ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮುಕ್ತ ಶುದ್ಧ ಆಡಳಿತ ನೀಡಲು ಕಾಂಗ್ರೆಸ್ ಸರಕಾರ ಬದ್ಧವಾಗಿದೆ. ಅಧಿಕಾರಕ್ಕೆ ಬಂದ ಎರಡೇ ತಿಂಗಳಿನಲ್ಲಿ ಕಳೆದ ಐದು ವರ್ಷಗಳಿಂದ ಧೂಳು ಹಿಡಿದಿದ್ದ 67 ಭ್ರಷ್ಟ ಕಂದಾಯ ಇಲಾಖೆ ಅಧಿಕಾರಿ ಮತ್ತು ನೌಕರರ ಕಡತಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗಿದ್ದು, ಆರೋಪಿಗಳಿಗೆ ಶಿಕ್ಷೆಯನ್ನೂ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಇಷ್ಟು ಮಾತ್ರದ ಕ್ರಮದಿಂದ ದೊಡ್ಡ ಇಲಾಖೆಯೊಂದರಲ್ಲಿ ಸುಧಾರಣೆ ಸಾಧಿಸಿಬಿಡಬಹುದು, ಇಲಾಖೆಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ ಜನರಿಗೆ ಉತ್ತಮ ಸೇವೆ ನೀಡಬಹುದು ಎಂಬ ಭ್ರಮೆ ನಮಗಿಲ್ಲ. ಹೀಗಾಗಿ ಭ್ರಷ್ಟರ ಭೇಟೆಗೆ ನಮ್ಮ ಸರಕಾರ ಮತ್ತೂ ಒಂದು ಹೆಜ್ಜೆ ಮುಂದಿಟ್ಟಿದೆ. ಕಳೆದ ಕೆಲವು ವರ್ಷಗಳಿಂದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಮತ್ತು ಇಲಾಖೆ ವಿಚಾರಣೆ ಪ್ರಸ್ತಾವನೆಗಳು ನಾನಾ ಹಂತಗಳಲ್ಲಿ ಬಾಕಿ ಇರುತ್ತವೆ. ಈ ಪೈಕಿ ಆನೇಕ ಪ್ರಕರಣಗಳು ಪ್ರಸ್ತಾವನೆ ಅಥವಾ ವಿಚಾರಣೆ ಹಂತಗಳಲ್ಲಿ ಬಹಳ ವಿಳಂಬವಾಗಿದ್ದು, ವರ್ಷಗಳೇ ಕಳೆದಿರುವುದನ್ನು ನಾನು ಗಮನಿಸಿದ್ದೇನೆ. ದುರುದ್ದೇಶದಿಂದ ಕಡತಗಳನ್ನು ಮರೆಮಾಚಿ, ವಿಳಂಬ ಮಾಡಿರುವ ಪ್ರಕರಣಗಳೂ ಕೂಡ ನಡೆದಿವೆ ಎಂದು ತಿಳಿಸಿದ್ದಾರೆ.
ಈ ರೀತಿ ವಿಳಂಬ ಮಾಡಿ ತಪ್ಪು ಮಾಡದ ಅಧಿಕಾರಿಗಳಿಗೆ ತೊಂದರೆ ನೀಡುವುದು ಒಂದು ಕಡೆಯಾದರೆ ತಪ್ಪು ಮಾಡಿರುವ ಅಧಿಕಾರಿಗಳಿಗೆ ರಕ್ಷಣೆ ನೀಡುವುದು ಮತ್ತೊಂದು ಪರಿಣಾಮವಾಗಿರುತ್ತದೆ. ಇವರೆಡೂ ನ್ಯಾಯಕ್ಕೆ ವಿರುದ್ಧವಾಗಿವೆ. ಆಡಳಿತ ಸುಧಾರಣೆಯಾಗಬೇಕಾದರೆ ಸಮಯಕ್ಕೆ ಸರಿಯಾಗಿ ವಿಚಾರಣೆಗಳು ನಡೆದು ಅಮಾಯಕರನ್ನು ದೋಷಮುಕ್ತಗೊಳಿಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಅವಶ್ಯಕ. ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
- ನಾನಾ ಹಂತಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಪೂರ್ಣ ಪಟ್ಟಿ ತಯಾರಿಸುವುದು.
