ನಿವೃತ್ತಿಯ ಬಳಿಕ ಭೂತಾಯಿಯ ಸೇವೆ ಮಾಡಿ ದಾಳಿಂಬೆ ನಗೆ ಬೀರುತ್ತಿರುವ ವಂದಾಲದ ರೈತನ ಯಶೋಗಾಥೆ

ವಿಜಯಪುರ: ನೌಕರಿಯಲ್ಲಿದ್ದಾಗ ಜಾನುವಾರುಗಳು ಸೇವೆ ಮಾಡಿದ ರೈತ ನಿವೃತ್ತಿಯ ನಂತರ ಭೂತಾಯಿಯ ಸೇವೆ ಮಾಡಿ ದಾಳಿಂಬೆ ನಗೆ ಬೀರುತ್ತಿದ್ದಾರೆ.  ಪಶುವೈದ್ಯಕೀಯ ಸಹಾಯಕರಾಗಿದ್ದ ಇವರು ಈಗ ಅಪ್ಪಟ ಮಣ್ಣಿನ ಮಗನಾಗಿ ದುಡಿಯುತ್ತಿದ್ದು, ಇತರರಿಗೂ ಮಾದರಿಯಾಗಿದ್ದಾರೆ.  

ಇದು ಬರದ ನಾಡಿನ ವ್ಯಕ್ತಿಯೊಬ್ಬರು ನಿವೃತ್ತಿ ಜೀವನದಲ್ಲೂ ಆಸಕ್ತಿಯಿಂದ ಬೇಸಾಯದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿರುವ ಸ್ಟೋರಿ.  ಸೇವಾ ನಿವೃತ್ತಿಯಾದ ನಂತರ ಬಹುತೇಕರು ವಿಶ್ರಾಂತ ಜೀವನ ಸಾಗಿಸುತ್ತಾರೆ.  ಆದರೆ, ಬಸವನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ವಂದಾಲ ಗ್ರಾಮದ ಬಸಪ್ಪ ಸಿದ್ದಪ್ಪ ಕುಂಬಾರ ಇದಕ್ಕೆ ಅಪವಾದವಾಗಿದ್ದಾರೆ.  ಪಶುವೈದ್ಯಕೀಯ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಇವರು ನಿವೃತ್ತಿಯಾಗಿ 10 ವರ್ಷಗಳ ಬಳಿಕವೂ ಯುವ ರೈತರೂ ನಾಚುವಂತೆ ಕೃಷಿಯಲ್ಲಿ ಸಾಧನೆ ಮಾಡುತ್ತಿದ್ದಾರೆ.

