ವಿಜಯಪುರ: ಯುವಕರು ದೇಶ ಸೇವೆ ಮಾಡಲು ಪಣತೊಡಬೇಕು ಎಂದು ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ಕೆ. ಹೊಸಮನಿ ಹೇಳಿದ್ದಾರೆ.
ನಗರದ ಬಾಲಕರ ಸರಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್. ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ಮೇರಾ ಮಿಟ್ಟಿ ಮೇರಾ ದೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ದೇಶದ ಭವಿಷ್ಯದ ಭವ್ಯ ನಾಗರಿಕರು. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ವೀರ ಯಶೋಗಾಥೆಯ ಬಗ್ಗೆ ತಿಳಿದುಕೊಳ್ಳಬೇಕು. ಅವರ ಹೋರಾಟದ ವಿಚಾರಗಳು ಪ್ರೇರಣೆಯಾಗಬೇಕು ಎಂದು ಅವರು ಹೇಳಿದರು.
ರೋಟರಿ ಸಂಸ್ಥೆ ಅಧ್ಯಕ್ಷ ಜಿ. ಎಸ್. ಕುಲಕರ್ಣಿ ಮಾತನಾಡಿ, ಸಂಸ್ಥೆಯು ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದೆ. ಯುವಕರು ದುಃಶ್ಚಟಗಳಿಂದ ದೂರವಿರಬೇಕು. ಸದಾ ದೇಶದ ಬಗ್ಗೆ ಚಿಂತಿಸಬೇಕು. ರೋಟರಿ ಸಂಸ್ಥೆಯೊಂದಿಗೆ ಕೈಜೋಡಿ ಸ್ಚಚ್ಛತಾ ಆಂದೋಲನ, ರಕ್ತದಾನ ಶಿಬಿರ, ರಸ್ತೆ ಸುರಕ್ಷತೆ, ಪರಿಸರ ಜಾಗೃತಿ, ಆರೋಗ್ಯ ಶಿಬಿರದಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಸಹ ವಿಸ್ತರಣೆ ನಿರ್ದೇಶಕ ಡಾ. ಆರ್. ಬಿ. ಬೆಳ್ಳಿ ಮಾತನಾಡಿ, ದೇಶ ಕಾಯುವ ಸೈನಿಕ ಮತ್ತು ಈ ದೇಶಕ್ಕೆ ಅನ್ನ ನೀಡುವ ರೈತರನ್ನು ಸದಾ ಸ್ಮರಿಸಬೇಕು. ಇಂದು ಜೈವಿಕ ಇಂಧನ ದಿನಾಚರಣೆ ಅಂಗವಾಗಿ ಪರಿಸರ ಸಂರಕ್ಷಣೆ ಸಂಬಂದ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿಯೊಬ್ಬ ಯುವಕರಲ್ಲಿ ಪರಿಸರ ಜಾಗೃತಿ ಅಗತ್ಯವಾಗಿದೆ ಎಂದು ಹೇಳಿದರು.
ಸುಬೇದಾರ ಮೇಜರ ಗುರಂಪತಿ ಮತ್ತು ಹವಾಲ್ದಾರ ಸ್ಟ್ಯಾನ್ಲಿ ಮಾತನಾಡಿ ತಾವು ಸೇನೆಯಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಅಲ್ಲದೇ, ಈ ದೇಶದಲ್ಲಿಯೇ ಅತ್ಯುನ್ನತ ಗೌರವ ದೇಶಸೇವೆ ಸಲ್ಲಿಸಿದ ಸೈನಿಕರಿಗಿದೆ. ಹೀಗಾಗಿ ಹೆಚ್ಚು ಯುವಕರು ಅಗ್ನಿವೀರ ಯೋಜನೆಯಡಿ ಸೇನೆಗೆ ಸೇರ್ಪಡೆಯಾಗಬೇಕು ಎಂದು ಹೇಳಿದರು.
ಪ್ರಾಚಾರ್ಯ ಬಿ. ಬಿ. ಗಂಗನಳ್ಳಿ ಮಾತನಾಡಿ, ಕಾಲೇಜಿನಲ್ಲಿ ಅನೇಕ ಪಠ್ಯ ಮತ್ತು ಪಠ್ಯದ ಹೊರತಾದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸದಾ ಮುಂದಿರಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಅರವಿಂದ ಇಂಗಳೇಶ್ವರ, ಬಿ. ಡಿ. ಪಲಟನ್, ಸಿದರೆಡ್ಡಿ ಇವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಯೋಜನಾಧಿಕಾರಿ ಜಾವೀದ ಸಾಲೋಟಗಿ, ಎಂ. ಬಿ. ಕನ್ನೂರ, ಎಸ್. ಜಿ. ಕುಂಬಾರ, ಚಂದ್ರಶೇಖರ ಸಿಂಧೂರ, ರಾಜೇಂದ್ರ ಜೋಷಿ, ಡಾ. ಎಸ್. ಎಸ್. ನಾಗಠಾಣ, ನಿರಜ ರುಣವಾಲ, ಶಿವಾ ಗಡಶೆಟ್ಟಿ ಸೇರಿದಂತೆ ಕಾಲೇಜಿನ 800 ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.