- ವಿಚಾರಣಾಧಿಕಾರಿಗಳು, ಮಂಡನಾಧಿಕಾರಿಗಳ ನೇಮಕ ಮತ್ತು ಇತರೆ ಪ್ರಕ್ರಿಯೆಗಳಲ್ಲಿ ವಿಳಂಬ ಆಗದಂತೆ ಮಾಡುವುದು. ಈ ಹಂತಗಳಲ್ಲಿ ಕಡತಗಳನ್ನು ಮರೆಮಾಚಲು ಅವಕಾಶ ನೀಡಬಾರದು. ವಿಳಂಬವಿಲ್ಲದೆ ವಿಚಾರಣೆಗೆ ಒಳಪಡಿಸುವುದು ಹಾಗೂ ಮುಕ್ತಾಯಗೊಳಿಸುವುದು.
- ಹಾಲಿ ಚಾಲ್ತಿಯಲ್ಲಿರುವ ವಿಚಾರಣೆಗಳನ್ನು ಮತ್ತು ಈ ನಂತರದ ಪ್ರಕರಣಗಳನ್ನು ನಿಗದಿತ ಸಮಯದೊಳಗೆ ಮುಕ್ತಾಯ ಮಾಡಲು ವಿಚಾರಣಾಧಿಕಾರಿಗಳನ್ನು ತಾಕೀತು ಮಾಡುವುದು.
- ವಿಚಾರಣಾ ಕಾಲಾವಧಿಯನ್ನು ಅನಗತ್ಯವಾಗಿ ವಿಸ್ತರಣೆ ಮಾಡಕೂಡದು. ಅನಿವಾರ್ಯವಿದ್ದ ಸಂದರ್ಭಗಳಲ್ಲಿ ಮಾತ್ರ ಒಂದು ವಿಸ್ತರಣೆ ನೀಡುವುದು, ವಿಸ್ತರಣೆಗಳ ಮೂಲಕ ವಿಳಂಬಕ್ಕೆ ದಾರಿ ಮಾಡಿಕೊಡಬಾರದು.
- ಪ್ರಕರಣಗಳು ಅನಿವಾರ್ಯ ಕಾರಣಗಳಿಂದಾಗಿ ನ್ಯಾಯಾಲಯದ ಮೆಟ್ಟಿಲನ್ನು ತಲುಪಿದಲ್ಲಿ, ಇಂತಹ ಪ್ರಕರಣಗಳ ಶೀಘ್ರ ಮತ್ತು ಪರಿಣಾಮಕಾರಿ ವಿಲೇವಾರಿಗಾಗಿ ಕಾನೂನು ಕ್ರಮ ವಹಿಸುವುದು.
- ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಈ ಪ್ರಕರಣಗಳ ವಿಲೇವಾರಿ/ಪ್ರಗತಿ ಕುರಿತು ಪರಿಶೀಲನೆ ಮಾಡುವುದು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಆಗಾಗ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುವುದು.
- ವಿಚಾರಣಾ ವರದಿಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುವುದು. ಕಡತಗಳನ್ನು ವಿಚಾರಣೆಗೆ ಒಪ್ಪಿಸುವುದು ಹಾಗೂ ವಿಚಾರಣಾ ನಂತರ ಅಥವಾ ಯಾವುದೇ ಹಂತದಲ್ಲಿ ವಿಳಂಬ ಮಾಡಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು.
ಕರ್ನಾಟಕದ ಜನತೆಗೆ ನಾವು ನೀಡಿದ ಭರವಸೆಗೆ ಬದ್ಧರಾಗಿದ್ದೇವೆ. ಹೀಗಾಗಿ ಕಂದಾಯ ಇಲಾಖೆಯ ಸೇವೆಯನ್ನು ಜನರಿಗೆ ಮತ್ತಷ್ಟು ಹತ್ತಿರ ಕೊಂಡೊಯ್ಯಲು, ನೇರ, ಶುದ್ಧ ಮತ್ತು ಪ್ರಗತಿಪರ ಆಡಳಿತ ನೀಡಲು ಎಲ್ಲ ಇಲಾಖೆಗಳ ಮಾತೃ ಇಲಾಖೆಯಾದ ಕಂದಾಯ ಇಲಾಖೆಯಲ್ಲಿ ಮತ್ತಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂಬುದನ್ನು ನಾನು ಈ ಮೂಲಕ ತಿಳಿಯಪಡಿಸಲು ಇಚ್ಚಿಸುತ್ತೇನೆ ಎಂದು ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.