ಬೆಂಗಳೂರು: ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ ಪಟ್ಟಣಗಳ ಜನರಿಗೆ 24×7 ನೀರು ಪೂರೈಸುವ ಗುರಿ ಹೊಂದಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವಿಜಯಪುರ ನಗರ, ಬಬಲೇಶ್ವರ ಮತ್ತು ತಿಕೋಟಾ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಸಂಬಂಧಿಸಿದಂತೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ನಾನಾ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿ ಮಾತನಾಡಿದರು.
ಬಬಲೇಶ್ವರ ಮತ್ತು ತಿಕೋಟಾಗಳಿಗೆ ಮೊದಲು ಪ್ರತೀ ವ್ಯಕ್ತಿಗೆ ದಿನಕ್ಕೆ 55 ಲೀ. ನೀರು ಒದಗಿಸುವ ಮಾನದಂಡಕ್ಕೆ ಅನುಗುಣವಾಗಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆ ಮಂಜೂರಾಗಿದೆ. ಇದಕ್ಕೆ ರೂ. 82 ಕೋ. ಒದಗಿಸಲಾಗಿತ್ತು. ಆದರೆ ಈಗ ಎರಡೂ ಪಟ್ಟಣ ಪಂಚಾಯಿತಿಗಳಾಗಿವೆ. ಹೀಗಾಗಿ, ನಗರ ಮತ್ತು ಪಟ್ಟಣ ಕುಡಿಯುವ ನೀರು ಪೂರೈಕೆ ಯೋಜನೆಯಂತೆ ಯೋಜನೆಗಳ ಮರುವಿನ್ಯಾಸ ಮಾಡಿ, ಇನ್ನುಮುಂದೆ 24/7 ನೀರು ಪೂರೈಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಅದೇ ರೀತಿ, ವಿಜಯಪುರ ನಗರಕ್ಕೆ ಕೊಲ್ಹಾರದಿಂದ ನೀರನ್ನು ಪೂರೈಕೆ ಮಾಡುವ 10.74 ಕಿ. ಮೀ. ಉದ್ದದ ಕಾಂಕ್ರೀಟ್ ಪೈಪುಗಳಲ್ಲಿ ಸೋರಿಕೆ ಕಂಡು ಬರುತ್ತಿದೆ. ಆದ್ದರಿಂದ ಇಲ್ಲಿ ಉತ್ಕೃಷ್ಟ ದರ್ಜೆಯ ಎಂಎಸ್ ಪೈಪ್ ಹಾಕಬೇಕು. 2018ರಲ್ಲಿ ಇದಕ್ಕೆ ರೂ. 32 ಕೋ. ಅನುದಾನ ಮಂಜೂರಾಗಿದ್ದರೂ ಟೆಂಡರ್ ರದ್ದಾಗಿತ್ತು. ಈಗ ಇದನ್ನು ಪರಿಷ್ಕರಿಸಲಾಗಿದ್ದು, ರೂ. 52 ಕೋ. ವೆಚ್ಚ ತಗುಲಬಹುದು ಎಂದು ಅಂದಾಜು ಮಾಡಲಾಗಿದೆ. ಈ ವಿಷಯವನ್ನು ತ್ವರಿತವಾಗಿ ಸಚಿವ ಸಂಪುಟದ ಮುಂದೆ ಮಂಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಜಯಪುರ ನಗರ ವ್ಯಾಪಕವಾಗಿ ಬೆಳೆಯುತ್ತಿದ್ದು, 90 ಕಿ. ಮೀ. ದೂರದ ಆಲಮಟ್ಟಿ ಅಣೆಕಟ್ಟೆಯಿಂದ ನೀರು ಪೂರೈಸಲಾಗುತ್ತಿದೆ. ಇಲ್ಲಿಗೆ ಮುಂದಿನ 50 ವರ್ಷಗಳ ಅಗತ್ಯವಿರುವ ನೀರಿನ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರು ಪೂರೈಕೆ ಯೋಜನೆ ರೂಪಿಸಬೇಕಾಗಿದೆ. ಇವೆಲ್ಲವನ್ನೂ ನಗರಾಭಿವೃದ್ಧಿ ಇಲಾಖೆ ಒಪ್ಪಿಕೊಂಡಿದ್ದು, ತ್ವರಿತವಾಗಿ ಕ್ರಮ ಕೈಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.
ಇದಲ್ಲದೆ, ವಿಜಯಪುರ ನಗರದಲ್ಲಿ ಸುಗಮ ಓಡಾಟ ಮತ್ತು ಸುರಕ್ಷತೆ ಹಾಗೂ ವಿದ್ಯುತ್ ಉಳಿತಾಯದ ದೃಷ್ಟಿಯಿಂದ ಎಲ್‌ಇಡಿ ದೀಪಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಟೆಂಡರ್ ಗೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಒಪ್ಪಿಗೆ ನೀಡಬೇಕಿದೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದರು.
ಈ ಸಭೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಆಯುಕ್ತ ಶರತ್, ಗ್ರಾಮೀಣ ಕುಡಿಯುವ ನೀರು ಯೋಜನೆ ಆಯುಕ್ತ ನಾಗೇಂದ್ರ ಪ್ರಸಾದ್, ಮುಖ್ಯ ಎಂಜಿನಿಯರ್ ಗಳು ಹಾಜರಿದ್ದರು.