ವಿಜಯಪುರ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಟೆಂಡರ್ ಗಾತ್ರ ಹಚ್ಚಿಸಿರುವ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಅಹಿಂದ ಮತ್ತು ಕಾಂಗ್ರೆಸ್ ಮುಖಂಡ ಎಸ್. ಎಂ. ಪಾಟೀಲ ಗಣಿಹಾರ ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರದ ಅವಧಿಯಲ್ಲಿ 40 ಪರ್ಸೆಂಟ್ ಕಮಿಷನ್ ಭಾಗವಾಗಿ ನಾನಾ ಟೆಂಡರ್ ಗಳ ಅಂದಾಜು ವೆಚ್ಚವನ್ನು ಹೆಚ್ಚಿಸಲಾಗಿದೆ. ಈ ಹೆಚ್ಚಳಕ್ಕೆ ಏನು ಕಾರಣ? ಯಾವ ದರಕ್ಕೆ ಗುತ್ತಿಗೆ ನೀಡಲಾಗಿದೆ? ಸೇರಿದಂತೆ ಎಲ್ಲ ಅಂಶಗಳ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಹೇಳಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ 40 ಪರ್ಸೆಂಟ್ ಕಮಿಷನ್ ನಿಂದ ಬೇಸತ್ತು ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗೆ ದೂರು ನೀಡಿದ್ದರು. ಇದನ್ನು ಬಿಜೆಪಿ ಮರೆತಂತಿದೆ ಎಂದು ಅವರು ವ್ಯಂಗ್ಯವಾಡಿದರು.
ಈಗ ಕೌಟುಂಬಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಗುತ್ತಿಗೆದಾರ ಎಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಹೆಸರಿನಲ್ಲಿ ಲೈಸನ್ಸ್ ಕೂಡ ಇರಲಿಲ್ಲ. ಆದರೂ ಜನರ ಗಮನ ಬೇರೆ ಕಡೆ ಸೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಮಂಜೂರಾದ ಟೆಂಡರ್ ಬಿಲ್ ಬಿಡುಗಡೆ ಮಾಡಿಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಅವಧಿಯಲ್ಲಿ ಏಕೆ ಟೆಂಡರ್ ಪ್ರಕ್ರಿಯೆ ನಡೆಸಿಲ್ಲ? ಅವರು ಪ್ರಶ್ನಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷರು ರಾಜ್ಯ ಸರಕಾರದ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ಕೇವಲ ಬಿಲ್ ಪಾವತಿ ಮಾಡುವಂತೆ ಆಗ್ರಹಿಸಿದ್ದಾರೆ. ಕಮೀಷನ್ ಕೇಳುವ ಚಟ ಹೊಂದಿರುವ ಬಿಜೆಪಿ ದುರುದ್ದೇಶದಿಂದಾಗಿ ಕಾಂಗ್ರೆಸ್ ಮುಖಂಡರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ. ನಮ್ಮ ಸರಕಾರದಲ್ಲಿ ಈಗ ಯಾವ ಹಗರಣವೂ ನಡೆದಿಲ್ಲ. ಉತ್ತಮ ಆಡಳಿತ ನೀಡಲಾಗುತ್ತಿದೆ. ನಮ್ಮದು ಝೀರೋ ಪರ್ಸೆಂಟ್ ಕಮೀಷನ್ ಸರಕಾರ ಎಂದು ಅವರು ಹೇಳಿದರು.
ಕಾಂಗ್ರೆಸ್ ಚುನಾವಣೆಗೂ ಮುಂಚೆ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಈಗ ಅನುಷ್ಠಾನ ಮಾಡಲಾಗುತ್ತಿದೆ. ಇದರಿಂದ ನಾಡಿನ ಜನತೆ ಸಂತಸದಿಂದಿದ್ದಾರೆ. ಇದನ್ನು ಸಹಿಸದೇ ಬಿಜೆಪಿ ಹತಾಶವಾಗಿದೆ ಎಂದು ಎಸ್. ಎಂ. ಪಾಟೀಲ ಗಣಿಹಾರ ಹೇಳಿದರು.
ವಿಜಯಪುರ ನಗರ ಶಾಸಕರನ್ನು ಹುಡುಕಾಡಬೇಕಿದೆ
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಲ್ಲಿದ್ದಾರೋ ಗೊತ್ತಿಲ್ಲ. ಅವರನ್ನು ಹುಡುಕಾಡಬೇಕಾಗಿದೆ ಎಂದು ವ್ಯಂಗ್ಯವಾಡಿದ ಅವರು, ಕೃಷಿ ಸಚಿವರಿಗೆ ಸಂಬಂಧಿಸಿದಂತೆ ಸುಳ್ಳು ಪತ್ರ ಹರಿದಾಡುತ್ತಿದೆ. ಈಗಾಗಲೇ ಸರಕಾರ ಈ ಪ್ರಕರಣವನ್ನು ಸಿಓಡಿ ತನಿಖೆಗೂ ವಹಿಸಿದೆ. ಇಲಾಖಾ ಅಧಿಕಾರಿಗಳು ಕೂಡ ಈ ಪತ್ರ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಹಿಟ್ಲರ್ ಮಾದರಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ ಎಂದು ಇದೇ ವೇಳೆ ಎಸ್. ಎಂ. ಗಣಿಹಾರ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೋಡೆ ಮತ್ತು ಮುಖಂಡ ಫಯಾಜ್ ಕಲಾದಗಿ ಉಪಸ್ಥಿತರಿದ್ದರು.