ಶ್ರೀ ಹರಳೇಶ್ವರ ಕ್ಷೇತ್ರದಲ್ಲಿ ಗಣದಾಳ ಶ್ರೀಗಳ 11 ದಿನಗಳ ಮೌನಾನುಷ್ಠಾನ ಮುಕ್ತಾಯ

ವಿಜಯಪುರ: ಬಬಲೇಶ್ವರ ತಾಲೂಕಿನ ಶ್ರೀಹರಳೇಶ್ವರ ಸುಕ್ಷೇತ್ರದಲ್ಲಿ ಗುಣದಾಳ ಹಿರೇಮಠದ ಡಾ. ವಿವೇಕಾನಂದ ದೇವರು ಅವರು ಅಧಿಕ ಮಾಸ ಅಂಗವಾಗಿ ಕೈಗೊಂಡಿದ್ದ 11 ದಿನಗಳ ಮೌನ ಅನುಷ್ಠಾನ ಮುಕ್ತಾಯವಾಗಿದೆ.

ಈ ಸಮಾರೋಪ ಸಮಾರಂಭದಲ್ಲಿ ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು ಪಾಲ್ಗೋಂಡು ಮಾತನಾಡಿದರು.  ಇಂದಿನ ದಿನಗಳಲ್ಲಿ ಅನುಷ್ಟಾನ ಜಪ- ತಪಗಳು ಕಡಿಮೆಯಾಗಿ ಟಿವಿ, ಮೊಬೈಲ್ ಬಳಕೆ ಹೆಚ್ಚಾಗಿವೆ.  ಮಹಾಭಾರತದಲ್ಲಿ ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಜೀವನ ಮಾಡಿದ ಶಕ್ತಿಯನ್ನು ಮಗ ದುರ್ಯೋಧನನಿಗೆ ಧಾರೆ ಎರೆದ ಪ್ರಸಂಗವನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿ ಅನುಷ್ಠಾನದ ಮಹತ್ವವನ್ನು ವಿವರಿಸಿದರು.

ಜಂಬಗಿ ಹಿರೇಮಠದ ಶ್ರೀ ಅಡವಿಸಿದ್ದೇಶ್ವರ ಶಿವಾಚಾರ್ಯರು ಮಾತನಾಡಿ, ಈ ಭಾಗದಲ್ಲಿ ಬಸವ ತತ್ವ ಪ್ರಸಾರವಾಗಬೇಕು.  ಶರಣ ಹರಳಯ್ಯನವರ ಈ ಸ್ಥಳ ಐತಿಹಾಸಿಕವಾಗಿದೆ.  ಇಲ್ಲಿ ಅನೇಕ ಜನ ಪೂಜ್ಯರು ಅನುಷ್ಠಾನ ಮಾಡಿದ್ದಾರೆ ಎಂದು ಹೇಳಿದರು.

ಬೀಳಗಿಯ ಗುರುಪಾದ ಶಿವಾಚಾರ್ಯರು ಮಾತನಾಡಿ, ಪುರಾಣ ಪ್ರವಚನ ಮಾಡುತ್ತಾ ಅನುಷ್ಠಾನ ಮಾಡುತ್ತಿರುವುದು ವಿಶೇಷವಾಗಿದೆ.  ಗುಣದಾಳ ಪೂಜ್ಯರ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತರ ಹೃದಯ ಗೆದ್ದು ಲೋಕ ಕಲ್ಯಾಣಕ್ಕಾಗಿ ನಾನಾ ಕಾರ್ಯಕ್ರಮ ಮಾಡಿದ್ದಾರೆ ಎಂದು ಹೇಳಿದರು.

ಶ್ರೀಹರಳೇಶ್ವರ ಸುಕ್ಷೇತ್ರದಲ್ಲಿ ಗುಣದಾಳ ಹಿರೇಮಠದ ಡಾ. ವಿವೇಕಾನಂದ ದೇವರು ಕೈಗೊಂಡಿದ್ದ 11 ದಿನಗಳ ಮೌನ ಅನುಷ್ಠಾನ ಮುಕ್ತಾಯ ಸಮಾರಂಭ ನಡೆಯಿತು

 

ಅನುಷ್ಠಾನ ಕೈಗೊಂಡಿದ್ದ ಡಾ. ವಿವೇಕಾನಂದ ದೇವರು ಮಾತನಾಡಿ, 11 ದಿನ ಅನುಷ್ಠಾನ ಮಾಡಿದ ಅನುಭವ ಹಂಚಿಕೊಂಡರು.  ಅಲ್ಲದೇ, ಹರಳಯ್ಯನ ಚರಿತ್ರೆ ಕುರಿತು ಮಾತನಾಡಿದರು.

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಸಂಖ ಗ್ರಾಮದ ಮಹೇಶ ದೇವರು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಬಾಡಗಿ ಬಕ್ಕಪ್ಪಯ್ಯನ ಮಠದ ಶ್ರೀ ಬಕ್ಕಯ್ಯ ಸ್ವಾಮಿಗಳು, ಹರಳಯ್ಯನ ಗುಂಡದ ಕಾರ್ಯಕಾರಿ ಬಾಪುಗೌಡ ಪಾಟೀಲ ಶೇಗುಣಸಿ, ಕಾಖಂಡಕಿಯ ಉದ್ಯಮಿ ಅಶೋಕ ಶಿವಪ್ಪ ತಿಮಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಗದ್ಯಾಳದ ಗ್ರಾಮದ ದತ್ತ ಮಂಡಳಿ ದಾಸೋಹ ವ್ಯವಸ್ಥೆ ಮಾಡಿದ್ದರು.  ಗುಣದಾಳ .ಗಲಗಲಿ, ಸೇಗುಣಿಸಿ.ಕುಮಠೆ, ಬಬಲೇಶ್ವರ, ಸಾರವಾಡ, ಚಿಕ್ಕ ಪಡಸಲಗಿ ಮತ್ತು ಸುತ್ತ ಮುತ್ತಲಿನ ನಾನಾ ಹಳ್ಳಿಗಳಿಂದ ಹಿರಿಯರು, ಮಹಿಳೆಯರು ಯುವಕರು ಮತ್ತು ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.  ಅಲ್ಲದೇ, ಸುಕ್ಷೇತ್ರದ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ತಂತಮ್ಮ ಮನೆಯಿಂದ ರೊಟ್ಟಿ ಮತ್ತೀತರ ಅಡುಗೆಯನ್ನು ಮಾಡಿಕೊಂಡು ಬುತ್ತಿ ತೆಗೆದುಕೊಂಡು ಬಂದಿದ್ದು ಗಮನ ಸೆಳೆಯಿತು.

Leave a Reply

ಹೊಸ ಪೋಸ್ಟ್‌