ವಂದಾಲದ ರೈತ ಬಸಪ್ಪ ಸಿದ್ದಪ್ಪ ಕುಂಬಾರ ಬೆಳೆದು ರಾಶಿ ಮಾಡಿರುವ ದಾಳಿಂಬೆ ಹಣ್ಣುಗಳು

ಹೀಗೆ ರಾಶಿ ರಾಶಿ ಹಾಕಲಾಗಿರುವ ದಾಳಿಂಬೆ ಹಣ್ಣುಗಳು.  ಆದಷ್ಟು ಬೇಗ ಪ್ಯಾಕ್ ಮಾಡಿದರಾಯಿತು ಎಂದು ಕೆಲಸಮುಖರಾಗಿರುವ ಕಾರ್ಮಿಕರು.  ಇದು ವಂದಾಲದ ರೈತರ ತೋಟದಲ್ಲಿ ಕಂಡು ಬಂದ ದೃಶ್ಯ.  ಈ ಮಾದರಿ ರೈತ ಪಶುಸಂಗೋಪನೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ 10 ವರ್ಷಗಳ ಹಿಂದೆಯೇ ನಿವೃತ್ತರಾಗಿದ್ದಾರೆ.  ಆದರೆ, ಕಾಲಹರಣ ಮಾಡದೇ ಕೃಷಿಯಲ್ಲಿ ತೊಡಗಿಸಿಕೊಂxಡಿದ್ದಾರೆ. ತಮ್ಮ 10 ಎಕರೆ ತೋಟದಲ್ಲಿ ಈರುಳ್ಳಿ, ಬ್ಯಾಡಗಿ ಮೆಣಸಿನಕಾಯಿ ಬೆಳೆದಿದ್ದಾರೆ.  ಈ 10 ಎಕರೆಯಲ್ಲಿ ಮೂರು ಎಕರೆಯಲ್ಲಿ ದಾಳಿಂಬೆ ಸಸಿ ನೆಟ್ಟು ಈಗ ಯಶಸ್ವಿಯಾಗಿದ್ದಾರೆ.  ಭರಪೂರ ಬೆಳೆಯ ಜೊತೆ ಉತ್ತಮ ಆದಾಯವನ್ನೂ ಕಂಡುಕೊಂಡಿದ್ದಾರೆ.  ಮೊದಲ ಎರಡು ಬಾರಿ ಉತ್ತಮ ಇಳುವರಿ ಬಂದು ಭರಪೂರ ಆದಾಯವೂ ದೊರೆತಿತ್ತು.  ಈ ಬಾರಿ ಪ್ರಕೃತಿ ವಿಕೋಪದ ನಡುವೆಯೂ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಇವರು ತಮ್ಮ ತೋಟದಲ್ಲಿ ಕೇಸರ್ ತಳಿಯ ದಾಳಿಂಬೆ ಬೆಳೆದಿದ್ದಾರೆ.  ಗಾತ್ರ ದೊಡ್ಡದಾಗಿದ್ದು ಕಲರ್ ಸಂಪೂರ್ಣ ಕೆಂಪಗೆ ಇರುವುದರಿಂದ ತಿನ್ನಲು ಹೆಚ್ಚು ರುಚಿಯಾಗಿರುವುದು ಈ ತಳಿಯ ವಿಶೇಷವಾಗಿದೆ.  ಈ ತಳಿಯ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿಯೂ ಬಲು ಬೇಡಿಕೆ ಇದೆ.  ಬ್ಯಾಡಗಿ ಮೆಣಸಿನಕಾಯಿ, ಈರುಳ್ಳಿ ಬೆಳೆಯ ಜತೆಗೆ ಅದಕ್ಕಿಂತಲೂ ಜಾಸ್ತಿ ಲಾಭವನ್ನು ದಾಳಿಂಬೆಯಲ್ಲಿ ಪಡೆಯುತ್ತಿದ್ದಾರೆ.

