ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಮಾತನಾಡಿ, ನನ್ನ ಜೀವನವೇ ನನ್ನ ಸಂದೇಶ ಎಂದು ಸಾರಿದ ಗಾಂಧೀಜಿ ಅವರ ಸತ್ಯ ಅಹಿಂಸಾ ಮಾರ್ಗದಲ್ಲಿ ನುಡಿದು ನಡೆದು ಮಹಾತ್ಮರಾಗಿದ್ದಾರೆ ಇಂದಿನ ಪೀಳಿಗೆ ಅವರ ಜೀವನ ವಿಚಾರಗಳನ್ನು ತಿಳಿದುಕೊಳ್ಳಬೇಕು. ಜಿಲ್ಲೆಯ ಗಾಂಧಿ ಭವನ ಪ್ರೇರಣಾ ತಾಣವನ್ನಾಗಿಸುವಲ್ಲಿ ಜಿಲ್ಲಾಧಿಕಾರಿಗಳು ಹಲವು ಸಭೆ ನಡೆಸಿ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆಸಕ್ತಿ ಹೊಂದಿದ್ದಾರೆ. ಸಾರ್ವಜನಿಕರು ಜಿಲ್ಲೆಯ ಗಾಂಧಿ ಭವನಕ್ಕೆ ಆಗಮಿಸಿ ವೀಕ್ಷಣೆ ಮಾಡುವಂತೆ ಅವರು ಮನವಿ ಮಾಡಿದರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ರಾಜೇಂದ್ರ ಪೋತದಾರ ಮಾತನಾಡಿ, ಅಭಿವೃದ್ಧಿಯ ಚಿಂತನಾಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು. ದೇಶದ ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹಾತ್ಮರ, ಸಾಧಕರ ಸ್ಮರಿಸುವ ಇಂಥ ಕಾರ್ಯಕ್ರಮ ಜಿಲ್ಲೆಯ ಗಾಂಧಿ ಭವನದಲ್ಲಿ ಆಗಾಗ ನಡೆಯಬೇಕು ಎಂದು ಹೇಳಿದರು.
ಬಾಲಕೀಯರ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಆರ್. ಸಿ. ಹಿರೇಮಠ ಮಾತನಾಡಿ, ಚಲೇಜಾವ್ ಚಳುವಳಿಯ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಡಾ.ರಿಯಾಜ್ ಫಾರೂಕಿ ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಗಾಂಧಿಜಿಯವರ ಬಹು ಮೆಚ್ಚಿನ ವೈಷ್ಣವ ಜನತೋ ಪ್ರಾರ್ಥನೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ರುದ್ರಗೌಡ ಪಾಟೀಲ, ಅಪ್ಪಾಸಾಹೇಬ ಯರನಾಳ, ಗಾಂಧಿ ಭವನದ ಸದಸ್ಯ ಬಾಪೂಗೌಡ ಪಾಟೀಲ, ಪೀಟರ್ ಅಲೆಕ್ಸಾಂಡರ್, ಫಿರೋಜ್ ರೋಜಿಂದಾರ್, ನಿಲೇಶ ಬೇನಾಳ, ನಿವೃತ್ತ ಶಿಕ್ಷಕ ಹುಮಾಯೂನ ಮಮದಾಪೂರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಸಿಕ್ಯಾಬ್ ಕಾಲೇಜಿನ ಬೋಧಕ ಹಾಗೂ ಬೇಧಕರ ಹೊರತಾದ ಸಿಬ್ಬಂದಿ, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.