ವಿಜಯಪುರ: ರಾಜ್ಯ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಡಾ. ಬಿ. ಆರ್. ಅಂಬೇಡ್ಕರ ವೃತ್ತದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕುಚಬಾಳ ಮಾತನಾಡಿ, ಕಾಂಗ್ರೆಸ್ ಸರಕಾರ ರೈತ ವಿರೋಧಿಯಾಗಿದೆ. ಕೇವಲ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಯಾಮಾರಿಸಿ ಅಧಿಕಾರಕ್ಕೆ ಬಂದಿದ್ದು, ರೈತರನ್ನು ಸಶಕ್ತರನ್ನಾಗಿ ಮಾಡುತ್ತಿಲ್ಲ. ರೈತರಿಗೆ ಬಲ ತುಂಬಲು ಬಿಜೆಪಿ ಸರಕಾರದ ಅವಧಿಯಲ್ಲಿ ರೂಪಿಸಲಾಗಿದ್ದ ಯೋಜನೆಗಳನ್ನು ಕೈ ಬಿಟ್ಟು ದ್ವೇಷ ರಾಜಕಾರಣ ಮಾಡುತ್ತಿದೆ. ಅಲ್ಲದೇ, ನಾಡಿಗೆ ಅನ್ನ ನೀಡುವ ಅನ್ನದಾತನಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ತಾವು ಬೆಳೆದ ಬೆಳೆಗಳನ್ನು ತಮಗಿಷ್ಟದಂತೆ ಮಾರಾಟ ಮಾಡಲು ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಬಿಜೆಪಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಆದರೆ ದ್ವೇಷ ರಾಜಕಾರಣ ಭಾಗವಾಗಿ ಆ ತಿದ್ದುಪಡಿಯನ್ನು ರದ್ದುಗೊಳಿಸಿ ರೈತ ವಿರೋಧ ನೀತಿಯನ್ನು ಅನುಸರಿಸಿದೆ. ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡುವ ಅಧಿಕಾರವೂ ಇಲ್ಲವೇ ಎಂದು ಅವರು ಪ್ರಶ್ನಿಸಿದರು.
ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸಂಜಯ ಪಾಟೀಲ ಕನಮಡಿ ಮಾತನಾಡಿ, ರೈತ ಪರವಾದ ರೈತ ವಿದ್ಯಾನಿಧಿ ಜಾರಿಗೆ ಅನಾಸಕ್ತಿ, ವಿದ್ಯುತ್ ದರ ಏರಿಕೆ ಮಾಡುವ ಮೂಲಕ ರೈತರಿಗೆ ದೊಡ್ಡ ಮಟ್ಟದ ಹೊರೆಯನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ರೈತರ ಮಕ್ಕಳಿಗೆ ನೆರವಾಗಿದ್ದ ರೈತ ವಿದ್ಯಾನಿಧಿಯನ್ನು ಬಿಜೆಪಿ ಜಾರಿಗೊಳಿಸಿದೆ ಎಂಬ ಕಾರಣದಿಂದ ರದ್ದುಗೊಳಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ವಿದ್ಯುತ್ ದರ ಏರಿಕೆಯಿಂದ ಪಂಪಸೆಟ್ ಬಳಕೆ ಹೊರೆಯಾಗಿ ಪರಿಣಮಿಸಿದೆ. ಹತ್ತಿ ಉದ್ಯಮ, ಅಕ್ಕಿ ಮಿಲ್ ಮೊದಲಾದವುಗಳು ವಿದ್ಯುತ್ ದರ ಏರಿಕೆಯಿಂದ ನಲಗುತ್ತಿದ್ದು, ಇದರ ಪರಿಣಾಮ ರೈತರ ಮೇಲಾಗುತ್ತಿದೆ ಎಂದು ಅವರು ಹೇಳಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ರೈತಪರ ಯೋಜನೆಗಳನ್ನು ರದ್ದುಗೊಳಿರುವ ರಾಜ್ಯ ಸರಕಾರ ಅನ್ನದಾತನಿಗೆ ದ್ರೋಹ ಎಸಗಿದೆ. ರೈತ ಕುಟುಂಬಗಳಿಗೆ ಭದ್ರತೆ ಒದಗಿಸುವ ಜೀವನ ಜ್ಯೋತಿ ವಿಮಾ ರದ್ದತಿ, ರಾಜ್ಯದ ಒಂದು ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ ಭೂ ಸಿರಿ ಎಂಬ ಯೋಜನೆಯಲ್ಲಿ ರೂ. 10 ಸಾವಿರ ಹೆಚ್ಚುವರಿ ಸಹಾಯಧನ ನೀಡುವ ಬಿಜೆಪಿ ಸರಕಾರದ ನಿರ್ಧಾರ ರದ್ಧು ಮಾಡಿದೆ. ಕೇಂದ್ರ ಸರಕಾರದ ಜೊತೆ ಬಿಜೆಪಿ ಸಹ ಸಹಾಯ ಧನ ಒದಗಿಸುವ ಕಿಸಾನ್ ಸಮ್ಮಾನ್ ಯೋಜನೆಗೆ ತನ್ನ ಪಾಲಿನ ಹಣ ಬಿಡುಗಡೆ ಮಾಡಲು ಹಿಂದೇಟು ಹಾಕಿದೆ. ನೀರಾವರಿ ಯೋಜನೆಗಳ ನಿರ್ಲಕ್ಷ್ಯ, ಕ್ಷೀರ ಸಮುದ್ರ ಸಹಕಾರ ಬ್ಯಾಂಕ್ ರದ್ಧತಿ ಹೀಗೆ ರೈತರ ಪರವಾದ ಯೋಜನೆಗಳ ರದ್ಧತಿ ಪಟ್ಟಿ ದೊಡ್ಡದಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸಾವಯವ ಬೀಜ ಪ್ರಮಾಣನ ನಿಗಮದ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಡಾ. ಸುರೇಶ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ಶಿವರುದ್ರ ಬಾಗಲಕೋಟ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ, ಬಿಜೆಪಿ ಎಸ್. ಟಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ, ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಪಾಲಿಕೆ ಸದಸ್ಯ ರಾಹುಲ ಜಾಧವ,ಮಳುಗೌಡ ಪಾಟೀಲ, ಬಸವರಾಜ ಬಿರಾದಾರ, ಸಂಜೀವ ಐಹೊಳೆ, ಸಿದ್ದು ಬುಳ್ಳಾ, ವಿಠ್ಠಲ ಕಿರಸೂರ, ಸಂಪತ್ ಕುವಳ್ಳಿ, ಈರಣ್ಣ, ರಾಹುಲ್, ವಿನೋದ ಡೋಮನಾಳ, ರಾಜೇಶ ತಾವಸೆ, ಅಬ್ದುಲ ಸತ್ತಾರ ಕೊಲ್ಹಾರ, ಕಾಂತು ಶಿಂಧೆ, ವಿನಾಯಕ ದಹಿಂಡೆ, ಶಿವು ಮಡಿವಾಳರ, ರಾಮು ಚವ್ಹಾಣ, ಆನಂದ ಮುಚ್ಚಂಡಿ, ಜಗದೀಶ ಮುಚ್ಚಂಡಿ, ವಿಜಯ ಜೋಶಿ ಉಪಸ್ಥಿತರಿದ್ದರು.