ನಿವೃತ್ತಿಯ ನಂತರ ಕೃಷಿಯ ಕುರಿತು ಆಸಕ್ತಿ ಬೆಳೆಸಿಕೊಂಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ರೈತರ ಬಸಪ್ಪ ಸಿದ್ದಪ್ಪ ಕುಂಬಾರ, ನಿವೃತ್ತಿಯಾಗಿ 10 ವರ್ಷವಾಗಿದೆ.  ಕೃಷಿ ಕಡೆಗೆ ಆಸಕ್ತಿ ಬಂದಿದೆ.  10 ಎಕರೆ ಜಮೀನಿದೆ.  ಎರಡು ಬೋರ್ ವೆಲ್ ಗಳಿವೆ.  ಐದು ವರ್ಷದ ಹಿಂದೆ ಮೂರು ಎಕರೆ ದಾಳಿಂಬೆ ಕೃಷಿ ಮಾಡಿದ್ದೇನೆ.  700ರಲ್ಲಿ 50 ಗಿಡ ಹಾನಿಯಾಗಿದ್ದು, ಈಗ ಸುಮಾರು 650 ದಾಳಿಂಬೆ ಗಿಡಗಳಿವೆ.  ಮೊದಲನೇ ಸಲ ಎಂಟು ಟನ್ ದಾಳಿಂಬೆ ಇಳುವರಿ ಬಂತು.  ರೂ. 4 ಲಕ್ಷ ಆದಾಯ ಬಂತು.  ಎರಡನೇ ಬಾರಿ 10 ಟನ್ ಇಳುವರಿ ಉತ್ಪಾದನೆಯಾಗಿ ರೂ. 10.20 ಲಕ್ಷ ಆದಾಯ ಬಂದಿದೆ.  ಈ ಬಾರಿ ಪ್ರಕೃತಿ ವಿಕೋಪದಿಂದಾಗಿ ಇಳುವರಿ ಕುಂಠಿತವಾಗಿದೆ.  ಸಮಯಕ್ಕೆ ಸರಿಯಾಗಿ ಮಳೆ ಬರಲಿಲ್ಲ.  ದಾಳಿಂಬೆ ಗಿಡ ಕಾಯಿ ಬಿಡುವ ಸಂದರ್ಭದಲ್ಲಿ ಜಿಟಿಮಳೆ ಬಂದು ಇಳುವರಿಗೆ ಹಿನ್ನೆಡೆಯಾಗಿದೆ.  ಈ ಸಲ ಸುಮಾರು 10 ಟನ್ ಇಳುವರಿ ನಿರೀಕ್ಷೆಯಿದೆ.  ಸುಮಾರು ಏಳೆಂಟು ಲಕ್ಷ ರೂಪಾಟಿ ಆದಾಯ ನಿರೀಕ್ಷೆಯಿದೆ.  ದಾಳಿಂಬೆ ಹಣ್ಣುಗಳನ್ನು ಸ್ಥಳೀಯವಾಗಿಯೇ ಏಜೆಂಟರಿಗೆ ಮಾರಾಟ ಮಾಡುತ್ತಿದ್ದೇನೆ.  ಕಳೆದ ವರ್ಷ ರೂ. 70ಕ್ಕೆ ಕೆಜಿಯಂತೆ ಮಾರಾಟ ಮಾಡಿದ್ದೆ.  ಈ ಬಾರಿ ಪ್ರತಿ ಕೆಜಿ ದಾಳಿಂಬೆ ರೂ. 78ಕ್ಕೆ ಮಾರಾಟವಾಗುತ್ತಿದೆ.

ಇದರ ಜೊತೆಗೆ ಕಳೆದ ಐದು ವರ್ಷಗಳಿಂದ ಮೆಣಸಿನಕಾಯಿ ಕೃಷಿ ಮಾಡಿದ್ದೇನೆ.  ಬ್ಯಾಡಗಿ ತಳಿಯ ಮೆಣಸಿನಕಾಯಿ ಬೆಳೆಯುತ್ತಿದ್ದೇನೆ.  ಮೊದಲ ವರ್ಷ 30 ಟನ್ ಒಣ ಮೆಣಸಿನಕಾಯಿ ಬೆಳೆದಿದ್ದೆ.  ಆದರೆ, ಅಂದು ಬೆಲೆ ಕುಸಿದ ಕಾರಣ ಕೇವಲ ರೂ. 5 ಲಕ್ಷ ಆದಾಯ ಬಂದಿತ್ತು.  ಈಗ ಉತ್ತಮ ಆದಾಯ ಕಂಡುಕೊಂಡಿದ್ದೇನೆ.  ನಿವೃತ್ತಿಯ ನಂತರ ಮನೆಯಲ್ಲಿ ಕುಳಿತಕೊಂಡು, ಅಲ್ಲಿಲ್ಲಿ ಓಡಾಡಿ ಕಾಲಹರಣ ಮಾಡುವುದಕ್ಕಿಂತ ಹೀಗೆ ಅಕ್ಕರೆಯಿಂದ ಭೂತಾಯಿಯ ಸೇವೆ ಮಾಡಿದರೆ ಪ್ರೀತಯ ವರ ನೀಡುತ್ತಾಳೆ ಎಂದು ಅವರು ಹೇಳಿ ಮಾತು ಇತರರಿಗೆ ಸ್ಪೂರ್ತಿಯಾಗಿದೆ.

Leave a Reply

ಹೊಸ ಪೋಸ್ಟ್‌